ಅಪ್ಪನ ಯಾತ್ರೆಗೆ ಹೆಗಲಾದ ಮಕ್ಕಳು
ಎಸ್ಸೆಸ್ ಅವರ ಎಂಸಿಸಿ ಬಿ ಬ್ಲಾಕ್‌ನ ನಿವಾಸ ‘ಶಿವ-ಪಾರ್ವತಿ’ ಆವರಣದಿಂದ ಮಧ್ಯಾಹ್ನ 12-35ಕ್ಕೆ ಶಿವಶಂಕರಪ್ಪ ಅವರ ಅಂತಿಮ ಯಾತ್ರೆ ಶುರುವಾಯಿತು. ಎಸ್ಸೆಸ್ ಪಾರ್ಥಿವ ಶರೀರದ ಕೈವಲ್ಯಕ್ಕೆ ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಗಲು ನೀಡಿದರು.
ಪಾರ್ಥಿವ ಶರೀರ ಇರಿಸಿದ್ದ, ಪುಷ್ಪಾಲಂಕೃತ ತೆರೆದ ವಾಹನ ನಗರಾದ್ಯಂತ ಸಂಚರಿಸಿತು. ಕಿತ್ತೂರು ಚನ್ನಮ್ಮ ವೃತ್ತ, ಮದಕರಿನಾಯಕ ವೃತ್ತ, ಹಳೇಪೇಟೆ, ಹಗೇದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ವೆಂಕಾಭೋವಿ ವೃತ್ತದ ಮೂಲಕ ಕಲ್ಲೇಶ್ವರ ರೈಸ್‌ಮಿಲ್‌ವರೆಗೆ ಸುಮಾರು 4 ಕಿಮೀವರೆಗೆ ಯಾತ್ರೆ ಸಾಗಿತು. ಸಹಸ್ರಾರು ಜನರು ಇದಕ್ಕೆ ಸಾಕ್ಷಿಯಾದರು. ಮಾರ್ಗದುದ್ದಕ್ಕೂ ಸಾರ್ವಜನಿಕರು ಪಾರ್ಥಿವ ಶರೀರದತ್ತ ಹೂಮಳೆಗರೆದರು. ಎಸ್ಸೆಸ್ ಅವರ ಸಂಸ್ಥೆಗಳ ಕಾರ್ಮಿಕರು, ಸಹಾಯ ಪಡೆದವರು ಎಸ್ಸೆಸ್ ಅವರ ನಾನಾ ಗುಣಗಳ ಬಗ್ಗೆ ಮೆಲುಕು ಹಾಕಿದರು.
ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್, ಎಸ್.ಎಸ್.ಬಕ್ಕೇಶ್, ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ತೆರೆದ ವಾಹನದಲ್ಲಿ ಸಾಗಿದ್ದಲ್ಲದೇ ಎಸ್ಸೆಸ್ ಅಭಿಮಾನಿಗಳತ್ತ ಕೈಬೀಸಿದರು. ಶಾಸಕ ಕೆ.ಎಸ್. ಬಸವಂತಪ್ಪ ಭಜನಾ ತಂಡದ ಜತೆಗಿದ್ದು ತಾಳ ಹಾಕಿದರು. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕಾಳಿಕಾದೇವಿ ರಸ್ತೆ ಬಳಿ ಜವಳಿ ವರ್ತಕ ಬಿ.ಸಿ. ಉಮಾಪತಿ ಹಾಗೂ ಅವರ ಸಹೋದರರು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
ದಾರಿಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು ಹೂಮಾಲೆ ಹಾಕಿ ನಮನ ಸಲ್ಲಿಸಿದರು. ಇದ್ದಲ್ಲಿಂದಲೇ ಕೈಮುಗಿದು ಅಂತಿಮ ವಿದಾಯ ಹೇಳಿದರು. ಕೆಲವರ ಕಣ್ಣಾಲಿ ತುಂಬಿ ಬಂದವು. ಅಲ್ಲಲ್ಲಿ ಸಿಡಿಮದ್ದು ಸಿಡಿಸಲಾಯಿತು. ಯಾತ್ರೆ ಮಾರ್ಗದಲ್ಲಿ ಅಲ್ಲಲ್ಲಿ ಜ್ಯುವೆಲರಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಎಸ್ಸೆಸ್ ಅವರ ನಿವಾಸ, ಹೈಸ್ಕೂಲ್ ಮೈದಾನ, ಕಲ್ಲೇಶ್ವರ ಮಿಲ್ ಮೂರೂ ಕಡೆಗಳಲ್ಲಿ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.