ಬರಿದಾಗುತ್ತಿವೆ ಜಿಲ್ಲೆಯ ಜಲಪಾತ್ರೆಗಳು

ಟಿವಿ ಸ್ಟೇಷನ್ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
ಟಿವಿ ಸ್ಟೇಷನ್ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆ ಕೊರತೆಯಿಂದ ಕೆರೆ ಕಟ್ಟೆಗಳು ಖಾಲಿ
  • ಅಂತರ್ಜಲ ಮಟ್ಟ ಕುಸಿತ
ದಾವಣಗೆರೆ : ಜಿಲ್ಲೆಯ ಜಲಮೂಲಗಳಾದ ಕೆರೆ ಕಟ್ಟೆಗಳು ಮಳೆಯ ಕೊರತೆಯಿಂದ ಬರಿದಾಗುತ್ತಿವೆ. ನೀರಾವರಿ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 82, ಭಾರೀ ನೀರಾವರಿ ಇಲಾಖೆಯ 35 ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 399 ಕೆರೆಗಳಿವೆ. ಕಳೆದ ವರ್ಷ ಇಷ್ಟು ಹೊತ್ತಿಗೆ ಒಳ್ಳೆಯ ಮಳೆಯಾಗಿ ಕೆರೆ ಕಟ್ಟೆಗಳು ಮೈದುಂಬಿಕೊಂಡಿದ್ದವು. ಪ್ರಸ್ತುತ ಅವುಗಳಲ್ಲಿ ಶೇ. 30ರಿಂದ 50ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಹಲವು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 82 ಕೆರೆಗಳಿವೆ. ಅವುಗಳಲ್ಲಿ 22ರಲ್ಲಿ ನೀರೇ ಇಲ್ಲ. 40 ಕೆರೆಗಳಲ್ಲಿ ಕೇವಲ ಶೇ. 1ರಿಂದ 30ರಷ್ಟು ನೀರಿದೆ. 14 ಕೆರೆಗಳಲ್ಲಿ ಶೇ. 31ರಿಂದ 50ರಷ್ಟು, 6 ಕೆರೆಗಳಲ್ಲಿ ಮಾತ್ರ ಶೇ. 55ರಿಂದ 99ರಷ್ಟು ಜಲ ಸಂಗ್ರಹವಿದೆ. ಯಾವ ಕೆರೆಗಳೂ ಪೂರ್ಣ ತುಂಬಿಲ್ಲ.
ಈ ಕೆರೆಗಳ ನೀರಿನ ಗರಿಷ್ಠ ಸಾಮರ್ಥ್ಯ 5.119 ಟಿಎಂಸಿ ಇದೆ, ಆದರೆ ಪ್ರಸ್ತುತ 1.924 ಟಿಎಂಸಿ ಮಾತ್ರ ನೀರಿದೆ. ಈ ಕೆರೆಗಳ ವ್ಯಾಪ್ತಿಯಲ್ಲಿ 8814.19 ಹೆ. ಅಚ್ಚುಕಟ್ಟು ಪ್ರದೇಶವಿದೆ.
ಭಾರೀ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 35 ಕೆರೆಗಳಿವೆ. ಇವೆಲ್ಲವೂ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲೇ ಬರುತ್ತವೆ. ಏಷ್ಯಾದ ಎರಡನೇ ಅತಿದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ಶೇ. 50ರಷ್ಟು ಮಾತ್ರ ನೀರಿದೆ. ಈ ಕೆರೆಯ ಸಾಮರ್ಥ್ಯ 2.6 ಟಿಎಂಸಿ ಇದೆ, ಆದರೆ 1.5 ಟಿಎಂಸಿ ಮಾತ್ರ ನೀರಿನ ಸಂಗ್ರಹವಿದೆ. 2891 ಹೆ. ಇದರ ಅಚ್ಚುಕಟ್ಟು ಪ್ರದೇಶವಿದೆ.
ಸಾಸ್ವೆಹಳ್ಳಿ, ಉಬ್ರಾಣಿ, ರಾಜನಹಳ್ಳಿ, ಜಗಳೂರು ತಾಲೂಕಿನ ಕೆರೆ ತುಂಬಿಸುವ ಯೋಜನೆಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ ಕೆರೆಗಳಿಗೆ ಒಂದಿಷ್ಟು ನೀರು ಹರಿದಿದ್ದು ಬಿಟ್ಟರೆ ಉಳಿದ ಕೆರೆಗಳು ಮಳೆಗಾಗಿ ಬಾಯ್ದೆರೆದು ಕುಳಿತಿವೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 399 ಕೆರೆಗಳಿವೆ. ಅವುಗಳಲ್ಲಿ 67 ಕೆರೆಗಳು ಖಾಲಿಯಾಗಿವೆ. 170 ಕೆರೆಗಳಲ್ಲಿ ಶೇ. 30ರಷ್ಟು ನೀರಿದೆ. 103 ಕೆರೆಗಳಲ್ಲಿ ಶೇ. 30ರಿಂದ 50ರಷ್ಟು, 51 ಕೆರೆಗಳಲಿ ಶೇ. 50-75ರಷ್ಟು ನೀರಿದೆ.

ದಾವಣಗೆರೆಗೂ ಎಚ್ಚರಿಕೆ ಗಂಟೆ

ನಗರದ ಪ್ರಮುಖ ಜಲ ಮೂಲಗಳಾದ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡ ಕೆರೆಗಳಲ್ಲೂ ನೀರಿನ ಸಂಗ್ರಹ ಕ್ರಮೇಣ ಕಡಿಮೆಯಾಗುತ್ತಿದೆ. ಭದ್ರಾ ಜಲಾಶಯ ತುಂಬದಿದ್ದರೆ ಮುಂಬರುವ ದಿನಗಳಲ್ಲಿ ಸಂಕಷ್ಟ ಎದುರಾಗಬಹುದು.
ಇಪ್ಪತ್ತು ವಾರ್ಡ್‌ಗಳಿಗೆ ನೀರು ಪೂರೈಸುವ ಟಿವಿ ಸ್ಟೇಷನ್ ಕೆರೆ 98 ಎಕರೆ ವಿಸ್ತೀರ್ಣ ಹೊಂದಿದೆ. ಭದ್ರಾ ನಾಲೆಯ ಮೂಲಕ ಬರುವ ನೀರೇ ಇದಕ್ಕೆ ಜಲ ಮೂಲವಾಗಿದೆ. 1800 ದಶಲಕ್ಷ ಲೀಟರ್ ಸಾಮರ್ಥ್ಯದ ಈ ಕೆರೆಯಲ್ಲಿ ಪ್ರಸ್ತುತ 750 ಮಿಲಿಯನ್ ಲೀಟರ್ ಮಾತ್ರ ಸಂಗ್ರಹವಿದೆ. ಆಗಸ್ಟ್ ತಿಂಗಳು ಮುಗಿಯುವ ವರೆಗೆ ನಿಭಾಯಿಸಬಹುದಷ್ಟೇ.
ಕುಂದುವಾಡ ಕೆರೆ 254 ಎಕರೆ ವಿಸ್ತೀರ್ಣವಿದ್ದು 2400 ದಶಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ, ಪ್ರಸ್ತುತ 1400 ದಶಲಕ್ಷ ಲೀಟರ್ ಸಂಗ್ರಹವಿದೆ. ಭದ್ರಾ ಮತ್ತು ತುಂಗಭದ್ರಾ ಎರಡರಿಂದಲೂ ಈ ಕೆರೆಗೆ ನೀರು ಪೂರೈಕೆಯಾಗುತ್ತದೆ. ಸದ್ಯಕ್ಕೆ ಭದ್ರಾ ನಾಲೆಯಲ್ಲಿ ನೀರಿಲ್ಲ, ತುಂಗಭದ್ರಾ ನದಿಯಿಂದ ದಿನಕ್ಕೆ 15 ದಶಲಕ್ಷ ಲೀಟರ್ ಪಡೆಯಲಾಗುತ್ತಿದೆ. ಸೆಪ್ಟೆಂಬರ್‌ವರೆಗೂ ತೊಂದರೆ ಇಲ್ಲ.

46 ಕೆರೆಗಳ ಒತ್ತುವರಿ

ಜಿಲ್ಲೆಯಲ್ಲಿ 46 ಕೆರೆಗಳು ಒತ್ತುವರಿಯಾಗಿದ್ದು ಅವುಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಗ್ಗಿದೆ. ಒತ್ತುವರಿ ತೆರವುಗೊಳಿಸುವ ಮೂಲಕ ಕೆರೆಗಳ ವಿಸ್ತೀರ್ಣವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಸ್ವಯಂ ಪ್ರೇರಿತವಾಗಿ ಒತ್ತುವರಿ ತೆರವು ಮಾಡಬೇಕು ಎನ್ನುತ್ತಾರೆ ರೈತ ಮುಖಂಡ ಬಲ್ಲೂರು ರವಿಕುಮಾರ್.
ಕೆರೆಗಳ ಹೂಳು ತೆಗೆಯುವ ಮೂಲಕ ಅವುಗಳ ಸಮಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಹಳ್ಳ, ತೊರೆಯಂಥ ನೀರಿನ ಮೂಲಗಳನ್ನು ಹುಡುಕಬೇಕು. ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರನ್ನು ಹಿಡಿದಿಡುವ ಕೆಲಸವಾಗಬೇಕು. ಅದರಿಂದ ಅಂತರ್ಜಲ ವೃದ್ಧಿಯಾಗುತ್ತದೆ.
ಇಂಥ ಕೆಲಸಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು. ಮಳೆನೀರು ಕೊಯ್ಲು, ಗಿಡ ನೆಡುವುದು ಮುಂತಾದ ಪರಿಸರಸ್ನೇಹಿ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net