ನಂದಿಗುಡಿ ಮಠದ ಅಭಿವೃದ್ಧಿಯೇ ನಮ್ಮ ಏಕೈಕ ಗುರಿ

ನೊಳಂಬ ವೀರಶೈವ ಸಮಾಜದ ಸಮಾನ ಮನಸ್ಕರ ಸಭೆ
Nolamba
ಹತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷ ಜಿ. ರುದ್ರೇಗೌಡ ಮಾತನಾಡಿದರು. ಅಶೋಕ್ ವಿ. ಪಾಳೇದ್, ಇಂದೂಧರ್, ರುದ್ರೇಗೌಡ, ಭೂಕಾಂತಪ್ಪ ಇದ್ದರು.Nolamba
Published on: 

ಹೊನ್ನಾಳಿ: ನಂದಿಗುಡಿ ಋಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಅಭಿವೃದ್ಧಿ ಒಂದೇ ನಮ್ಮ ಗುರಿಯಾಗಿದ್ದು, ನಾವು ಯಾರ ವಿರುದ್ಧವೂ ಇಲ್ಲ, ಪರವಾಗಿಯೂ ಇಲ್ಲ ಎಂದು ಸೋಮವಾರ ತಾಲೂಕಿನ ಹತ್ತೂರು ಗ್ರಾಮದಲ್ಲಿ ಆಯೋಜಿಸಿದ್ದ ನೊಳಂಬ ವೀರಶೈವ ಸಮಾಜದ ಸಮಾನ ಮನಸ್ಕರ ಸಭೆ ಘೋಷಣೆ ಮಾಡಿತು.

ನಂದಿಗುಡಿ ಮಠದ ಅಭಿವೃದ್ಧಿಗೆ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಆದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುತ್ತಿಲ್ಲ. ನಮ್ಮ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತಿಲ್ಲ. ಆದರೂ ನಾವು ನಂದಿಗುಡಿ ಮಠದ ಅಭಿವೃದ್ಧಿ ಪರವಾ ಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ನಂದಿಗುಡಿ ಬೃಹನ್ಮಠದ ಆಡಳಿತವನ್ನು ಟ್ರಸ್ಟ್‌ನಲ್ಲಿರುವ ಕೆಲವೇ ಮಂದಿ ನಿರ್ವಹಣೆ ಮಾಡುತ್ತಿದ್ದು, ಇದು ಶ್ರೀಮಠದ ಹಿನ್ನಡೆಗೆ ಮುಖ್ಯ ಕಾರಣವಾಗಿದೆ ಎಂದು ನೊಳಂಬ ವೀರಶೈವ ಸಂಘದ ಕೇಂದ್ರ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಿ. ರುದ್ರೇಗೌಡ ಆರೋಪಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೊಳಂಬ ವೀರಶೈವ ಸಂಘದ ನೂರಾರು ಮುಖಂಡರು ನಂದಿಗುಡಿ ಮಠದ ಉಳಿವಿಗಾಗಿ ನಮ್ಮನ್ನು ಸಂಪರ್ಕಿಸಿ ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಹರಿಹರದ ವಕೀಲರಾದ ನಾಗನಗೌಡ ಹಾಗೂ ಹಲವು ಮುಖಂಡರೊಂದಿಗೆ ಆ.13ರಂದು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದ್ದೆವು ಎಂದರು.

ಮಠದ ಟ್ರಸ್ಟ್ ಕ್ರಿಯಾಶೀಲವಾಗಿಲ್ಲ, ಭಕ್ತರಿಗೆ ಲೆಕ್ಕಪತ್ರ ನೀಡುತ್ತಿಲ್ಲ ಹಾಗೂ ಮಠದ ಆಸ್ತಿ ಕಟ್ಟಡಗಳನ್ನು ನೆಲಸಮಗೊಳಿಸಲು ಕೋರ್ಟ್ ಆದೇಶಿಸಿದೆ ಎಂಬ ವಿಷಯಗಳನ್ನು ಸ್ವಾಮೀಜಿ ಬಳಿ ಪ್ರಸ್ತಾಪಿಸಿದಾಗ ಅ.31ರಂದು ಸಭೆ ಕರೆದು ಲೆಕ್ಕಪತ್ರ ಮಂಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅಂದು ಹೇಳಿದಂತೆ ಸಭೆಯನ್ನೂ ಕರೆಯಲಿಲ್ಲ, ಲೆಕ್ಕಪತ್ರವನ್ನೂ ನೀಡಲಿಲ್ಲ. ಹೀಗಾಗಿ ಶಿವಮೊಗ್ಗ, ಹಾವೇರಿ, ಹರಿಹರ ಹಾಗೂ ದಾವಣಗೆರೆ ಭಾಗದ ಮುಖಂಡರ ತುರ್ತು ಸಭೆ ಕರೆಯಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸಮಿತಿಯ ನಿರ್ದೇಶಕರಾದ ಶಿವಮೊಗ್ಗದ ಭೂಕಾಂತಪ್ಪ, ಸಿದ್ದೇಶ್ ಕತ್ತಿಗೆ, ಹಾವೇರಿ ಜಿಲ್ಲೆಯ ಸುರೇಶ್ ಹುಚ್ಚಪ್ಪ, ಸಿ. ಮಹೇಶ್ವರಪ್ಪ, ಧಾರವಾಡದ ಹುತ್ತೇಶ್, ನಂದಿತಾವರೆಯ ತಿಮ್ಮನಗೌಡ ಇತರರಿದ್ದರು.

ಶ್ರೀಮಠ ಉಳಿಯಬೇಕು

ನಮ್ಮ ಸಮಾಜದ ಪುಷ್ಪಗಿರಿ ಮಠದ ಶ್ರೀಗಳು ಹಾಸನದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುತ್ತಿದ್ದು, ಮಠದ ಅಭಿವೃದ್ಧಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತಾರೆ. ಆದರೆ ನಮ್ಮ ಮೂಲ ಮಠದ ಸ್ವಾಮೀಜಿ ಇಂತಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂದು ನಾಗೇಂದ್ರಪ್ಪ ಮೇಸ್ಟ್ರು ಬೇಸರ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲಾ ನೊಳಂಬ ವೀರಶೈವ ಸಂಘದ ಅಧ್ಯಕ್ಷ ಅಶೋಕ್ ವಿ. ಪಾಳೇದ್, ಹರಿಹರದ ಇಂದೂಧರ್ ಹಾಗೂ ಕುಕ್ಕವಾಡದ ರುದ್ರೇಗೌಡ ಮಾತನಾಡಿ, ಸ್ವಾಮೀಜಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಮಠದ ಬೆಲೆಬಾಳುವ ಆಸ್ತಿಯನ್ನು ಉಳಿಸಿಕೊಳ್ಳಲು ಹಾಗೂ ಅಭಿವೃದ್ಧಿಪಡಿಸಲು ಟ್ರಸ್ಟ್ ಆಸಕ್ತಿ ತೋರಿಸುತ್ತಿಲ್ಲ. ಮಠಕ್ಕೆ ಸರ್ಕಾರದಿಂದ ಅನುದಾನ ತರುವ ಸಾಮರ್ಥ್ಯ ನಮಗಿದ್ದರೂ, ಸ್ವಾಮೀಜಿಯಾಗಲಿ ಅಥವಾ ಟ್ರಸ್ಟ್ ಪದಾಧಿಕಾರಿಗಳಾಗಲಿ ಮುಂದೆ ಬರುತ್ತಿಲ್ಲ ಎಂದರು.