ಗೋವು ನಾನಾ ಉದ್ಯೋಗಗಳ ಹೆಬ್ಬಾಗಿಲು

 ಹಿರೇತೊಗಲೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಯವ ರೈತರ ಸಮ್ಮೇಳನದಲ್ಲಿ ಕೊಲ್ಲಾಪುರದ ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಗೋವನ್ನು ಪೂಜಿಸಿದರು.
ಹಿರೇತೊಗಲೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಯವ ರೈತರ ಸಮ್ಮೇಳನದಲ್ಲಿ ಕೊಲ್ಲಾಪುರದ ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಗೋವನ್ನು ಪೂಜಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಸುವನ್ನು ಹೊರದಬ್ಬಿದವರು ಸುಖವಾಗಿಲ್ಲ
  • ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಭಿಮತ
  • ಹಿರೇತೊಗಲೇರಿಯಲ್ಲಿ ಸಾವಯವ ರೈತರ ಸಮ್ಮೇಳನ
ದಾವಣಗೆರೆ: ಗೋವು, ಕೃಷಿಗೆ ಸೀಮಿತವಾಗದೆ ಧರ್ಮ ಕ್ಷೇತ್ರ, ಚಿಕಿತ್ಸಾ ಕ್ರಮದಲ್ಲೂ ಮಹತ್ವ ಪಡೆದಿದೆ. ಹಸುವಿನ ಮೂಲಕ ನಾನಾ ಉದ್ಯೋಗದ ದಾರಿ ಕಂಡುಕೊಳ್ಳಬಹುದು ಎಂದು ಕೊಲ್ಲಾಪುರದ ಕನ್ಹೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ತಾಲೂಕಿನ ಹಿರೇತೊಗಲೇರಿ ಗ್ರಾಮದ ಶ್ರೀಮತಿ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದಲ್ಲಿ ಸೋಮವಾರ, ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕ, ದಾವಣಗೆರೆ ಸಾವಯವ ರೈತರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾವಯವ ರೈತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗಣಪತಿ ಹಬ್ಬದಲ್ಲಿ 25 ಸಾವಿರ ಕೋಟಿ ರೂ. ಮೊತ್ತದಷ್ಟು ಗಣಪತಿ ಮೂರ್ತಿ, ಅಲಂಕಾರಿಕ ವಸ್ತುಗಳು ಖರ್ಚಾಗಲಿವೆ. ದಂತ ಮಂಜನ, ಕಾಗದ ಕಾರ್ಖಾನೆ ಆರಂಭಿಸಬಹುದು. ಸಗಣಿಯಿಂದ ಸಾಬೂನು, ಟೂತ್‌ಪೇಸ್ಟ್, ಮಾಲೆಗಳ ತಯಾರಿ, ಆಸನ, ಮೊಬೈಲ್ ಚಿಪ್, ಬೆರಣಿ ಉದ್ಯಮವನ್ನೇ ನಡೆಸಲು ಅವಕಾಶವಿದೆ ಎಂದರು.
ಎರಡು ಬರಡು ಹಸುಗಳಿದ್ದರೂ ಒಂದು ಪರಿವಾರ ಆರಾಮದಾಯಕ ಜೀವನ ನಡೆಸಬಹುದು. ಸಗಣಿ ಎಂಬುದು ಸಂಸ್ಕೃತಿ. 1 ಗ್ರಾಂ ಸಗಣಿಯಲ್ಲಿ 300 ಕೋಟಿ ಜೀವಾಣುಗಳಿವೆ. ಕಸ ತಿಂದು ಹೊಸ ಜೀವಾಣು ಸೃಷ್ಟಿಸಿದ ಸಾಮರಸ್ಯ ಸಾಮರ್ಥ್ಯ ಈ ಸಂಸ್ಕೃತಿಗಿದೆ. ಬೆರಣಿಗಳನ್ನು ತಯಾರಿಸಿ ನಿಯಮಿತವಾಗಿ ಒಣಗಿಸಿ ಯೂಮಿಕ್ ಆಸಿಡ್ ತಯಾರಿಸಿ 20 ಸಾವಿರ ರೂ. ಸಂಪಾದನೆ ಮಾಡಬಹುದು ಎಂದರು.
ಭೂಮಿಯಲ್ಲಿನ ಸಾರಜನಕ, ರಂಜಕವನ್ನು ದ್ವಿಗುಣೀಕರಿಸುವ ಶಕ್ತಿ ಗೋಮೂತ್ರದಲ್ಲಿದೆ. ಸಗಣಿಯಿಂದ ಘನ ಜೀವಾಮೃತ ತಯಾರಿಸಲೂ ಬಹುದು. ಸಗಣಿ ಒಗಣಿಸಿ ಪೌಡರ್ ಮಾಡಿ ಗೋ ಕೃಪಾಮೃತದೊಂದಿಗೆ ನಿಯಮಿತವಾಗಿ ಕೆಲ ತಿಂಗಳು ಕಾಲ ಇರಿಸಿದರೆ ಮಾರುಕಟ್ಟೆ ಗೊಬ್ಬರಕ್ಕೆ ಸಮವಿಲ್ಲದಷ್ಟು ಶಕ್ತಿ ನೀಡಲಿದೆ. ಅಲ್ಲದೆ ಭೂಮಿಯಲ್ಲಿ ಎರೆಹುಳುಗಳನ್ನು ನಿರ್ಮಾಣ ಮಾಡಲಿವೆ.
ಈ ಎರೆಹುಳುಗಳು ಭೂಮಿ ಛಿದ್ರಗೊಳಿಸುವುದರಿಂದ ಭೂಮಿಯ ಮೇಲ್ಮೈ ಮೂಲಕ ಜೀವಾಣುಗಳಿಗೆ ಆಮ್ಲಜನಕ ರವಾನೆಯಾಗಲಿದೆ. ನೀರು ಹಿಂಗಲಿದೆ. ಭೂಮಿಯಿಂದ 5ರಿಂದ 6 ಇಂಚಿನವರೆಗೆ ಬೇಸಾಯ ಮಾಡಬೇಕು. ಜೀವಾಣು ವಸಾಹತುಗಳನ್ನು ರೈತರು ನಾಶ ಪಡಿಸಬಾರದು ಎಂದರು.
ಮಾನವ ಲೌಕಿಕ ಜೀವನದಲ್ಲಿ ಗೋವನ್ನು ಕೇಂದ್ರ ಸ್ಥಾನದಲ್ಲಿಟ್ಟು ಬಂದಿದ್ದ. ಕಳೆದ 50 ವರ್ಷದಲ್ಲಿ ಹೆಚ್ಚು ಹಾಲು ಕೊಡುವ ಹಸುಗಳನ್ನು ನಂಬಿದ್ದರಿಂದಲೇ ಗೋಶಾಲೆಗಳು ಹೆಚ್ಚುತ್ತಿವೆ. ಹಸುವನ್ನು, ಪಾಲಕರನ್ನು ಹೊರಗೆ ಹಾಕಿದವರು ಯಾವ ದೇಶದಲ್ಲೂ ಸುಖವಾಗಿಲ್ಲ. ಹಳ್ಳಿಗಳಲ್ಲಿ ಗೋವಿನ ಹಿಂದಿರುವ ಮನುಷ್ಯ, ಶೆಹರಗಳಲ್ಲಿ ನಾಯಿ ಹಿಂದೆ ಇರುವ ಬದಲಿ ಸಂಸ್ಕೃತಿಗಳನ್ನು ಕಾಣುತ್ತಿದ್ದೇವೆ ಎಂದು ವಿಷಾದಿಸಿದರು.
ಕೃಷಿಕರು ಇಂದು ಏನನ್ನು ಕಳೆದುಕೊಂಡಿದ್ದೇವೆ, ಉಳಿಸಿಕೊಂಡಿದ್ದೇವೆ ಎಂಬ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಬೇಕು ಎಂದ ಸ್ವಾಮೀಜಿ, ಹೊಲಗಳ ಮಣ್ಣು ಪೈಲ್ವಾನರಂತೆ ಶಕ್ತಿಶಾಲಿಯಾಗಬೇಕು. ಆಗ ಮಣ್ಣಿನಲ್ಲಿ ಇಂಗಾಲ, ಖನಿಜಾಂಶ, ಜೀವಾಂಶ ಹೆಚ್ಚಲಿದೆ. ಯಾವುದೇ ಬೆಳೆಗಳ ಹಿನ್ನೆಲೆಯಲ್ಲಿ ಭೂಮಿ ಸುಧಾರಣೆ ಆಗಬೇಕು. ಇದಕ್ಕೆ ಹಸುಗಳು ಅನಿವಾರ್ಯ ಎಂದೂ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ನಂದೀಪುರದ ಡಾ. ಮಹೇಶ್ವರ ಸ್ವಾಮೀಜಿ, ಅಡವಿಹಳ್ಳಿಯ ಹಾಲಗಂಗಾಧರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವಿಜ್ಞಾನಿ ಬಿ.ಎಂ. ನಾಗಭೂಷಣ, ಸಾಯಿಲ್ ಟ್ರಸ್ಟ್‌ನ ಮಾರುತಿರಾವ್, ಸ್ವದೇಶಿ ಗೋರಕ್ಷಕ ರಘು, ಕಾರ್ಯಕ್ರಮ ಆಯೋಜಕರಾದ ರಾಜೇಂದ್ರ ಗೋಪನಾಳ್,ಚಂದ್ರಶೇಖರ್, ಮಂಜಪ್ಪ, ಜಿ.ಡಿ. ಬಸವರಾಜಪ್ಪ ಇತರರಿದ್ದರು.

3 ಹಕ್ಕೊತ್ತಾಯಗಳ ಮಂಡನೆ

ಸಮ್ಮೇಳನದಲ್ಲಿ ಒಟ್ಟು 3 ಪ್ರಮುಖ ಹಕ್ಕೊತ್ತಾಯಗಳನ್ನು ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಪ್ರಕಾಶ್ ನೇರ್ಲಿಗೆ ಮಂಡಿಸಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ರಸಗೊಬ್ಬರಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿದ್ದು, ಇದಕ್ಕಾಗಿ ಪ್ರತಿವರ್ಷ ರಸಗೊಬ್ಬರ ಉತ್ಪಾದಕ ಕಂಪನಿಗಳಿಗೆ 2.25 ಲಕ್ಷ ಕೋಟಿ ರೂ. ನೀಡುತ್ತಿದೆ. ಇದರಿಂದ ಸರ್ಕಾರಕ್ಕೆ ಹೊರೆಯಾಗುವ ಜತೆಗೆ ಕೃಷಿಭೂಮಿ ಅನಾರೋಗ್ಯಕ್ಕೀಡಾಗುತ್ತಿದೆ. ಸುಸ್ಥಿರ ಹಾಗೂ ವಿಷಮುಕ್ತ ಕೃಷಿಗೆ ಪ್ರೋತ್ಸಾಹಿಸಲು ಸಬ್ಸಿಡಿ ನೀತಿ ಮರು ಪರಿಶೀಲಿಸಬೇಕು.
ಮಳೆಯಾಶ್ರಿತ ಹಾಗೂ ನೀರಾವರಿ ವ್ಯವಸ್ಥೆಯಡಿ ಸಾವಯವ ರೈತರು 5ರಿಂದ 9 ಚೀಲ ರಸಗೊಬ್ಬರ ಬಳಕೆ ನಿಲ್ಲಿಸಿದ್ದಾರೆ. ಇದರಿಂದ ಉಳಿತಾಯವಾಗುವ 8750 ರೂ, 10680 ರೂ.ಗಳ ಸಬ್ಸಿಡಿ ಮೊತ್ತವನ್ನು ಕಾಲಮಿತಿಯಲ್ಲಿ ಸಾವಯವ ರೈತರಿಗೆ ಪ್ರೋತ್ಸಾಹ ರೂಪದಲ್ಲಿ ನೇರವಾಗಿ ವರ್ಗಾಯಿಸಬೇಕು.
ಸಾವಯವ ಕೃಷಿಕರ ಸಂಖ್ಯೆ ಹೆಚ್ಚಿದಂತೆ ಹವಾಮಾನ ಬದಲಾವಣೆ, ರಸಗೊಬ್ಬರ ಅವಲಂಬನೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಆಹಾರ ವಿಷಮುಕ್ತವಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ. ಸಾವಯವ ಕೃಷಿಗೆ ಸರ್ಕಾರ ಒತ್ತು ನೀಡಿದಲ್ಲಿ, ಜಾಗತಿಕ ಮಟ್ಟದಲ್ಲಿ ಸಂಭವಿಸಿದ ರಾಸಾಯನಿಕ ಗೊಬ್ಬರಗಳ ಕೊರತೆಯ ಆತಂಕ ಎದುರಿಸಬಹುದು.
ಪ್ರಾತ್ಯಕ್ಷಿಕೆಗಳ ಪ್ರದರ್ಶನ
ಗೋಮೂತ್ರ, ಜೀವಾಮೃತದ ಜತೆಗೆ ಇತರೆ ವಸ್ತುಗಳನ್ನು ಸೇರ್ಪಡೆ ಮಾಡಿ ಯೂರಿಯಾ, ರಂಜಕ ಇತರೆ ನೈಸರ್ಗಿಕ ಗೊಬ್ಬರ ತಯಾರಿಸುವ ಬಗೆಗಳ ಕುರಿತಂತೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಹಸುವಿನ ಉತ್ಪನ್ನಗಳಿಂದ ತಯಾರಾದ ಕೀಚೈನ್, ಆಭರಣ, ಗಡಿಯಾರ, ಮೊಬೈಲ್ ಸ್ಟಾೃಂಡ್, ಪ್ರಣತಿ, ತೋರಣ, ಜಪಮಾಲೆ, ರಾಖಿ, ಸಾಬೂನು, ದಂತ ಮಂಜನ, ಶಾಂಪೂ, ನೋವು ನಿವಾರಕ ಇತ್ಯಾದಿಗಳನ್ನು ಪ್ರದರ್ಶಿಸಿದರು.
ಹೊರಗೆ ಗೋ ಉತ್ಪನ್ನಗಳು, ಸಾವಯವ ಕೃಷಿ ಕುರಿತಾದ ಪುಸ್ತಕಗಳು ಮಾರಾಟವಾದವು. ಸಮ್ಮೇಳನದ ಕೊನೆಯಲ್ಲಿ ರೈತರಿಗೆ ಉಚಿತವಾಗಿ ಜೀವಾಮೃತ ವಿತರಿಸಲಾಯಿತು.

ಜೆರ್ಸಿ ಹಸುವಿನ ಹಾಲಿನಿಂದ ನಪುಂಸಕತ್ವ ಬಂದಿದೆ. ಅಲ್ಲದೆ 40 ವರ್ಷದಿಂದೀಚೆಗೆ ಪ್ರತಿ ಮನೆಯಲ್ಲಿ ಬಂಜೆ ತಾಯಂದಿರ ಪ್ರಮಾಣ ಹೆಚ್ಚಿದೆ. ಜೆರ್ಸಿ ಹಾಲಿನಲ್ಲಿನ ಬಿಸಿಎಂ-7 ಎಂಬ ವಿಷದಿಂದ ಬಂಜೆತನ, ಕ್ಯಾನ್ಸರ್, ಡಯಾಬಿಸಿಟ್, ರಕ್ತದೊತ್ತಡ ಹೆಚ್ಚಿವೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿಷಾದಿಸಿದರು.

ಮೊದಲೆಲ್ಲ ಕಡಿದಾದ ಗುಡ್ಡಗಳ ಮೇಲೆ ಹಸುಗಳನ್ನು ಮೇಯಿಸಲಾಗುತ್ತಿತ್ತು. ಇದರಿಂದ ಅಲ್ಲಿನ ಭೂಮಿ ಗಟ್ಟಿಯಾಗಿರುತ್ತಿತ್ತು. ನೀರು ಹಿಂಗುತ್ತಿರಲಿಲ್ಲ. ಹಸುಗಳ ಕಾಲುದಾರಿಗಳ ಮೂಲಕ ನೀರು ಕೆಳಗೆ ಹೋಗುತ್ತಿತ್ತು. ಇಂದು ಹಸುಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ವಯನಾಡಿನಲ್ಲಿ ಗುಡ್ಡ ಕುಸಿತ, ಕೆಲ ವರ್ಷದ ಹಿಂದೆ ಕೊಡಗಿನಲ್ಲಿ ದುರಂತ ನಡೆಯಿತು ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net