ವಿಕಸಿತ ಭಾರತಕ್ಕೆ ಇಂಜಿನಿಯರುಗಳ ಕೊಡುಗೆ ಪ್ರಮುಖ

ದಾವಣಗೆರೆಯಲ್ಲಿ ಶುಕ್ರವಾರ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಡಾ. ಎಂ.ಸಿ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್, ಯದುವೀರ್ ಒಡೆಯರ್, ಡಾ. ಪ್ರಭಾ ಮಲ್ಲಿಕಾರ್ಜುನ್, ಡಾ. ಟಿ.ಜಿ. ಸೀತಾರಾಂ, ಡಾ. ಎಸ್. ವಿದ್ಯಾಶಂಕರ್ ಇದ್ದರು.
ದಾವಣಗೆರೆಯಲ್ಲಿ ಶುಕ್ರವಾರ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಡಾ. ಎಂ.ಸಿ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್, ಯದುವೀರ್ ಒಡೆಯರ್, ಡಾ. ಪ್ರಭಾ ಮಲ್ಲಿಕಾರ್ಜುನ್, ಡಾ. ಟಿ.ಜಿ. ಸೀತಾರಾಂ, ಡಾ. ಎಸ್. ವಿದ್ಯಾಶಂಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿಕೆ
  • ಯು.ಬಿ.ಡಿ.ಟಿ. ಕಾಲೇಜಿನ ಅಮೃತ ಮಹೋತ್ಸವ
ದಾವಣಗೆರೆ : ಭಾರತ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಅಪೇಕ್ಷೆ ಈಡೇರುವುದು ಬಹುಮಟ್ಟಿಗೆ ಇಂಜಿನಿಯರುಗಳು, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಕೊಡುಗೆ ಮೇಲೆ ಅವಲಂಬಿತವಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿರುವ, ನಗರದ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ, ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್ ತಂತ್ರಜ್ಞಾನ, ಹಸಿರು ಇಂಧನ, ಡಿಜಿಟಲ್ ಮೂಲಸೌಲಭ್ಯ, ಅಂತರಿಕ್ಷ, ಜೈವಿಕ ತಂತ್ರಜ್ಞಾನ, ಸುಧಾರಿತ ಉತ್ಪಾದನೆಗಳು ದೇಶವನ್ನು ಪ್ರಗತಿಯ ಕಡೆಗೆ ತೆಗೆದುಕೊಂಡು ಹೋಗುತ್ತಿವೆ. ತಾಂತ್ರಿಕವಾಗಿ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಪಯಣದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ದೇಶವನ್ನು ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಜ್ಞಾನದ ನಾಯಕತ್ವದತ್ತ ಮುನ್ನಡೆಸುವ ಸಾಮರ್ಥ್ಯವಿರುವ ಸಮಸ್ಯೆ ನಿವಾರಕರು, ನಾವೀನ್ಯಕಾರರು, ನೈತಿಕ ನಾಯಕರು ಮತ್ತು ರಾಷ್ಟ್ರ ನಿರ್ಮಾತೃಗಳನ್ನು ಬೆಳೆಸುವ ಇಂಜಿನಿಯರಿಂಗ್ ಸಂಸ್ಥೆಗಳು ಪ್ರಮುಖ ಜವಾಬ್ದಾರಿಯನ್ನು ಹೊಂದಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸೆಮಿ ಕಂಡಕ್ಟರ್ ತಯಾರಿಕೆ, ಹಸಿರು ಇಂಧನ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳು ಯುವ ಇಂಜಿನಿಯರ್‌ಗಳು, ಸಂಶೋಧಕರು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದರು.
ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಬೇಕು. ಇಡೀ ಸಮಾಜ ಈ ವ್ಯಸನದಿಂದ ಮುಕ್ತವಾಗಬೇಕು ಎಂದು ಆಶಿಸಿದರು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುವಲ್ಲಿ ಯುಬಿಡಿಟಿ ಸಂಸ್ಥೆಯ ಪ್ರಯತ್ನಗಳನ್ನು ಸಿ.ಪಿ. ರಾಧಾಕೃಷ್ಣನ್ ಶ್ಲಾಘಿಸಿದರು. ಎಐಸಿಟಿಇ ಐಡಿಯಾ ಲ್ಯಾಬ್, ಡ್ರೋನ್ ತಂತ್ರಜ್ಞಾನ ಪ್ರಯೋಗಾಲಯ ಮತ್ತು ಕಾಲೇಜು ನಿರ್ಮಿಸಿರುವ ಉನ್ನತ ಸಂಶೋಧನಾ ಮೂಲ ಸೌಕರ್ಯಗಳಂತಹ ಉಪಕ್ರಮಗಳನ್ನು ಪ್ರಶಂಸಿಸಿದರು.
ಮಾಜಿ ಸಚಿವರಾದ ಡಾ. ಎಂ.ಸಿ. ಸುಧಾಕರ್, ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಯದುವೀರ್ ಒಡೆಯರ್, ಡಾ. ಪ್ರಭಾ ಮಲ್ಲಿಕಾರ್ಜುನ್, ನಿಫ್ಟೆಮ್ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಟಿ.ಜಿ. ಸೀತಾರಾಂ, ವಿ.ಟಿ.ಯು ಕುಲಪತಿ ಡಾ. ಎಸ್. ವಿದ್ಯಾಶಂಕರ್, ಬೋಧಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಇದ್ದರು.

ಜ್ಞಾನದ ಸದ್ಬಳಕೆಯಾದಲ್ಲಿ ವಿಶ್ವಗುರು ಪಟ್ಟ

ವಿದ್ಯಾರ್ಥಿಗಳೇ ದೇಶದ ಶಕ್ತಿ. ದೊಡ್ಡ ಕನಸುಗಳನ್ನು ಕಾಣುತ್ತ, ನಿರಂತರ ಕಲಿಕೆ ಜತೆಗೆ ಪಡೆದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿದಲ್ಲಿ ಭಾರತವು ‘ವಿಶ್ವಗುರು’ ಆಗುವುದನ್ನು ಯಾರಿಂದಲೂ ತಡೆಯಲಾಗದು ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಹೇಳಿದರು.
ಇಂದಿನದು ಕೃತಕ ಬುದ್ಧಿಮತ್ತೆ, ಹಸಿರು ಇಂಧನ, ಸೈಬರ್ ಭದ್ರತೆ, ರೋಬಾಟಿಕ್ಸ್ ಮತ್ತು ನಾವೀನ್ಯತೆಯ ಯುಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ಅಭಿಯಾನಗಳ ಮೂಲಕ ಯುವಕರಿಗಾಗಿ ಅಪಾರ ಅವಕಾಶಗಳನ್ನು ತೆರೆದಿದ್ದಾರೆ. ಈ ಸಮಯದಲ್ಲಿ ಇಂಜಿನಿಯರಿಂಗ್ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿವೆ ಎಂದರು.
ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರಾಗಿದೆ. ಇದರ ಕೀರ್ತಿ ಇಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಪ್ರತಿಭಾವಂತ ಯುವಕರಿಗೆ ಸಲ್ಲುತ್ತದೆ. ಯುಬಿಡಿಟಿ ಕಾಲೇಜು ಸಹ ಈ ಪರಂಪರೆ ಬಲಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದರು.
"

ವಿಶ್ವವಿದ್ಯಾಲಯಗಳು ಭೌತಿಕ ವಿಜ್ಞಾನದ ಜತೆಗೆ ಆಧ್ಯಾತ್ಮಿಕ ವಿಜ್ಞಾನವನ್ನು ಪರಿಚಯಿಸಬೇಕು. ಆಧುನಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕತೆ ಮಿಳಿತವಾದಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.

— ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net