ದಾವಣಗೆರೆ:ಶೋಷಿತರಿಗೆ ಸನಾತನ ಧರ್ಮ ನೀಡದ ರಾಜಕೀಯ ಅಧಿಕಾರವನ್ನು ಸಂವಿಧಾನವು ಕಲ್ಪಿಸಿದೆ. ದಲಿತರ ಸಂಘಟನೆಗೆ ಅಂಬೇಡ್ಕರ್ ಅವರೇ ಮುಖ್ಯ ಕಾರಣ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎ.ಬಿ.ರಾಮಚಂದ್ರಪ್ಪ ಹೇಳಿದರು.
ಜಗದ್ಗುರು ಜಯದೇವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಮಾದಿಗ ಮಹಾಸಭಾದಿಂದ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಕೆಲವು ಶಕ್ತಿಗಳು ಸಂವಿಧಾನವನ್ನು ಸುಟ್ಟು ಮನುಸ್ಮೃತಿ ಜಾರಿಗೆ ತರಲು ಹೊರಟಿವೆ. ಅದು ಜಾರಿಯಾದಲ್ಲಿ ನಾವೆಲ್ಲರೂ ಅಧಿಕಾರ ಮತ್ತು ಸಂಪತ್ತಿನಿಂದ ದೂರವಿದ್ದು, ಊರಿನಿಂದ ಹೊರಗುಳಿಯಬೇಕಾಗಲಿದೆ. 2 ಸಾವಿರ ವರ್ಷದ ಹಿಂದಿನ ಶೋಷಣೆಯ ಕಥೆಯನ್ನು ಮರುಸ್ಥಾಪಿಸಲು ಕೆಲವರು ಹೊರಟಿದ್ದಾರೆ ಎಂದು ಆರೋಪಿಸಿದರು.
ನಮ್ಮ ಹಕ್ಕುಗಳನ್ನು ಸಾವಿರಾರು ವರ್ಷಗಳ ಕಾಲ ಕಿತ್ತುಕೊಂಡು ತಿಂದ ಸಮುದಾಯಗಳು ಇಂದು ಸುಳ್ಳಿನ ಸಾಮ್ರಾಜ್ಯವನ್ನು ಸೃಷ್ಟಿಸುತ್ತಿವೆ. ಧರ್ಮ ಮತ್ತು ಕೋಮುವಾದದ ಹೆಸರಿನಲ್ಲಿ ಮತ್ತೊಮ್ಮೆ ಶೋಷಿಸುವ ಪ್ರಯತ್ನ ನಡೆದಿದೆ ಎಂದ ಅವರು, ಅಕ್ಷರದ ಅರಿವು, ಸಾಮಾಜಿಕ ಮತ್ತು ರಾಜಕೀಯ ವಿವೇಕ ಇಲ್ಲವಾದಲ್ಲಿ ನಮ್ಮ ಸಮುದಾಯ ಎಲ್ಲಾ ಕಾಲಕ್ಕೂ ಹೀಗೆಯೇ ಇರಬೇಕಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳು ನಿತ್ಯ ಸುಳ್ಳು ಸುದ್ದಿ ಹರಡುತ್ತಾ ಜನರ ದಾರಿ ತಪ್ಪಿಸುತ್ತಿವೆ. ಇಂತಹ ಹೊತ್ತಿನಲ್ಲಿ ಶೋಷಿತ ಜನರಿಗೆ ಬಿಡುಗಡೆಯ ಏಕೈಕ ಹಾದಿಯೇ ಅಕ್ಷರ ಮಾತ್ರ. ನಾವು ಎಚ್ಚೆತ್ತುಕೊಂಡು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡದಿದ್ದರೆ ನಮ್ಮ ಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದಾವಣಗೆರೆ ಅಭಿವೃದ್ಧಿಯಾಗಿದೆ ಎಂಬುದು ನಿಜ. ವಿದ್ಯಾನಗರಕ್ಕೆ ಹೋಲಿಸಿದರೆ ಗಾಂಧಿನಗರದ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ಅಭಿವೃದ್ಧಿಯ ಸಂಕಥನ ಕೂಡ ಜಾತಿ ಆಧಾರಿತವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸಮಾನತೆ ಮೂಡಬೇಕಿದೆ. ಶಿಕ್ಷಣದ ಮೂಲಕ ಪ್ರತಿಯೊಬ್ಬರೂ ಉನ್ನತ ಮಟ್ಟಕ್ಕೇರಬೇಕು. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಹಾಗೂ ತಾರತಮ್ಯದ ವಿರುದ್ಧ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಆಶಿಸಿದರು.
ಎಸ್ಪಿ ಡಾ.ಎಚ್.ಟಿ.ಶೇಖರ್ ಮಾತನಾಡಿ, ಸಾಧನೆಯು ವೈಯಕ್ತಿಕ ಬೆಳವಣಿಗೆಗೆ ಸೀಮಿತವಾಗಿರದೆ, ಇಡೀ ಸಮಾಜಕ್ಕೆ ಪ್ರೇರಣೆಯಾಗಬೇಕು. ಸಂವಿಧಾನದ ಮೂಲ ತತ್ವಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗೇಶ ಬೇವಿನಮಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ಕಾನೂನು ಪದವೀಧರರಿಗೆ ಸಮಾಜ ಕಲ್ಯಾಣ ಇಲಾಖೆಯು ಉಚಿತ ತರಬೇತಿ ನೀಡಲಿದೆ. ಪ್ರತಿವರ್ಷ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಉಚಿತ ಕೋಚಿಂಗ್, ಸ್ಟೈಫೆಂಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ರೇಣುಕಾ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ನಿವೃತ್ತ ಎಸ್ಪಿ ರವಿನಾರಾಯಣ, ನಿವೃತ್ತ ಅಧಿಕಾರಿ ನಿರಂಜನ್, ಎಸ್.ಮಲ್ಲಿಕಾರ್ಜುನ್, ಹೆಗ್ಗೆರೆ ರಂಗಪ್ಪ ಇತರರಿದ್ದರು.