ಪ್ರಸ್ತುತತೆ ಕಾಯ್ದುಕೊಳ್ಳುವ ಸವಾಲು

ದಾವಣಗೆರೆಯಲ್ಲಿ ಶನಿವಾರ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅತಿಥಿಗೃಹ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಿ.ಎಲ್. ಸಂತೋಷ್, ಜನಾರ್ದನ ಸ್ವಾಮಿ, ಡಾ. ಟಿ.ಜಿ. ಸೀತಾರಾಂ, ಡಾ. ಎಸ್. ವಿದ್ಯಾಶಂಕರ್, ಹಳೆಯ ವಿದ್ಯಾರ್ಥಿಗಳು ಇದ್ದರು.
ದಾವಣಗೆರೆಯಲ್ಲಿ ಶನಿವಾರ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅತಿಥಿಗೃಹ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಬಿ.ಎಲ್. ಸಂತೋಷ್, ಜನಾರ್ದನ ಸ್ವಾಮಿ, ಡಾ. ಟಿ.ಜಿ. ಸೀತಾರಾಂ, ಡಾ. ಎಸ್. ವಿದ್ಯಾಶಂಕರ್, ಹಳೆಯ ವಿದ್ಯಾರ್ಥಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಎಲ್. ಸಂತೋಷ್ ಅಭಿಮತ
  • ಯುಬಿಡಿಟಿ ಅಮೃತ ಮಹೋತ್ಸವ ಸಮಾರೋಪ
ದಾವಣಗೆರೆ : ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಸ್ತುತತೆ ಕಾಯ್ದುಕೊಳ್ಳುವುದು ಇಂದಿನ ಸವಾಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಕಾಲ ಬದಲಾದಂತೆ ಇಂಜಿನಿಯರಿಂಗ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳಾಗುತ್ತಿವೆ. ನೂತನ ತಂತ್ರಜ್ಞಾನ, ಹೊಸ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಪರಿವರ್ತನೆಯ ಜತೆಗೆ ನಾವೂ ಹೆಜ್ಜೆ ಹಾಕದಿದ್ದರೆ ಅಪ್ರಸ್ತುತವಾಗುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಸಂತೋಷ್, ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಮೆಲುಕು ಹಾಕಿದರು. ದಾವಣಗೆರೆಯ ಹಾಸ್ಟೆಲ್‌ನಲ್ಲಿದ್ದು ಓದಿದ ದಿನಗಳ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.
ದಾವಣಗೆರೆ ದಾನಿಗಳ ಊರು. ನಗರದಲ್ಲಿ ಒಂದು ಸುತ್ತು ಹಾಕಿದರೆ ಹಲವಾರು ಸಂಸ್ಥೆಗಳಿಗೆ ದಾನಿಗಳ ಹೆಸರಿರುವುದು ಕಾಣಿಸುತ್ತದೆ. ಆಗಿನ ಕಾಲದಲ್ಲಿ ಶಿಕ್ಷಣ ಅನಿವಾರ್ಯ ಎಂದೆನಿಸದಿದ್ದರೂ, ಕಾಲೇಜು ಸ್ಥಾಪನೆಗೆ ದಾನಿಗಳು ಉದಾರವಾಗಿ ನೆರವು ನೀಡಿದರು. ದಾವಣಗೆರೆಯ ಬೆಳವಣಿಗೆಯಲ್ಲಿ ಸರ್ಕಾರಕ್ಕಿಂತಲೂ ದಾನಿಗಳ ಪಾತ್ರ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು.
ಯುಬಿಡಿಟಿ ಕಾಲೇಜು 75 ವರ್ಷಗಳ ಪಯಣವನ್ನು ಪೂರೈಸಿದೆ. ಇಷ್ಟು ವರ್ಷಗಳಲ್ಲಿ ಪಠ್ಯಕ್ರಮ, ಪ್ರಯೋಗಾಲಯ, ಮೂಲಸೌಲಭ್ಯ ಎಲ್ಲವೂ ಬದಲಾಗಿದೆ. ಸರ್ಕಾರ ಮತ್ತು ವಿಟಿಯು ಈ ಕಾಲೇಜಿನ ಕೈಹಿಡಿದು ಅಭಿವೃದ್ಧಿಗೆ ಕಾರಣವಾಗಿವೆ ಎಂದು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ಮತ್ತು ಇನ್‌ಸ್ಟ್ರುಮೆಂಟೇಷನ್ ವಿಷಯಗಳು ಆಗತಾನೆ ಅಂಬೆಗಾಲಿಡುತ್ತಿದ್ದ ಕಾಲಘಟ್ಟದಲ್ಲಿ ನಾನು ವ್ಯಾಸಂಗ ಮಾಡಿದೆ. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಗುಣಮಟ್ಟಕ್ಕೆ ಯಾವ ಕೊರತೆಯೂ ಇರಲಿಲ್ಲ. ಅಧ್ಯಾಪಕರು ನಮಗೆ ಬೆನ್ನೆಲುಬಾಗಿದ್ದರು. ಸಾಂಸ್ಕೃತಿಕವಾಗಿಯೂ ಬೆಳೆದೆವು. ಒಟ್ಟಾರೆ ವ್ಯಕ್ತಿತ್ವ ನಿರ್ಮಾಣದಲ್ಲಿ ಯುಬಿಡಿಟಿ ಪ್ರಮುಖ ಪಾತ್ರ ವಹಿಸಿತು ಎಂದು ಸ್ಮರಿಸಿದರು.
ಮುಂಬರುವ ದಿನಗಳಲ್ಲಿ ಈ ಸಂಸ್ಥೆಯು ಶತಮಾನೋತ್ಸವ ಆಚರಿಸುತ್ತದೆ, ಆಗಲೂ ಕಾಲೇಜು ಪ್ರಸ್ತುತ ಆಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಳೆಯ ವಿದ್ಯಾರ್ಥಿಯಾಗಿ ಕಾಲೇಜಿನ ಬೆಳವಣಿಗೆಗೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ಸಿದ್ಧ ಎಂದು ಹೇಳಿದರು.
ಕಾಲೇಜಿನ ಮತ್ತೊಬ್ಬ ಹಳೆಯ ವಿದ್ಯಾರ್ಥಿ, ಚಿತ್ರದುರ್ಗದ ಮಾಜಿ ಸಂಸದ ಜನಾರ್ದನ ಸ್ವಾಮಿ ಮಾತನಾಡಿ, ಯುಬಿಡಿಟಿ ಕಾಲೇಜಿನ ಕೊಡುಗೆಯನ್ನು ಮೆಲುಕು ಹಾಕಿದರು. ಈ ಸಂಸ್ಥೆಯಲ್ಲಿ ಕಲಿತ ಹಲವರು ದೇಶದ ಅತ್ಯುನ್ನತ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ನಿಫ್ಟೆಮ್ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಟಿ.ಜಿ. ಸೀತಾರಾಂ, ವಿ.ಟಿ.ಯು ಕುಲಪತಿ ಡಾ. ಎಸ್. ವಿದ್ಯಾಶಂಕರ್, ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ, ನಿವೃತ್ತ ಪ್ರಾಚಾರ್ಯ ಕೆ.ಎನ್. ವೆಂಕಟ ಕೃಷ್ಣರಾವ್, ಅಮೃತ ಮಹೋತ್ಸವದ ಸಂಚಾಲಕ ಡಾ.ಎಂ.ಎಚ್. ದಿವಾಕರ್, ಬೋಧಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಇದ್ದರು. ಪ್ರೊ. ಮಲ್ಲಿಕಾರ್ಜುನ ಹೊಳಿ ಸ್ವಾಗತಿಸಿದರು. ರೇಖಾ ಪದಕಿ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net