ದಾವಣಗೆರೆಯಲ್ಲಿ ನಡೆದಾಡಿದ ಕುಂಚಗಳು!

 ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಟ್‌ಪಾರ್ಕ್- ಕಲಾವಿದರ ಸಂಗಮ ಕಾರ್ಯಕ್ರಮದಲ್ಲಿ ಕಲಾಕೃತಿಗಳನ್ನು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ್, ಭಾಗ್ಯಾ ಅಜಯಕುಮಾರ್, ಎಚ್.ಬಿ.ಮಂಜುನಾಥ್, ಬಾ.ಮ.ಬಸವರಾಜಯ್ಯ ಇತರರು ವೀಕ್ಷಿಸಿದರು.
ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರ್ಟ್‌ಪಾರ್ಕ್- ಕಲಾವಿದರ ಸಂಗಮ ಕಾರ್ಯಕ್ರಮದಲ್ಲಿ ಕಲಾಕೃತಿಗಳನ್ನು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ್, ಭಾಗ್ಯಾ ಅಜಯಕುಮಾರ್, ಎಚ್.ಬಿ.ಮಂಜುನಾಥ್, ಬಾ.ಮ.ಬಸವರಾಜಯ್ಯ ಇತರರು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ದೃಶ್ಯಕಲಾ ಕಾಲೇಜಲ್ಲಿ ಆರ್ಟ್‌ಪಾರ್ಕ್ ಸಮ್ಮೋಹನ
  • 45 ಖ್ಯಾತ ಕಲಾವಿದರ ಜತೆ ಜನರ ಸಂವಹನ
  • ಕಲಾಕೃತಿಗಳ ಪ್ರದರ್ಶನ, ಜೇಡಿಮಣ್ಣಿನ ಭಾವಶಿಲ್ಪ ರಚನೆ
ದಾವಣಗೆರೆ: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ತುಂಬೆಲ್ಲ ಭಾನುವಾರ ಕುಂಚಗಳು ನಡೆದಾಡಿದವು! ಕಾಲೇಜು ಕಾರಿಡಾರಿನಲ್ಲಿ ಚಿತ್ರಕಲಾಕೃತಿಗಳು ತೂಗಾಡಿದವು. ಕ್ಯಾನ್ವಾಸು ಹಾಗೂ ನೆಲಕ್ಕೊರಗಿ ಮೆಲ್ಲನೆ ಮಾತಾಡಿದವು!
ನಗರದಲ್ಲಿ ಚೊಚ್ಚಲ ಬಾರಿಗೆ ಆಯೋಜಿಸಿದ್ದ ಆರ್ಟ್‌ಪಾರ್ಕ್ ಕಲಾವಿದರ ಸಂಗಮ, ಚಿತ್ರಕಲಾ ರಸಿಕರು ಹಾಗೂ ಕಲಾಕಾರರ ನಡುವಿನ ಸಂವಹನಕ್ಕೆ ಹೊಸ ವೇದಿಕೆ ಒದಗಿಸಿತು. ಸುಂದರ ಪರಿಸರದಲ್ಲಿನ ಕಲಾವರಣ ದೇವನಗರಿ ಕಳೆ ಹೆಚ್ಚಿಸಿತ್ತು.
ರಾಷ್ಟ್ರೀಯ ಪ್ರಶಸ್ತಿ ಹಾಗೂ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರೂ ಒಳಗೊಂಡಂತೆ ಮುಂಬೈ, ಪಾಂಡಿಚೆರಿ, ಬೆಂಗಳೂರು, ಧಾರವಾಡ, ಶಿವಮೊಗ್ಗ, ಯಾದಗಿರಿ, ಹಾವೇರಿ, ಚಿಕ್ಕಮಗಳೂರು, ಗುಲ್ಬರ್ಗಾ, ಬೆಳಗಾವಿ, ಸಂಡೂರು, ಹೊಸಪೇಟೆ ಮೊದಲಾದೆಡೆಯ 45 ಖ್ಯಾತ ಕಲಾವಿದರು ಭಾಗಿಯಾಗಿದ್ದರು.
ಅವರೆಲ್ಲರೂ ತಮ್ಮ ವಿಭಿನ್ನ ಶೈಲಿಯ ಕಲಾಕೃತಿಗಳನ್ನು ಪ್ರದರ್ಶಿಸಿದರು.ಬೆಳಗ್ಗೆ 11ರಿಂದಲೇ ಕುಂಚಗಳಿಗೆ ಕೆಲಸ ನೀಡಿದರು. ಮನಸೊಪ್ಪಿದ ಬಣ್ಣ ತುಂಬಿದರು. ಅವರೊಂದಿಗೆ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಹನ ನಡೆಸಿದರು. ಕಲಾವಿದರ ಚಿತ್ರಕಲಾ ನಂಟು, ವೃತ್ತಿ ಅನುಭವ ಹಾಗೂ ಸಂದ ಪ್ರಶಸ್ತಿಗಳ ಜತೆಗೆ ಕಲಾ ರಚನೆಯಲ್ಲಿ ಇರಬೇಕಾದ ನೈಪುಣ್ಯಗಳ ಟಿಪ್ಸ್ ತೆರೆದಿಟ್ಟರು.
ಅತಿಥಿ-ಗಣ್ಯರು ಸೇರಿ ಕೆಲವರ ಭಾವಚಿತ್ರವನ್ನು ಕೆಲ ಕಲಾವಿದರು ಸ್ಥಳದಲ್ಲೇ ಕ್ಷಣಾರ್ಧದಲ್ಲೇ ಬರೆದರು. ಹಲವರ ಕ್ಯಾರಿಕೇಚರ್‌ಗಳು ಮೋಡಿ ಮಾಡಿದವು. ಜಿ.ಬಿ. ಓಂಕಾರಮೂರ್ತಿ, ವೆಂಕಟಾಚಲಪತಿ, ಚಿರಂತಯ್ಯ ಬಿ. ಹಿರೇಮಠ್ ಅವರು ಜೇಡಿಮಣ್ಣಿನಲ್ಲಿ ಕೆಲವರ ಕಲಾಕೃತಿಗಳನ್ನು ರಚಿಸಿದರು.
ಮಿನಿಯೇಚರ್, ಮೆಟಲ್ ಎಂಬೋಸಿಂಗ್, ವಾಟರ್ ಪೇಂಟಿಂಗ್ಸ್, ಪೆನ್ ವರ್ಕ್ಸ್, ರೇಖಾ ಚಿತ್ರ, ಲ್ಯಾಂಡ್‌ಸ್ಕೇಪ್, ಅಕ್ರಾಲಿಕ್ ಪೇಂಟಿಂಗ್ಸ್, ಕಾರ್ಟೂನ್ ಆ್ಯಂಡ್ ಕ್ಯಾರಿಕೇಚರ್, ಚಾರ್ಕೋಲ್ ಆರ್ಟ್, ಸಮಕಾಲೀನ ಕಲೆಯ ಕಲಾಕೃತಿಗಳು ಗಮನ ಸೆಳೆದವು.ವುಡ್ ಕಾರ್ವಿಂಗ್, ಕುಂಬಾರಿಕೆ, ಸೆರಾಮಿಕ್ ಎಂ-ಸೀಲ್ ಕಲಾ ಮಾದರಿಗಳು ಅಲ್ಲಿದ್ದವು.
ಶಿವಾನಂದ್ ಬಸವಂತಪ್ಪ ಅವರು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಲೈವ್ ಸ್ಕೆಚ್ ಮಾಡಿಕೊಟ್ಟರೆ, ಬಿ.ಜಿ.ಗುಜ್ಜಾರಪ್ಪ ಅವರು ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಅವರ ಕ್ಯಾರಿಕೇಚರ್ ರಚಿಸಿದರು.
ಆರ್ಟ್‌ಪಾರ್ಕ್‌ನ ವಿಶೇಷ ಆಕರ್ಷಣೆಯಾಗಿದ್ದ ಹುಬ್ಬಳ್ಳಿಯ ಕುಬ್ಜ ಕಲಾವಿದ ಕಿರಣ್ ಶೇರಖಾನೆ ಅವರ ವಿಶಿಷ್ಟ ಕಲಾಕೃತಿ ಎಲ್ಲರ ಗಮನ ಸೆಳೆಯಿತು. ಅವರೊಂದಿಗೆ ಕುಶಲೋಪರಿ ನಡೆಸಿದ ಸಂಸದರು ಕಲಾಕೃತಿಯೊಂದನ್ನು ಖರೀದಿಸಿ ಶುಭ ಹಾರೈಸಿದರು.
ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್, ಹರಿಹರ ಕುಮಾರಪಟ್ಟಣಂ ಗ್ರಾಸಿಂ ಅಧ್ಯಕ್ಷ ಡಾ. ಲಿಪಿ ಮೊಹಾಂತಿ, ಕಾಲೇಜಿನ ಪ್ರಾಚಾರ್ಯ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ, ಡಿ.ಎಂ.ಪ್ರದೀಪ್‌ಕುಮಾರ್, ಹರೀಶ್ ಮಾಳಪ್ಪನವರ್, ಆರ್ಟ್ ಪಾರ್ಕ್‌ನ ಸ್ಥಾಪಕ ಎಸ್.ಜಿ.ವಾಸುದೇವ್, ಅಧ್ಯಕ್ಷೆ ಭಾಗ್ಯಾ ಅಜಯ್‌ಕುಮಾರ್ ಇದ್ದರು.
ಖುಷಿಯ ಕ್ಯಾಂಪಸ್ ಆಗಿರಲಿ
ಗಣಪತಿ ಮೂರ್ತಿ ಕೂರಿಸಿದರೆ ಕುಟುಂಬ ಸದಸ್ಯರು ನೋಡಲು ಹೋಗುತ್ತಾರೆ. ಅದೇ ರೀತಿಯಲ್ಲಿ ದೃಶ್ಯಕಲಾ ಕಾಲೇಜು ಎಲ್ಲ ಕುಟುಂಬಕ್ಕೂ ಖುಷಿಯ ಕ್ಯಾಂಪಸ್ ಆಗಬೇಕು. ಬೇಸಿಗೆ ಶಿಬಿರ ಹಾಗೂ ವಾರಾಂತ್ಯಗಳಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಿ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಅವರ ಕೌಶಲ ಪ್ರದರ್ಶನಕ್ಕೆ ನೆರವಾಗಿ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಇದೇ ವೇಳೆ ಹಾರೈಸಿದರು.
ಚಿತ್ರಕಲಾಕೃತಿಗಳು ನಮ್ಮ ಕಣ್ಣರಳಿಸುತ್ತವೆ. ಚಿತ್ರಕಲೆಯು ನಮ್ಮಲ್ಲಿನ ರಕ್ತದೊತ್ತಡ, ಮಧುಮೇಹ ಇನ್ನಿತರೆ ಕಾಯಿಲೆಗಳನ್ನು ನಿಯಂತ್ರಣ ಮಾಡಿ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಲಿದೆ. ಮಕ್ಕಳಲ್ಲಿ ಅನುಕಂಪ ಹಾಗೂ ಇತರೆ ಮೌಲ್ಯಗಳನ್ನೂ ಕಲಿಸಬಹುದು ಎಂದು ಹೇಳಿದರು.
ಜೂನಿಯರ್‌ಗಳನ್ನು ಬೆಳೆಸಿ
ಎಂಥಹ ಕಲ್ಲು ಹೃದಯಿಯನ್ನೂ ಸಾಮಾನ್ಯ ಮಾನವನನ್ನಾಗಿಸುವ ಅದ್ಭುತ ಶಕ್ತಿ ಕಲೆ ಮತ್ತು ಸಂಗೀತಕ್ಕಿದೆ. ಹೀಗಾಗಿ ಕಲಾಕಾರರ ಜೀವನ ಸಂತೋಷಮಯವಾಗಿದೆ. ದೃಶ್ಯಕಲಾಕಾಲೇಜು ವಜ್ರಮಹೋತ್ಸವ ಆಚರಣೆಗೆ ಇಲ್ಲಿ ಓದಿದ ಹಿರಿಯ ಕಲಾವಿದರು ಕಾರಣಕರ್ತರು. ನಿಮ್ಮ ಬೆಳವಣಿಗೆಗೆ ಕಾರಣವಾದ ಕಾಲೇಜಿನ ಅಭಿವೃದ್ಧಿ ಜತೆಗೆ ಇಲ್ಲಿನ ಜೂನಿಯರ್ ಕಲಾವಿದರನ್ನೂ ಬೆಳೆಸಿರಿ ಎಂದು ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಮನವಿ ಮಾಡಿದರು.

ಭಾಗಿಯಾಗಿದ್ದ ಆರ್ಟಿಸ್ಟ್‌ಗಳು

ಎ.ಎಂ.ಪ್ರಕಾಶ್, ಯು. ಅಶೋಕ್, ಬಾಬು ಜತ್ತಕರ್, ಚಿ.ಸು.ಕೃಷ್ಣಸೆಟ್ಟಿ, ಗಣಪತಿ ಅಗ್ನಿಹೋತ್ರಿ, ಗಣೇಶ್ ಸಾಬೋಜಿ, ಗಾಯತ್ರಿ ದೇಸಾಯಿ, ಎಸ್.ಎಚ್.ಹರೀಶ್, ಕರಿಯಪ್ಪ ಹಂಚಿನಮನಿ, ಕೆ.ವಿ.ಕಾಳೆ, ಕುಮಾರ ಕಾಟೇನಹಳ್ಳಿ, ಕೆ.ವಿ.ಶಂಕರ್, ಕೆ.ಕೆ.ಮಕಾಲಿ, ಮಧು ದೇಸಾಯಿ, ಕೆ.ಕೆ.ಕಾಳೆ, ಮಂಜುಳಾ, ಮೀನಾಕ್ಷಿ ಚಿನ್ನ ರಾಥೋಡ್,ಟಿ. ಮೋಹನ್‌ಕುಮಾರ್, ಎನ್.ಬಿ. ಪರ್ವತಗೌಡರ್, ಪಲ್ಲವಿ ಸಿ. ಆಚಾರ್, ಪ್ರದೀಪ್‌ಕುಮಾರ್, ಎಂ.ಸಿ. ರಮೇಶ್, ರವೀಂದ್ರ ಅರಳಗುಪ್ಪಿ, ಎನ್.ಟಿ. ರಾಘವೇಂದ್ರ ನಾಯಕ, ರೇಣುಕಾ ಕೆಸರಮಡು, ಸಂತೋಷ್‌ಕುಮಾರ್ ಕುಲಕರ್ಣಿ, ಸತೀಶ್ ಮುಲ್ತಳ್ಳಿ, ಎಸ್.ಜಿ. ವಾಸುದೇವ್, ಶರತ್ ಕುಳಗಟ್ಟೆ, ಶೀಲವಂತ್ ಯಾದಗಿರಿ, ಶಿವಾನಂದ್ ಕೆ ಪತ್ತಾರ್, ಶಿವಶಂಕರ್ ಸುತಾರ್, ಎಸ್.ಎಂ. ಲೋಹರ್, ಆರ್. ಸೂರಿ, ಉದಯ್‌ಕುಮಾರ್, ವಿ.ಜಿ. ಊರ್ಮಿಳಾ, ವಿ.ಜಿ. ವೇಣುಗೋಪಾಲ್, ಎಚ್.ಎಸ್. ವೇಣುಗೋಪಾಲ, ವಿ. ಹರಿರಾಮ್, ವಿಜಯ್ ಸಿದ್ರಾಮಪ್ಪ ವಿಜಯ್ ದೊಂಗಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net