ಮಸೂದೆಗೆ ಸರ್ವ ಪಕ್ಷಗಳ ಸಮ್ಮತಿ ಅಗತ್ಯ

ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. ಎಚ್.ಬಿ. ಮಂಜಪ್ಪ, ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ಅನಿತಾಬಾಯಿ, ಅಯೂಬ್ ಪೈಲ್ವಾನ್ ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. ಎಚ್.ಬಿ. ಮಂಜಪ್ಪ, ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ಅನಿತಾಬಾಯಿ, ಅಯೂಬ್ ಪೈಲ್ವಾನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕಿತ್ತು
ದಾವಣಗೆರೆ : ಎನ್‌ಡಿಎ ಮೈತ್ರಿಕೂಟ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ತರಾತುರಿಯಲ್ಲಿ ಮಂಡಿಸುವ ಬದಲು ಸರ್ವ ಪಕ್ಷಗಳ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕಿತ್ತು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಈ ಮಸೂದೆಯನ್ನು ಮಂಡಿಸಿದೆ ಎಂದು ಟೀಕಿಸಿದರು.
ಬಿಜೆಪಿ ಮಹಿಳೆಯರ ಭಾವನೆಗಳೊಂದಿಗೆ ಆಟವಾಡಬಾರದು. ಇಂಡಿಯಾ ಮೈತ್ರಿಕೂಟವು ಮಹಿಳಾ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.
ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ನಮಗೆ ಆತಂಕವಿದೆ. ಅದರ ಬಗ್ಗೆ ಮುಚ್ಚುಮರೆ ಮಾಡಿದ್ದಾರೆ. ಅದಕ್ಕಾಗಿ ರಚಿಸುವ ಆಯೋಗದಲ್ಲಿ ಯಾರು ಇರುತ್ತಾರೆ ಎಂಬ ಸ್ಪಷ್ಟತೆ ಬೇಕು. ಕ್ಷೇತ್ರಗಳ ರಚನೆ ಹೇಗಿರುತ್ತದೆ ಎಂದು ತಿಳಿಯಬೇಕಿದೆ. ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂನಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಂಡಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಮಸೂದೆಯ ಬಗ್ಗೆ ವಿವರಗಳನ್ನು ವಿಪಕ್ಷಗಳಿಗೆ ನೀಡಿಲ್ಲ. ಸದನದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡಲಿಲ್ಲ. ಇಷ್ಟಾಗಿಯೂ ಮಸೂದೆ ಅಂಗೀಕಾರ ಆಗದಿರುವುದು ಆಡಳಿತ ಪಕ್ಷದವರಿಗೆ ತಲೆಬಿಸಿಯಾಗಿದೆ. ಚುನಾವಣೆ ಗೆಲ್ಲಬೇಕು ಎಂಬ ಉದ್ದೇಶದಿಂದ ಆಡಳಿತ ಪಕ್ಷದವರು ತರಾತುರಿಯಲ್ಲಿ ಮಸೂದೆ ತರಲು ಮುಂದಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಈ ನಡುವೆ ಪ್ರಧಾನಿ ಮೋದಿ ಅವರು ದೇಶದ ಮಹಿಳಾ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಕೆ.ಜಿ. ಶಿವಕುಮಾರ್, ಅನಿತಾಬಾಯಿ, ಅಯೂಬ್ ಪೈಲ್ವಾನ್, ಎ. ನಾಗರಾಜ್, ಮಂಜುಳಮ್ಮ, ಮಂಗಳಮ್ಮ ಇದ್ದರು.

ಸಮರ್ಥ್ ಗೆಲ್ಲುವ ವಿಶ್ವಾಸ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಒಳ್ಳೆಯ ಅಂತರದಿಂದ ಗೆಲ್ಲುತ್ತಾರೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.
ಜನರು ಕಾಂಗ್ರೆಸ್ ಪರವಾಗಿದ್ದಾರೆ. ಗೆಲುವಿನ ಅಂತರ 8ರಿಂದ 30 ಸಾವಿರ ಆಗಬಹುದು ಎಂಬ ವಿಶ್ಲೇಷಣೆಗಳಿವೆ. ಅದಕ್ಕಾಗಿ ಮೇ 4ರ ವರೆಗೆ ಕಾಯಬೇಕು ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವರ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮದು ಶಿಸ್ತುಬದ್ಧ ಪಕ್ಷವಾಗಿದೆ. ಅದಕ್ಕೊಂದು ಸಿದ್ಧಾಂತ, ನೈತಿಕತೆ ಇದೆ. ಯಾವುದೆ ನಿರ್ಧಾರ ಮಾಡಬೇಕಾದರೆ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ. ಚುನಾವಣೆಯಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂಬುದನ್ನು ವರಿಷ್ಠರು ಗಮನಿಸಿ ತೀರ್ಮಾನ ಮಾಡುತ್ತಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net