ಕುಸ್ತಿ ಪಟ್ಟು ವೀಕ್ಷಿಸಿ ಚಿತ್ ಆದ ಪ್ರೇಕ್ಷಕರು

ದಾವಣಗೆರೆಯ ಬೀರಲಿಂಗೇಶ್ವರ ಮೈದಾನದಲ್ಲಿ ಆಯೋಜಿಸಿರುವ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ದೃಶ್ಯ.
ದಾವಣಗೆರೆಯ ಬೀರಲಿಂಗೇಶ್ವರ ಮೈದಾನದಲ್ಲಿ ಆಯೋಜಿಸಿರುವ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಬೀರಲಿಂಗೇಶ್ವರ ಮೈದಾನದಲ್ಲಿ ಸ್ಪರ್ಧೆ ಆಯೋಜನೆ
  • ಕಡಿಮೆಯಾಗದ ದೇಸಿ ಕ್ರೀಡೆ ಕ್ರೇಜ್
ದಾವಣಗೆರೆ : ಕ್ರಿಕೆಟ್‌ನ ಜನಪ್ರಿಯತೆಯ ಮುಂದೆ ಉಳಿದ ಕ್ರೀಡೆಗಳು ಗೌಣವಾಗುತ್ತಿವೆ ಎಂಬ ಭಾವನೆ ಇರುವಾಗ, ಕುಸ್ತಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ನಡೆಯುತ್ತಿರುವ ಬಯಲು ಜಂಗಿ ಕುಸ್ತಿ ಪಂದ್ಯಗಳನ್ನು ನೋಡಲು ಬರುವ ಅಭಿಮಾನಿಗಳೇ ಇದಕ್ಕೆ ನಿದರ್ಶನ.
ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯ ಅಂಗವಾಗಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ಮೂರು ದಿನಗಳ ಈ ಸ್ಪರ್ಧೆಯು ಶುಕ್ರವಾರ ಆರಂಭವಾಗಿದೆ. ಪೈಲ್ವಾನರ ಪಟ್ಟುಗಳನ್ನು ವೀಕ್ಷಿಸಲು ಉರಿ ಬಿಸಿಲಿನಲ್ಲೂ ಕುಸ್ತಿ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು ವಿಶೇಷ.
ಮೈದಾನದ ಮಧ್ಯದಲ್ಲಿ ಕೆಂಪು ಮಣ್ಣಿನ ಕುಸ್ತಿ ಅಖಾಡ. ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಹೊನಲು ಬೆಳಕಿನ ವ್ಯವಸ್ಥೆಗಾಗಿ ಫ್ಲಡ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಸುತ್ತಲೂ 10 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಶುಕ್ರವಾರ 5ರಿಂದ 6 ಸಾವಿರ ಮಂದಿ ಸೇರಿದ್ದರು. ಮಕ್ಕಳು, ಯುವಕರು, ವೃದ್ಧರು ಹೀಗೆ ವಯಸ್ಸಿನ ಭೇದವಿಲ್ಲದೆ ಕ್ರೀಡಾಭಿಮಾನಿಗಳು ಸೇರಿದ್ದರು.
ಪಂದ್ಯಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ, ಸಂಜೆ 5ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯುತ್ತವೆ.

ಉರಿ ಬಿಸಿಲಲ್ಲೂ ಕುಗ್ಗದ ಉತ್ಸಾಹ

ನೆತ್ತಿ ಸುಡುವ ಬಿಸಿಲಲ್ಲೂ ಕ್ರೀಡಾಭಿಮಾನಿಗಳು ತಲೆಯ ಮೇಲೆ ಟವೆಲ್ ಹಾಕಿಕೊಂಡು ಕುಸ್ತಿ ಪಂದ್ಯಗಳನ್ನು ವೀಕಿಸುವ ದೃಶ್ಯ ಗಮನಿಸಿದರೆ ದೇಸಿ ಕ್ರೀಡೆಗಳಿಗೆ ಈಗಲೂ ಭವಿಷ್ಯವಿದೆ ಎಂದೆನಿಸುತ್ತದೆ. ದಾವಣಗೆರೆ ಮಂದಿಯ ಜತೆಗೆ ವಿವಿಧ ಗ್ರಾಮಗಳಿಂದ ಬಂದವರೂ ಅಲ್ಲಿದ್ದರು.
ಪೈಲ್ವಾನರ ಆಟದ ವೈಖರಿಯನ್ನು ಪ್ರೇಕ್ಷಕರು ಆಸ್ವಾದಿಸಿದರು. ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಪ್ರೋತ್ಸಾಹಿಸಿದರು. ಕುಸ್ತಿ ಪಟುಗಳು ಒಳ್ಳೆಯ ಪಟ್ಟುಗಳನ್ನು ಹಾಕಿದಾಗ ಮೆಚ್ಚುಗೆ ಸೂಚಿಸಿದರು. ತಮ್ಮ ನೆಚ್ಚಿನ ಕ್ರೀಡಾಪಟು ನಿರೀಕ್ಷಿತ ಪ್ರದರ್ಶನ ಕೊಡದಿದ್ದಾಗ ನಿರಾಶರಾದರು.
ಲಂಗೋಟಿ ಧರಿಸಿ ಅಖಾಡಕ್ಕಿಳಿಯುವ ಪೈಲ್ವಾನರನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಕಟ್ಟುಮಸ್ತಾದ ದೇಹದಾರ್ಢ್ಯ, ಮೈತುಂಬ ಮೆತ್ತಿಕೊಂಡ ಮಣ್ಣು, ಬೆವರು. ತೊಡೆ ತಟ್ಟಿ ಎದುರಾಳಿಗೆ ನೀಡುವ ಪಂಥಾಹ್ವಾನವು ವಾತಾವರಣ ರಂಗೇರುವಂತೆ ಮಾಡಿತು.
ಆರಂಭದಲ್ಲಿ ರೆಫರಿಗಳು ಕುಸ್ತಿ ಜೋಡಿಗಳ ಕೈ ಎತ್ತಿ ಪ್ರೇಕ್ಷಕರಿಗೆ ಪರಿಚಯಿಸುವುದು ಕಂಡುಬಂದಿತು. ಕ್ರೀಡಾಪಟುಗಳ ಹಿನ್ನೆಲೆ, ಅವರು ಮಾಡಿರುವ ದಾಖಲೆಗಳ ಬಗ್ಗೆ ತಿಳಿಸಲಾಯಿತು. ಧ್ವನಿವರ್ಧಕದಲ್ಲಿ ವೀಕ್ಷಕ ವಿವರಣೆಯೂ ಇತ್ತು. ಬಿಸಿಲ ನಡುವೆ ಮೈದಾನದ ಸುತ್ತಮುತ್ತ ಮಜ್ಜಿಗೆ, ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯಾಪಾರವೂ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net