ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದಲ್ಲಿ ಉಮಾ ಮಹೇಶ್ವರ ಜಾತ್ರೆಯ ನಿಮಿತ್ತ ಉರುಳುಸೇವೆ ಮಾಡಿದ ಯುವಕರ ದಂಡು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಮಾ ಮಹೇಶ್ವರ ಜಾತ್ರೆಯಲ್ಲಿ ಭಕ್ತಿಯ ಸಿಂಚನ
ಶತಮಾನ ಇತಿಹಾಸದ ಹಬ್ಬಕ್ಕೆ ರಂಗೇರಿದ ಊರು
ನೆರೆಹೊರೆಯ ಗ್ರಾಮಸ್ಥರ ದಂಡು
ದಾವಣಗೆರೆ: ತಾಲೂಕಿನ ನಾಗನೂರು ಗ್ರಾಮದಲ್ಲಿ ಐತಿಹಾಸಿಕ ಉಮಾ ಮಹೇಶ್ವರ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಎರಡು ದಿನದ ಜಾತ್ರೆಗೆ ನೆರೆಹೊರೆಯ ಗ್ರಾಮಗಳ ಭಕ್ತರ ದಂಡೇ ಬರುತ್ತಿದೆ.
ತಳಿರು ತೋರಣ, ವಿದ್ಯುದಲಂಕಾರ, ಕೇಸರಿ ಬಣ್ಣದ ಬಂಟಿಂಗ್ಸ್, ದೇವಸ್ಥಾನದ ಹೊರಗೆ ಹೂವಿನಲಂಕಾರದ ಆಕರ್ಷಣೆಯೊಂದಿಗೆ ಗ್ರಾಮ ಸಿಂಗಾರಗೊಂಡಿದೆ.
ಮಂಗಳವಾರ ಬೆಳಗ್ಗೆ, ವಿರಾಮ ಮಂಟಪದ ಆವರಣದಿಂದ ಬಸವೇಶ್ವರ ದೇವಸ್ಥಾನ ಆವರಣದವರೆಗೆ ನೂರಾರು ಯುವಕರು, ಚಿಣ್ಣರು ಬೆಳಗಿನ ಚಳಿಯ ನಡುವೆಯೂ ಉರುಳುಸೇವೆ ಮಾಡಿ ಗಮನ ಸೆಳೆದರು.
ಮದುವೆ, ಶಿಕ್ಷಣದಲ್ಲಿ ಉನ್ನತಿ, ಆರೋಗ್ಯ ಸಮಸ್ಯೆ ನಿವಾರಣೆ ಮತ್ತಿತರೆ ಹರಕೆ ಹೊತ್ತು, ಓಂ ನಮಃ ಶಿವಾಯ ಎಂಬ ಉದ್ಗಾರದೊಂದಿಗೆ ಸುಮಾರು ಅರ್ಧ ಮೈಲಿವರೆಗೆ ಉರುಳುಸೇವೆ ಮಾಡಿ ಭಕ್ತಿ ಮೆರೆದರು. ಇವರ ಹಾದಿಯುದ್ದಕ್ಕೂ ಹೆಣ್ಣುಮಕ್ಕಳು ಬಿಂದಿಗೆಗಳಿಂದ ಹೊತ್ತು ತಂದ ನೀರೆರೆದರು.
ಗ್ರಾಮದ ಜಾತ್ರೆಗೆ ಶತಮಾನದ ಇತಿಹಾಸವಿದೆ. ಹೊರವಲಯದ ಉಮಾಮಹೇಶ್ವರ ಸ್ವಾಮಿ ಗದ್ದಿಗೆ ಸ್ಥಳವನ್ನು ನೆರಕೆ-ಬಟ್ಟೆಗಳಿಂದ ಸಿಂಗರಿಸಿ, ಉತ್ಸವಮೂರ್ತಿಗಳನ್ನು ಕೂರಿಸಲಾಗಿತ್ತು. ವಿವಿಧೆಡೆಯ ನೂರಾರು ಭಕ್ತರು ದೇವರ ದರ್ಶನ ಪಡೆದರು.
ಜಾತ್ರೆಯ ಎರಡು ದಿನದಂದೂ ಗದ್ದಿಗೆ ಬಳಿ ಅನ್ನ-ಹಾಲು, ಬೆಲ್ಲ-ಬಾಳೆಹಣ್ಣಿನ ಪ್ರಸಾದ ನಡೆಯಲಿದೆ. ಕೊನೆಯ ದಿನ ಸಂಜೆ ಗದ್ದಿಗೆ ಬಳಿಯ ಸ್ವಾಮಿಯನ್ನು ಗ್ರಾಮಕ್ಕೆ ಕಲಾ ತಂಡಗಳೊಂದಿಗೆ ಬರಮಾಡಿಕೊಳ್ಳಲಾಗುವುದು. ನಂತರ ದೇವಸ್ಥಾನ ಎದುರು ಆಯೋಜಿಸುವ ಪ್ರಸಾದದಲ್ಲಿ ಲಿಂಗ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ.
ಸೋಮವಾರ ಸಂಜೆ ಶಿರಮಗೊಂಡನಹಳ್ಳಿಯ ಶ್ರೀ ಚನ್ನಬಸವೇಶ್ವರ ಸ್ವಾಮಿಯನ್ನು ಸ್ವಾಗತಿಸಿ, ಗ್ರಾಮದ ಶ್ರೀ ಬಸವೇಶ್ವರ, ಶ್ರೀ ಆಂಜನೇಯ ಸ್ವಾಮಿ ಮೂರ್ತಿಗಳನ್ನೂ ಪಲ್ಲಕ್ಕಿಯಲ್ಲಿರಿಸಿ, ಮಹೇಶ್ವರ ಸ್ವಾಮಿ ಗದ್ದಿಗೆ ಸ್ಥಳದವರೆಗೆ ಮೆರವಣಿಗೆ ನಡೆಸಲಾಯಿತು.
ಮಂಗಳವಾರ ಮಧ್ಯಾಹ್ನ ಬೆಲ್ಲದ ಬಂಡಿ ಎತ್ತುಗಳನ್ನು ಡೊಳ್ಳು-ಹಲಗೆ ಮೆರವಣಿಗೆ ಮತ್ತು ಸಂಜೆ 7 ರಿಂದ ಶ್ರೀ ದುರುಗಮ್ಮನ ಕಾರ್ತಿಕೋತ್ಸವ ಜರುಗಿತು.
ಬುಧವಾರ ಮಧ್ಯಾಹ್ನ ಎತ್ತುಗಳ ಮೆರವಣಿಗೆ ಇದೆ. ಸಂಜೆ, ತೋಟದ ಮಠದವರೆಗೆ ಮೆರವಣಿಗೆ ಮೂಲಕ ಹರಕೆ ಸಲ್ಲಿಸಲಾಗುತ್ತದೆ. ಗದ್ದಿಗೆ ಆವರಣದಿಂದ ತೆರಳುವ ಸ್ವಾಮಿಯ ಮೆರವಣಿಗೆ ಗ್ರಾಮ ಪ್ರವೇಶಿಸಲಿದೆ. ನಂತರ ಬಾವುಟ ಹರಾಜು ಮೊದಲಾದ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹಿರಿಯರು ತಿಳಿಸಿದ್ದಾರೆ.