ದಾವಣಗೆರೆಯಲ್ಲಿದೆ ಟೆನಿಸ್ ಸಂಸ್ಕೃತಿ

ದಾವಣಗೆರೆಯಲ್ಲಿ ಶನಿವಾರ 13ನೇ ಆವೃತ್ತಿಯ ‘ದಾವಣಗೆರೆ ಓಪನ್-2025’ ಟೆನಿಸ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ದಿನೇಶ ಕೆ. ಶೆಟ್ಟಿ, ಉಮಾ ಪ್ರಶಾಂತ್, ಕೆ. ಚಮನ್‌ಸಾಬ್, ಡಾ. ರವಿಕುಮಾರ್ ಟಿ.ಜಿ, ಜಿ.ಇ. ನಂದಗೋಪಾಲ್, ಡಾ.ಎಸ್.ಎಂ. ಬ್ಯಾಡಗಿ ಇದ್ದರು.
ದಾವಣಗೆರೆಯಲ್ಲಿ ಶನಿವಾರ 13ನೇ ಆವೃತ್ತಿಯ ‘ದಾವಣಗೆರೆ ಓಪನ್-2025’ ಟೆನಿಸ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ದಿನೇಶ ಕೆ. ಶೆಟ್ಟಿ, ಉಮಾ ಪ್ರಶಾಂತ್, ಕೆ. ಚಮನ್‌ಸಾಬ್, ಡಾ. ರವಿಕುಮಾರ್ ಟಿ.ಜಿ, ಜಿ.ಇ. ನಂದಗೋಪಾಲ್, ಡಾ.ಎಸ್.ಎಂ. ಬ್ಯಾಡಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಉಮಾ ಪ್ರಶಾಂತ್ ಹೇಳಿಕೆ
  • ಟೂರ್ನಿ ಉದ್ಘಾಟನಾ ಸಮಾರಂಭ
  • ಜಿಮ್ ಉಪಕರಣಗಳಿಗೆ ಚಾಲನೆ
ದಾವಣಗೆರೆ : ದಾವಣಗೆರೆಯಲ್ಲಿ ಟೆನಿಸ್ ಸಂಸ್ಕೃತಿ ಇದೆ. ಇಲ್ಲಿನ ಕ್ರೀಡಾಪಟುಗಳು ಸಾಧನೆ ಮಾಡುವ ಮೂಲಕ ನಗರದ ಪ್ರಸಿದ್ಧಿ ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
ಜಿಲ್ಲಾ ಟೆನಿಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಆಯೋಜಿಸಿರುವ 13ನೇ ಆವೃತ್ತಿಯ ‘ದಾವಣಗೆರೆ ಓಪನ್-2025’ ಟೆನಿಸ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಇಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡಿದ ಕ್ರೀಡಾಪಟುಗಳು, ತರಬೇತುದಾರರಿದ್ದಾರೆ. ನಾನೂ ಇಲ್ಲಿ ಟೆನಿಸ್ ಕಲಿತಿದ್ದೇನೆ. ಹಲವಾರು ಹಿರಿಯ ಅಧಿಕಾರಿಗಳು ಕಲಿತಿದ್ದಾರೆ. ಈ ಕ್ರೀಡಾಂಗಣ ಉತ್ತಮ ಮೂಲಸೌಲಭ್ಯವನ್ನು ಹೊಂದಿದೆ. ಜಿಮ್ ವ್ಯವಸ್ಥೆಯೂ ಆಗಿರುವುದರಿಂದ ಆಟಗಾರರು ವ್ಯಾಯಾಮ ಮಾಡಲು ಅನುಕೂಲವಾಗುತ್ತದೆ. ಜಿಲ್ಲಾ ಕವಾಯತು ಮೈದಾನದಲ್ಲೂ ಟೆನಿಸ್ ಮೈದಾನವಿದೆ ಎಂದು ತಿಳಿಸಿದರು.
ಟೆನಿಸ್‌ನಂಥ ಕ್ರೀಡೆಯನ್ನು ಆಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ. ಲವಲವಿಕೆ ಮೂಡುತ್ತದೆ. ಆದ್ದರಿಂದ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಎಸ್.ಎಸ್. ಮಲ್ಲಿಕಾರ್ಜುನ್ ಮೊದಲ ಬಾರಿ ಸಚಿವರಾದಾಗ ನಗರದಲ್ಲಿ ಟೆನಿಸ್ ಕ್ರೀಡಾಂಗಣ ನಿರ್ಮಾಣವಾಯಿತು. ಅದಕ್ಕೆ ಆ ಸಂದರ್ಭದಲ್ಲಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಹೈಸ್ಕೂಲ್ ಮೈದಾನದಲ್ಲೇ ನಿರ್ಮಿಸಬೇಕು ಎಂದು ಆಗ್ರಹಿಸಿ ನಾನು ಉಪವಾಸ ಮಾಡಿದ್ದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಸಚಿವರಾದ ನಂತರ ಕಬಡ್ಡಿ, ಕೋಕೋ, ಕ್ರಿಕೆಟ್, ಈಜು ಮುಂತಾದ ಕ್ರೀಡೆಗಳಿಗೆ 14 ಜನ ತರಬೇತುದಾರರು ನೇಮಕಗೊಂಡರು. ಕ್ರೀಡಾಪಟುಗಳು ಟ್ರಾೃಕ್ ಸೂಟ್, ಶೂ ಧರಿಸತೊಡಗಿದರು ಎಂದು ಮೆಲುಕು ಹಾಕಿದರು.
ಈಗ ಈ ಕ್ರೀಡಾಂಗಣದಲ್ಲಿ ಒಳ್ಳೆಯ ಟೂರ್ನಿಗಳು ಆಯೋಜನೆಯಾಗುತ್ತಿವೆ. ರಾಜ್ಯ ತಂಡದ ಆಯ್ಕೆ ನಡೆದಾಗಲೆಲ್ಲ ದಾವಣಗೆರೆಯಿಂದ ಇಬ್ಬರು ಅಥವಾ ಮೂವರು ಆಯ್ಕೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಟೆನಿಸ್ ಅಸೋಸಿಯೇಷನ್ ಮಹಾ ಪೋಷಕ ಡಾ.ಎಸ್.ಎಂ. ಬ್ಯಾಡಗಿ ಮಾತನಾಡಿ, ಈ ಟೆನಿಸ್ ಕ್ರೀಡಾಂಗಣದಲ್ಲಿ ಪ್ರತಿ ವರ್ಷ ಟೂರ್ನಿ ಆಯೋಜಿಸುತ್ತ ಬರುತ್ತಿದ್ದೇವೆ. ಆರಂಭದಲ್ಲಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇತ್ತು, ಈಗ ಹೆಚ್ಚಳವಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಡಾ. ರವಿಕುಮಾರ್ ಟಿ.ಜಿ, ಕಾರ್ಯದರ್ಶಿ ಜಿ.ಇ. ನಂದಗೋಪಾಲ್, ಕಾಂಗ್ರೆಸ್ ಮುಖಂಡ ಎ. ನಾಗರಾಜ ಇದ್ದರು.
"

ಎಲ್ಲ ಆಟಗಳಲ್ಲೂ ಕ್ರೀಡಾಪಟುಗಳಿಗೆ ಒಂದೇ ಅವಕಾಶವಿರುತ್ತದೆ. ಟೆನಿಸ್‌ನಲ್ಲಿ ಮಾತ್ರ ಎರಡು ಅವಕಾಶಗಳಿರುತ್ತವೆ. ಜೀವನದಲ್ಲೂ ಒಮ್ಮೆ ತಪ್ಪಾದರೂ ಅದನ್ನು ತಿದ್ದಿಕೊಂಡು ಮುಂದೆ ಸಾಗಬೇಕು. ನಾನು ಮೇಯರ್ ಆಗಿದ್ದ ಅವಧಿಯಲ್ಲಿ ಟೆನಿಸ್ ಕ್ರೀಡಾಂಗಣಕ್ಕೆ ಜಿಮ್ ಮಂಜೂರು ಮಾಡಲಾಗಿತ್ತು, ಅದು ಈಗ ಸಾಕಾರಗೊಂಡು ಉದ್ಘಾಟನೆಯಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಮೇಲ್ಛಾವಣಿ ಹಾಕುವಂತೆ ಬೇಡಿಕೆ ಇದೆ. ಈ ಕುರಿತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net