ಶಿವಶರಣರಿಂದ ಸಿದ್ಧಾಂತ ಶಿಖಾಮಣಿ ತತ್ವ ಬೋಧನೆ

ದಾವಣಗೆರೆಯಲ್ಲಿ ಭಾನುವಾರ, ಬೆಂಗಳೂರಿನ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ ಅವರ ‘ವಚನಾನುಸಂಧಾನ’ ಹಾಗೂ ‘ವೇದೋಪನಿಷತ್ತುಗಳಲ್ಲಿ ವೀರಶೈವ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ನಂದೀಶ್ ಹಿರೇಮಠ,  ಪ್ರೊ.ಸಿ.ವಿ. ಪಾಟೀಲ್,  ಬಿ. ವಾಮದೇವಪ್ಪ, ವಿ.ಎಂ. ಕರಿಬಸಯ್ಯ, ಶಿವಯೋಗಿ ಕಂಬಾಳಿಮಠ, ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಇದ್ದರು.
ದಾವಣಗೆರೆಯಲ್ಲಿ ಭಾನುವಾರ, ಬೆಂಗಳೂರಿನ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ ಅವರ ‘ವಚನಾನುಸಂಧಾನ’ ಹಾಗೂ ‘ವೇದೋಪನಿಷತ್ತುಗಳಲ್ಲಿ ವೀರಶೈವ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ನಂದೀಶ್ ಹಿರೇಮಠ, ಪ್ರೊ.ಸಿ.ವಿ. ಪಾಟೀಲ್, ಬಿ. ವಾಮದೇವಪ್ಪ, ವಿ.ಎಂ. ಕರಿಬಸಯ್ಯ, ಶಿವಯೋಗಿ ಕಂಬಾಳಿಮಠ, ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇದದ ಸಾರ ಪಾಲನೆಯಲ್ಲಿದೆ ವೀರಶೈವ ಬದುಕು
  • ಪ್ರಾಧ್ಯಾಪಕ ಡಾ.ನಂದೀಶ್ ಹಿರೇಮಠ ಹೇಳಿಕೆ
  • ದಾವಣಗೆರೆಯಲ್ಲಿ ಎರಡು ಕೃತಿಗಳ ಬಿಡುಗಡೆ
ದಾವಣಗೆರೆ: ವೀರಶೈವರ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಪುಸ್ತಕ ವಿದೇಶಿ ಭಾಷೆಗಳಲ್ಲೂ ಪ್ರಚಲಿತವಾಗಿದೆ. ಇದರಲ್ಲಿನ ತತ್ವವನ್ನೇ ಬಸವಾದಿ ಶಿವಶರಣರು ನೀಡಿದ್ದಾರೆ. ಲಿಂಗಧಾರಣೆ ಮಹತ್ವ ಅರಿತರೆ ನಿಜವಾದ ವೀರಶೈವರಾಗಬಹುದು ಎಂದು ಬೆಂಗಳೂರಿನ ಪ್ರಾಧ್ಯಾಪಕ ಡಾ.ನಂದೀಶ್ ಹಿರೇಮಠ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಹರಿಹರದ ಮಾನವ ವಿಕಾಸ ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಚನಾನುಸಂಧಾನ’ ಹಾಗೂ ‘ವೇದೋಪನಿಷತ್ತುಗಳಲ್ಲಿ ವೀರಶೈವ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.
ಜಗಕ್ಕೆಲ್ಲ ಒಬ್ಬನೇ ಪರಮಾತ್ಮ. ಧ್ಯಾನ ಮತ್ತು ಪೂಜೆ ಮಾಡಿದರೆ ವೀರಶೈವ ಧರ್ಮದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ್ಯ, ಘನತೆ ಸಿಗಲಿದೆ. ನಾವು ಬಹಿರಂಗವಾಗಿ ಅಲ್ಲದೆ ಅಂತರಂಗದಲ್ಲಿ ಇಷ್ಟಲಿಂಗ ಧಾರಣೆ ಮಾಡಬೇಕು. ವೇದ ಮಂತ್ರ ಅಥವಾ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ವೀರಶೈವ ಬದುಕು ಸಾಧ್ಯವಾಗಲಿದೆ ಎಂದು ಹೇಳಿದರು.
ಸೃಷ್ಟಿ, ಸ್ಥಿತಿ, ಲಯವೇ ದೇವರು ಎಂಬುದು ಸರಳ ವ್ಯಾಖ್ಯಾನವಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರರೇ ದೇವರು ಎಂಬುದು ಸಿದ್ಧಾಂತ ಶಿಖಾಮಣಿ, ವೇದಗಳು ಹಾಗೂ ವಚನಗಳಲ್ಲಿದೆ. ಇಷ್ಟಲಿಂಗ ಧಾರಿಗೆ ಶೈವ ಎಂದು ಕರೆಯಲಾಗುತ್ತದೆ. ಇಷ್ಟಲಿಂಗ ಧಾರಣೆಯಿಂದ ಪಾಪಗಳು ನಿರ್ಮೂಲನೆ ಆಗಲಿವೆ ಎಂಬುದನ್ನು ಈ ಪುಸ್ತಕದಲ್ಲಿ ಸರಳವಾಗಿ ಹೇಳಲಾಗಿದೆ.
ವೇದ ಮತ್ತು ಆಗಮ ಎಂದರೆ ಜ್ಞಾನ ಮತ್ತು ಪರಂಪರೆಯೇ ಆಗಿವೆ. ಇವೆರಡರ ಸಮ್ಮಿಲನದಿಂದ ಆಗುವ ಅರಿವೇ ಜೀವನ. ಇದನ್ನೇ 28 ಶಿವಾಗಮಗಳಲ್ಲಿ ಹೇಳಲಾಗಿದೆ. ಗುರುಲಿಂಗ ಜಂಗಮ ತತ್ವವನ್ನು ಜೀವನದಲ್ಲಿ ನಿತ್ಯ ಪರಿಪಾಠ ಆಗಿಸಿದ್ದೇವೆ. ವೇದ ಮತ್ತು ಉಪನಿಷತ್ತುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ಹೇಳಿದರು.
ವಚನಾನುಸಂಧಾನ ಹಾಗೂ ವೇದೋಪನಿಷತ್ತುಗಳಲ್ಲಿ ವೀರಶೈವ ಎಂಬ ಈ ಎರಡೂ ಕೃತಿಗಳು ಕನ್ನಡ ಭಾಷೆ ಹಾಗೂ ವೀರಶೈವ ಸಂಸ್ಕೃತಿಗೆ ವಿಶೇಷ ಕೊಡುಗೆ ಆಗಿವೆ. ಭಾರತೀಯ ಸಂಸ್ಕೃತಿಗೆ 5ಸಾವಿರ, ವೇದಕ್ಕೆ 3ಸಾವಿರ, ಉಪನಿಷತ್ತಿಗೆ 2800 ವರ್ಷಗಳ ಇತಿಹಾಸವಿದೆ. ವೇದೋಪನಿಷತ್ತುಗಳಲ್ಲಿ ಆತ್ಮ, ಬ್ರಹ್ಮ ಮತ್ತು ಮೋಕ್ಷ ಎಂಬ ವಿಷಯಗಳಿವೆ ಎಂದು ಹೇಳಿದರು.
‘ವಚನಾನುಸಂಧಾನ’ ಕೃತಿ ಕುರಿತು ಮಾತನಾಡಿದ ಹರಿಹರದ ಸಾಹಿತಿ ಪ್ರೊ.ಸಿ.ವಿ. ಪಾಟೀಲ್, ಪರಂಪರೆಗೆ ನಾವು ಗೌರವಿಸಬೇಕು. ಅದು ಚಲನಶೀಲತೆ ಪಡೆದುಕೊಂಡಲ್ಲಿ ಪ್ರಗತಿಶೀಲ ಎನಿಸಿಕೊಳ್ಳುತ್ತದೆ. ಗ್ರಂಥಗಳನ್ನು ಜಗುಲಿ ಮೇಲಿಟ್ಟು ಪೂಜಿಸಿದರೆ ಸಾಲದು. ಅವನ್ನು ಓದಿ ನಿತ್ಯ ಪ್ರಚಾರ ಮಾಡುವ ಅಗತ್ಯವಿದೆ ಎಂದರು.
ಭಾಷಾ ವಿಜ್ಞಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಸವಣ್ಣ ಅವರು ಈ ನೆಲದ ಭಾಷೆ ಕನ್ನಡದ ಮೂಲಕವೇ ತತ್ವ ಸಿದ್ಧಾಂತ ಹೇಳಬಯಸಿದರು. ತನ್ಮೂಲಕ ಹೊಸ ಸಮಾಜ ನಿರ್ಮಾಣದ ಕನಸು ಕಂಡರು. ಅಂತೆಯೇ ವಿಶ್ವಕ್ಕೆ ಕನ್ನಡ ಭಾಷೆಯ ದೊಡ್ಡ ಕೊಡುಗೆಗಳಲ್ಲಿ ವಚನ ಸಾಹಿತ್ಯವೂ ಒಂದಾಗಿದೆ ಎಂದರು.
ಬಸವಾದಿ ಶಿವಶರಣರು ವೇದಾಗಮಗಳ ವಿರೋಧಿಗಳಾಗಿದ್ದರು ಎಂಬ ಆರೋಪಕ್ಕೆ ವಚನಕಾರರ ವಚನಗಳ ಮೂಲಕವೇ ಉತ್ತರ ನೀಡುವ ಕೆಲಸವನ್ನು ಕೃತಿ ರಚನಾಕಾರರು ಮಾಡಿದ್ದಾರೆ. ವೇದಾಗಮಗಳನ್ನು ಮೀರಿ ನಡೆಯಲಾಗದು ಎಂಬ ಬಸವಣ್ಣ ಅವರ ವಚನವೇ ಇದಕ್ಕೆ ಉತ್ತರವಾಗಿದೆ ಎಂದು ಹೇಳಿದರು.
ಇತಿಹಾಸವು ನಮ್ಮ ಗಂಟಲು ಹಾಗೂ ಹೃದಯದಲ್ಲಿದ್ದಾಗ್ಯೂ ಅದನ್ನು ನುಂಗುವ ಪ್ರವೃತ್ತಿ ವಿದ್ವಾಂಸರಲ್ಲಿ ಹೆಚ್ಚಿದೆ. ಅನುಸಂಧಾನ ಎಂದರೆ ಧ್ಯಾನ ಅಥವಾ ದೇನಿಸುವುದು ಎಂಬ ಅರ್ಥವಿದೆ. ಸತ್ಯ, ಸಂಶೋಧನೆಗಳನ್ನು ನುಂಗುವ ಚಾಳಿಗೆ ಈ ಕೃತಿ ಉತ್ತರ ನೀಡಲಿದೆ. ಇದರಲ್ಲಿ 25 ವಿಧದ ವಿಷಯಗಳನ್ನು ವಿಷದೀಕರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃತಿಕಾರ, ಬೆಂಗಳೂರಿನ ಸಂಶೋಧಕ ಡಾ.ಸಿ. ಶಿವಕುಮಾರಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಮಾನವ ವಿಕಾಸ ಫೌಂಡೇಷನ್ ಅಧ್ಯಕ್ಷ ವಿ.ಎಂ. ಕರಿಬಸಯ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಇದ್ದರು. ಶಿವಯೋಗಿ ಕಂಬಾಳಿಮಠ ಆಶಯ ನುಡಿಯಾಡಿದರು. ದಿಳ್ಯೆಪ್ಪ ಸ್ವಾಗತಿಸಿದರು. ರೇವಣಸಿದ್ದಪ್ಪ ಅಂಗಡಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net