ದಾವಣಗೆರೆ: ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ದೇಶವ್ಯಾಪಿ ಮೊದಲ ಬಾರಿಗೆ ಎಚ್‌ಪಿವಿ ಲಸಿಕೆ ಅಭಿಯಾನ ಶುರುವಾಗಿದೆ. ಜಿಲ್ಲೆಯಲ್ಲೂ ಇದಕ್ಕೆ ವೇಗ ನೀಡಲು ಆರೋಗ್ಯ ಇಲಾಖೆ ಹೆಜ್ಜೆ ಇಟ್ಟಿದೆ.
ಪ್ರತಿ ಲಸಿಕೆಗೆ 5 ಸಾವಿರ ರೂ.ಬೆಲೆ ಇದೆ. ಇದನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕಾಗಿ 14ರಿಂದ 15 ವಯಸ್ಸಿನೊಳಗಿನ 18695 ಹೆಣ್ಣುಮಕ್ಕಳನ್ನು ಗುರುತಿಸಲಾಗಿದೆ. ಇದರಲ್ಲಿ ಇದುವರೆಗೆ 4198 ಹೆಣ್ಣುಮಕ್ಕಳು ಲಾಭ ಪಡೆದಿದ್ದಾರೆ.
ಮಾ. 13ರಿಂದ ಏ.28ರವರೆಗೆ ಶೇ.22ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಗೆ 15175 ಡೋಸ್ ಇದುವರೆಗೆ ಸರಬರಾಜಾಗಿದೆ. ಕೆಲವೊಂದು ಕಾರಣಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಲಸಿಕೆ ಪಡೆಯಲು ಹಿಂಜರಿಕೆ ಇದೆ. ಅಂತಹ ಕಡೆಗಳಲ್ಲಿ ಮನವೊಲಿಸಿ ಲಸಿಕೆ ಕೊಡಿಸಲು ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಟಾಸ್ಕ್ ನೀಡಲಾಗಿದೆ.
ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಹಾಸ್ಟೆಲ್ ಸಿಬ್ಬಂದಿ ಲಸಿಕೆ ಅಭಿಯಾನದ ವೇಗ ಹೆಚ್ಚಿಸುವ ಭಾಗವಾಗಿ ಅರಿವು ಮೂಡಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರು ಸೂಚನೆ ನೀಡಿದ್ದಾರೆ. ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಪಾಲಕರ ಫೋನ್ ನಂಬರ್‌ಗಳಿಗೆ ಲಸಿಕೆ ಮಹತ್ವ ಹಾಗೂ ಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
ಹ್ಯೂಮನ್ ಪ್ಯಾಪಿಲೋಮ ವೈರಸ್‌ನಿಂದ ಜನನಾಂಗದ ಸೋಂಕು ಕಾಣಿಸಿಕೊಂಡು ಕ್ಯಾನ್ಸರ್‌ಕಾರಕ ಆಗಲಿದೆ. 2022ರಲ್ಲಿ ವಿಶ್ವಾದ್ಯಂತ 6.5 ಲಕ್ಷ ಮಹಿಳೆಯರು, ಭಾರತದಲ್ಲಿ 78 ಸಾವಿರ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗಿತ್ತು. ಭಾರತದಲ್ಲಿ 34 ಸಾವಿರ ಮಹಿಳೆಯರು ಈ ಕಾಯಿಲೆಯಿಂದ ಮೃತಪಟ್ಟಿದ್ದರು.
ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. 2024ರಲ್ಲಿ ಸುಮಾರು 78,499 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ 48,392 ಸಾವು ಸಂಭವಿಸಿವೆ. ಜಗತ್ತಿನ 159 ದೇಶಗಳಲ್ಲಿ 55 ಕೋಟಿ ಜನರಿಗೆ ಇಲ್ಲಿಯವರೆಗೆ ಎಚ್‌ಪಿವಿ ಲಸಿಕೆ ನೀಡಲಾಗಿದ್ದು ಅಡ್ಡಪರಿಣಾಮವಾಗಿಲ್ಲ ಎಂಬುದು ಅಧಿಕಾರಿಗಳ ಮಾತು.
ಎಚ್‌ಪಿವಿ, ಇದು ಜೀವಮಾನದಲ್ಲಿ ಒಮ್ಮೆ ಮಾತ್ರ ನೀಡುವ ಲಸಿಕೆಯಾಗಿದೆ. 15 ವರ್ಷ 3 ತಿಂಗಳು ತುಂಬಿದ ಹೆಣ್ಣುಮಕ್ಕಳಿಗೂ ಲಸಿಕೆ ನೀಡಲು ಅವಕಾಶವಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಶಾಲಾ ಗುರುತಿನ ಚೀಟಿ ಸೇರಿ ಜನನದ ದೃಢೀಕರಣವುಳ್ಳ ಪತ್ರದ ಆಧಾರದಡಿ ಇದನ್ನು ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲೆಯ ಎಲ್ಲ 98 ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಈ ಅಭಿಯಾನ ನಡೆಯುತ್ತಿದೆ. ಕೆಲವೆಡೆ ಲಸಿಕೆಗೆ ಬಗ್ಗೆ ಇರುವ ಭಯ ಹಾಗೂ ಮಕ್ಕಳಾಗುವುದಿಲ್ಲ ಎಂಬ ಅಪನಂಬಿಕೆಯಿಂದಾಗಿ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಕೆಲವರು ಖಾಸಗಿಯಾಗಿ ಲಸಿಕೆ ಪಡೆದಿದ್ದಲ್ಲಿ ಅದನ್ನು ಪ್ರತ್ಯೇಕವಾಗಿ ವಿವರ ಸಂಗ್ರಹಿಸಿಡಬೇಕಿದೆ. ಸರ್ಕಾರದ ಸೂಚನೆ ಪ್ರಕಾರ ಸರ್ಕಾರಿ ಕೇಂದ್ರಗಳಲ್ಲಿಯೇ ಈ ಲಸಿಕೆ ನೀಡಬೇಕಿದೆ. ಆದರೆ, ಕೆಲವು ಶಾಲೆಗಳವರು ಹೆಣ್ಣುಮಕ್ಕಳ ಆಧಾರ್‌ಕಾರ್ಡ್‌ಗಳನ್ನಿಡಲು ತಮ್ಮಲ್ಲಿಯೇ ಬಂದು ಲಸಿಕೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಕ್ತ ನಿರ್ದೇಶನ ಬರಬೇಕಿದೆ.
90:70:90ರ ಸೂತ್ರಕ್ಕೆ ಒತ್ತು
ಜಿಲ್ಲೆಯ ಜನಸಂಖ್ಯೆಯ ಶೇ.1ರಂತೆ 18695 ಹೆಣ್ಣುಮಕ್ಕಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ. ಇದರಲ್ಲಿ ಗರಿಷ್ಠ 90ರಷ್ಟು ಹೆಣ್ಣುಮಕ್ಕಳಿಗೆ ಮೇ ಅಂತ್ಯದೊಳಗೆ ಲಸಿಕೆ ಗುರಿ ತಲುಪುವ ಉದ್ದೇಶವಿದೆ.
ತದನಂತರ ಎನ್‌ಸಿಡಿ ಯೋಜನೆಯಡಿ 35 ವರ್ಷ ಮೇಲ್ಪಟ್ಟ ಶೇ.70ರಷ್ಟು ಮಹಿಳೆಯರನ್ನು ಸ್ತ್ರೀನಿಂಗ್ ಮಾಡಿ ಅವರಲ್ಲಿ (ಪಾಪ್‌ಸ್ಮಿಯರ್)ಗರ್ಭಕಂಠ ಕ್ಯಾನ್ಸರ್ ಪತ್ತೆಯಾಗಿದ್ದರ ಮಾಹಿತಿ ಸಂಗ್ರಹಿಸುವುದು. ನಂತರದಲ್ಲಿ ಅದರಲ್ಲಿ ಶೇ. 90ರಷ್ಟು ಮಹಿಳೆಯರಿಗೆ ಸರ್ಕಾರಿ ವ್ಯವಸ್ಥೆಯಡಿ ಚಿಕಿತ್ಸೆ ಕೊಡುವ ಕಾರ್ಯಕ್ರಮ ರೂಪಿಸಲಾಗುತ್ತದೆ. ಲಸಿಕಾ ಅಭಿಯಾನದ ಬಳಿಕ ನಿರಂತರ ಲಸಿಕಾಕರಣದ ಭಾಗವಾಗಿ ಎಚ್‌ವಿಪಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಎಚ್‌ಪಿವಿ ಲಸಿಕಾ ಅಭಿಯಾನ ಜಿಲ್ಲೆಯಲ್ಲಿ ಚುರುಕಾಗುತ್ತಿದೆ. ಈ ಲಸಿಕೆಗಳು ಅತ್ಯಂತ ಸುರಕ್ಷಿತವಾಗಿದ್ದು ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಹೆಣ್ಣುಮಕ್ಕಳು ಹಾಗೂ ಪಾಲಕರಲ್ಲಿ ಈ ಬಗ್ಗೆ ಭಯ ಬೇಡ.