26 ಸಾವಿರ ಟನ್ ಮೀನು ಉತ್ಪಾದನೆ ಗುರಿ

ದಾವಣಗೆರೆ ಜಿಲ್ಲೆಯ ಮೀನುಮರಿ ಪಾಲನಾ ಕೇಂದ್ರವೊಂದರ ದೃಶ್ಯ.
ದಾವಣಗೆರೆ ಜಿಲ್ಲೆಯ ಮೀನುಮರಿ ಪಾಲನಾ ಕೇಂದ್ರವೊಂದರ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಇಲಾಖೆಯಿಂದ ನಡೆದಿದೆ ಸಿದ್ಧತೆ
  • ಸಜ್ಜಾಗಿವೆ ಪಾಲನಾ ಕೇಂದ್ರಗಳು
ದಾವಣಗೆರೆ : ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ಮಳೆರಾಯನ ಆಗಮನಕ್ಕೆ ಕೆರೆ ಕಟ್ಟೆಗಳು ಬಾಯ್ದೆರೆದು ಕುಳಿತಿವೆ. ಜಿಲ್ಲೆಯಲ್ಲಿ 26 ಸಾವಿರ ಟನ್ ಉತ್ಪಾದನೆಯ ಗುರಿಯೊಂದಿಗೆ ಮೀನುಗಾರಿಕೆ ಇಲಾಖೆ ಈ ವರ್ಷದ ಚಟುವಟಿಕೆಗಳಿಗೆ ಸಜ್ಜಾಗುತ್ತಿದೆ.
ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ 94 ಕೆರೆಗಳಿವೆ. 440 ಗ್ರಾಮ ಪಂಚಾಯಿತಿ ಕೆರೆಗಳಿವೆ. ಇದಲ್ಲದೆ ಏಷ್ಯಾದಲ್ಲಿ ಎರಡನೆಯ ಅತಿ ದೊಡ್ಡದಾದ ಸೂಳೆಕೆರೆ, ದೇವರಬೆಳಕೆರೆ ಜಲಾಶಯ ಇದೆ. ಹೊನ್ನಾಳಿ ಮತ್ತು ಹರಿಹರ ತಾಲೂಕುಗಳ ಮೂಲಕ ಹಾದು ಹೋಗುವ 50 ಕಿ.ಮೀ.ನಷ್ಟು ತುಂಗಭದ್ರಾ ನದಿ ಪಾತ್ರವಿದೆ. ಈ ಜಲ ಸಂಪನ್ಮೂಲದಲ್ಲಿ ಮೀನುಗಾರಿಕೆ ನಡೆಯುತ್ತದೆ.
ಕೊಂಡಜ್ಜಿ. ಹೊನ್ನಾಳಿ ಮತ್ತು ಸೂಳೆಕೆರೆಯಲ್ಲಿ ಮೀನು ಮರಿ ಪಾಲನಾ ಕೇಂದ್ರಗಳಿದ್ದು ಅಲ್ಲಿ ಮೀನು ಸಾಕಣೆ ನಡೆಯುತ್ತದೆ. ಅವುಗಳಿಗೆ ಸುಣ್ಣ ಹಚ್ಚಿ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಭದ್ರಾ ಜಲಾಶಯದ ಮೀನುಮರಿ ಉತ್ಪಾದನಾ ಕೇಂದ್ರದಿಂದ ಮೀನುಮರಿ ಪೂರೈಸಲಾಗುತ್ತದೆ. ಸೂಳೆಕೆರೆ ಮೀನು ಮರಿ ಪಾಲನಾ ಕೇಂದ್ರದಲ್ಲಿ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಮೀನುಮರಿ ಪಾಲನೆ ಮಾಡಲಾಗುತ್ತದೆ.
ಕಳೆದ ವರ್ಷ (2025-26) 17,800 ಟನ್ ಮೀನು ಉತ್ಪಾದನೆ ಮಾಡಲಾಗಿತ್ತು. ಈ ವರ್ಷ 26 ಸಾವಿರ ಟನ್ ಗುರಿ ಹೊಂದಲಾಗಿದೆ.

ಮತ್ಸೃದರ್ಶಿನಿಗೆ ನಿವೇಶನ

ದಾವಣಗೆರೆ ಸೇರಿ ರಾಜ್ಯದ 4 ಜಿಲ್ಲೆಗಳಿಗೆ ಮತ್ಸೃದರ್ಶಿನಿ ಮಂಜೂರಾಗಿದ್ದು ಬಜೆಟ್‌ನಲ್ಲಿ ಘೋಷಣೆಯೂ ಆಗಿದೆ.
ಅದಕ್ಕಾಗಿ ನಿವೇಶನದ ಹುಡುಕಾಟ ನಡೆದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಟ್ಟದಲ್ಲಿ, ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಹಂತದಲ್ಲಿ ಸಭೆಗಳಾಗಿ ನಿವೇಶನವನ್ನು ಅಂತಿಮಗೊಳಿಸಬೇಕಿದೆ.
"

ಜಿಲ್ಲೆಯ ಜಲ ಸಂಪನ್ಮೂಲಗಳಲ್ಲಿ ಮೀನು ಮರಿಗಳ ಪಾಲನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಹೆಚ್ಚುವರಿಯಾಗಿ ಬೇಕಿದ್ದರೆ ಬಿ.ಆರ್. ಪ್ರಾಜೆಕ್ಟ್ ಮತ್ತು ಖಾಸಗಿ ಮೀನುಮರಿ ಪಾಲನಾ ಕೇಂದ್ರಗಳಿಂದ ತರಿಸಲಾಗುವುದು. ನೀರಿನ ಕೊಳಗಳನ್ನು ಶುದ್ಧೀಕರಿಸಿ, ಗೊಬ್ಬರ ಮತ್ತು ಔಷಧಗಳನ್ನು ಸಂಗ್ರಹಿಸಿ ಇಡಲಾಗಿದೆ.

— ಡಿ. ಅಣ್ಣಪ್ಪ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net