ದಾವಣಗೆರೆ ಹೊರವಲಯದ ರೆಸಾರ್ಟ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಸ್ಪಿ ಎಚ್.ಟಿ. ಶೇಖರ್, ಡಾ. ಎಚ್.ಎಂ. ಮಹೇಶ್, ಡಾ. ಜಿ.ಎಂ. ಸಂತೋಷ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾತೃಸಂಸ್ಥೆ ಬಿಟ್ಟು ಇತರೆ ಉದ್ಯೋಗ ಹುಡುಕದಿರಿ
ಪಶು ವೈದ್ಯರಿಗೆ ಡಿಸಿ ಗಂಗಾಧರಸ್ವಾಮಿ ಕಿವಿಮಾತು
ದಾವಣಗೆರೆಯಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ
ದಾವಣಗೆರೆ: ಜಾನುವಾರುಗಳಿಗೆ ಆರೈಕೆ, ಚಿಕಿತ್ಸೆ ನೀಡಿ ಅವುಗಳ ಆರೋಗ್ಯ ಕಾಪಾಡುವ ಪಶು ವೈದ್ಯರು, ಪಶುಗಳಿಂದಲೂ ಆತ್ಮರಕ್ಷಣೆ ಮಾಡಿಕೊಳ್ಳುತ್ತಲೂ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ವತಿಯಿಂದ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹ ಧಾಮದಲ್ಲಿ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ, ನೀರಾನೆ ದಾಳಿಯಲ್ಲಿ ಮೃತಪಟ್ಟಿದ್ದನ್ನು ಸ್ಮರಿಸಿ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಚಿಕಿತ್ಸೆ ವೇಳೆ ಆಗುವ ಎದುರಾಗುವ ಕ್ಲಿಷ್ಟ ಸಂದರ್ಭದಲ್ಲಿಯೂ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಜಾನುವಾರುಗಳ ಸೇವೆ, ಚಿಕಿತ್ಸೆ ಕಾರ್ಯ ಉತ್ತಮ ಸೇವೆಯಾಗಿದೆ. ಹೀಗಾಗಿ ಪಶು ವೈದ್ಯರು ತಾವು ಕಲಿತ ವಿದ್ಯೆಯನ್ನು ಬಿಟ್ಟು ಮತ್ತೊಂದು ಇಲಾಖೆ ಅಥವಾ ತಾಪಂ ಇಒ ಹುದ್ದೆಗಳತ್ತ ಆಕರ್ಷಿತರಾಗುವುದು ಸರಿಯಲ್ಲ ಎಂದೂ ಹೇಳಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಪಶು-ಪಕ್ಷಿ, ಜಾನುವಾರುಗಳನ್ನು ಮಕ್ಕಳಂತೆ ಸಾಕಣೆ ಮಾಡುವವರು ರೈತರು, ಸಾರ್ವಜನಿಕರು. ಹೀಗಾಗಿ ಅವರ ಪ್ರೀತಿ ವಿಶ್ವಾಸವನ್ನು ಪಶು ವೈದ್ಯರು ಉಳಿಸಿಕೊಳ್ಳಬೇಕು ಎಂದರು.
ಮೂಕ ಪ್ರಾಣಿಗಳಿಗೆ ನೆರವಾಗುವುದಕ್ಕಿಂತ ಬೇರೊಂದು ಪುಣ್ಯಕೆಲಸವಿಲ್ಲ. ಜಾನುವಾರುಗಳಿಗೆ ನೀವೇ ದೇವರು ಹಾಗೂ ಪಾಲಕರು. ಬಹುತೇಕ ಪಶು ವೈದ್ಯರು ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತ ಸ್ಪಂದಿಸುತ್ತಿದ್ದಾರೆ. ಬೆರಳೆಣಿಕೆಯವರು ಅನುಸರಿಸುತ್ತಿರುವ ವಿಳಂಬ ನೀತಿ ಕಾಲಹರಣ, ಹಿಂಜರಿಕೆ ಕೈಬಿಡಬೇಕು ಎಂದರು.
ಪಶು ವೈದ್ಯಕೀಯ ಇಲಾಖೆಯಲ್ಲಿ ಚುಚ್ಚುಮದ್ದು, ಔಷಧಗಳ ಕೊರತೆ ಇದ್ದಲ್ಲಿ ಜಿಪಂ ವತಿಯಿಂದಲೂ ಪೂರೈಸಲಾಗುವುದು. ಕೆಲವೆಡೆ ಪಶು ಚಿಕಿತ್ಸಾ ಕೇಂದ್ರ, ಆಸ್ಪತ್ರೆಗಳಲ್ಲಿ ಔಷಧಗಳನ್ನು ಸರಿಯಾಗಿ ದಾಸ್ತಾನಿರಿಸದೆ, ಧೂಳುಮಯವಾಗಿ ಇರಿಸಿದ ನಿದರ್ಶನಗಳಿವೆ. ಇದನ್ನು ಬಿಟ್ಟು ಪಶು ಆಸ್ಪತ್ರೆಗಳಲ್ಲಿ ಸ್ವಚ್ಛತೆಯ ವಾತಾವರಣ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಎಸ್ಪಿ ಎಚ್. ಟಿ. ಶೇಖರ್ ಮಾತನಾಡಿ ಭಾರತದ ಕೃಷಿ ಕಾರ್ಯದಲ್ಲಿ ಶೇ.21ರಷ್ಟು ಪಾತ್ರ ಪಶು ವೈದ್ಯರದು. ಈ ವೈದ್ಯರಿಂದ ದೇಶಕ್ಕೆ ಶೇ.5ರಷ್ಟು ಜಿಡಿಪಿ ಕೊಡುಗೆ ಇದೆ. ಮಹಾತ್ಮ ಗಾಂಧೀಜಿ ಅವರು ಕಂಡ ಕನಸಿನಂತೆ ಗ್ರಾಮಸ್ವರಾಜ್ಯ ಆಗಬೇಕಿದೆ. ಗ್ರಾಮೀಣಾಭಿವೃದ್ಧಿ ಮೂಲಕ ರೈತರು ಬಲಗೊಂಡು ಗ್ರಾಮಗಳು ರೋಗಮುಕ್ತವಾಗಲು ಪಶು ವೈದ್ಯರು ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
105 ಮಂದಿ ಪಶು ವೈದ್ಯರುಳ್ಳ ದಾವಣಗೆರೆ ಜಿಲ್ಲಾ ಸಂಘಕ್ಕೆ ಸ್ವಂತ ಕಟ್ಟಡದ ಅಗತ್ಯವಿದೆ. ತರಬೇತಿ ಕೇಂದ್ರ ಹಾಗೂ ಕಾಯಾಘಾಶರರ್ಯಕ್ರಮಗಳ ಆಯೋಜನೆಗೆ ಸುಸಜ್ಜಿತ ಸಭಾಂಗಣವುಳ್ಳ ಕಟ್ಟಡ ಆಗಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಸೂಕ್ತ ಸ್ಥಳದಲ್ಲಿ ಸಿಎ ನಿವೇಶನ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ನಾನೂ ಸಹ ಈ ಹಿಂದೆ ಗುಲ್ಬರ್ಗಾದಲ್ಲಿ ಪಶು ವೈದ್ಯನಾಗಿ ಕಾರ್ಯ ನಿರ್ವಹಿಸಿದ್ದೇವೆ. ಪಶು ವೈದ್ಯರು ಎಂಥದ್ದೇ ಸಂದರ್ಭದಲ್ಲಿ ತಮ್ಮ ಕರ್ತವ್ಯ ಮರೆಯಬಾರದು. ಪಶು ಆಸ್ಪತ್ರೆಗೆ ಬರುವ ರೈತರೊಡನೆ ಸೌಜನ್ಯದಿಂದ ವರ್ತಿಸಿ, ಉತ್ತಮವಾಗಿ ಸ್ಪಂದಿಸಿದರೆ ಅರ್ಧದಷ್ಟು ಸಮಸ್ಯೆ ದೂರ ಮಾಡಬಹುದು. ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಿ ಹಸಿರೀಕರಣದತ್ತ ಗಮನ ನೀಡಿ ಎಂದೂ ಸೂಚ್ಯವಾಗಿ ಹೇಳಿದರು.
ಎಸ್ಸೆಸ್ಸೆಲ್ಸಿ, ಪಿಯು ಪ್ರತಿಭಾವಂತರಾದ ಅಮೂಲ್ಯಾ, ಆರ್. ಅಭಿಜ್ಞಾ ಹಾಗೂ ಯು. ಪ್ರಥಮ್ ಅವರನ್ನು ಗೌರವಿಸಲಾಯಿತು. ಅಣಜಿ ಪಶು ಚಿಕಿತ್ಸಾಲಯದ ವೈದ್ಯ ಡಾ. ಜಿ.ಎಸ್. ಪುರುಷೋತ್ತಮ್ ಅವರಿಗೆ ಶ್ರೇಷ್ಠ ಪಶು ವೈದ್ಯ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎಂ. ಮಹೇಶ್, ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಜಿ.ಎಂ. ಸಂತೋಷ್, ಉಪಾಧ್ಯಕ್ಷ ಡಾ.ಜೆ.ಆರ್. ಬಾಬು ಬುಡೇನ್, ಪ್ರಧಾನ ಕಾರ್ಯದರ್ಶಿ ಡಾ.ಯು.ವಿಶ್ವನಾಥ್, ಜಂಟಿ ಕಾರ್ಯದರ್ಶಿ ಎಸ್.ಜೆ. ಲಕ್ಷ್ಮೀಪತಿ, ಡಾ. ಟಿ.ಎಚ್.ಶಂಕರಪ್ಪ ಇದ್ದರು.