ನ್ಯಾಮತಿ:ಪಟ್ಟಣದ ಪಂಚಾಯಿತಿಯ ರುದ್ರಭೂಮಿ ಜಾಗ ಒತ್ತುವರಿಯಾಗಿದ್ದು, ಆ ಭೂಮಿಯನ್ನು ಗುರುತಿಸಿ ಹದ್ದುಬಸ್ತು ಮಾಡಿಸುವಂತೆ ಬುಧವಾರ ಸಾರ್ವಜನಿಕರು ತಹಸೀಲ್ದಾರ್ ಎಂ.ಪಿ. ಕವಿರಾಜ್ ಅವರಿಗೆ ಮನವಿ ಮಾಡಿದರು.
ಪಟ್ಟಣದ ಎಲ್ಲ ಜನಾಂಗದವರು ಇದೇ ರುದ್ರಭೂಮಿಯನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಕೆಲವರು ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಅಂತ್ಯಕ್ರಿಯೆ ಮಾಡಲು ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಕವಿರಾಜ್ ಅವರು ಪಪಂ ಮುಖ್ಯಾಧಿಕಾರಿ ಪಿ. ಗಣೇಶ್‌ರಾವ್ ಮತ್ತು ಮುಖಂಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರುದ್ರಭೂಮಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ, ಕೂಡಲೇ ಜಾಗವನ್ನು ಅಳತೆ ಮಾಡಿ ಹದ್ದುಬಸ್ತು ಮಾಡುವಂತೆ ಮುಖ್ಯಾಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು. ಅಳತೆ ನಂತರ ಒತ್ತುವರಿ ಮಾಡಿರುವುದು ಕಂಡು ಬಂದರೆ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಪಂ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಹುರಕಡ್ಲೆ ವಿರೂಪಾಕ್ಷಪ್ಪ, ರೆಡ್ಡಿ ನಾಗರಾಜಪ್ಪ , ಜೋಗದ ಕಾಂತರಾಜ್, ರುದ್ರೇಶಾಚಾರಿ, ವಿ. ರಾಜುರಾಯ್ಕರ್, ಹವಳದ ಲಿಂಗರಾಜ್, ವಿಜಯಕುಮಾರ್ ಇತರರು ಇದ್ದರು.