ದಾವಣಗೆರೆಯಲ್ಲಿ ಶನಿವಾರ, ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ನಿರ್ದೇಶಕ ಜಿ.ಪಿ. ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟಿ.ಎಸ್. ಗುರುಮೂರ್ತಿ, ಎಸ್.ಬಸವರಾಜ್, ಶಂಕರಗೌಡ ಪಾಟೀಲ್ ಇತರರಿದ್ದರು.
ದಾವಣಗೆರೆ: ಕಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ದಾವಣಗೆರೆಯಲ್ಲಿ ಮೇ 19ರಂದು ಸಾಂಕೇತಿಕ ಮುಷ್ಕರ, ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ರಾಜ್ಯ ಮಟ್ಟದ ಈ ಹೋರಾಟದಲ್ಲಿ ಕರ್ನಾಟಕದ ವಿವಿಧೆಡೆಯ 5800ಕ್ಕೂ ಹೆಚ್ಚು ಪರವಾನಗಿ ಭೂಮಾಪಕರು ಭಾಗವಹಿಸಲಿದ್ದಾರೆ ಎಂದು ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ನಿರ್ದೇಶಕ ಜಿ.ಪಿ. ಮಂಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಜಯದೇವ ವೃತ್ತದಲ್ಲಿ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ, ನಂತರ ಕಿತ್ತೂರು ಚನ್ನಮ್ಮ ವೃತ್ತ, ಕೋರ್ಟ್ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕಾಲ್ನಡಿಗೆ ಜಾಥಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
2000ನೇ ವರ್ಷದಲ್ಲಿ ಪರವಾನಗಿ ಭೂಮಾಪಕರ ನೇಮಕ ಮಾಡಿಕೊಳ್ಳಲಾಗಿತ್ತು. 2021ರಲ್ಲಿ ಕೆಎಲ್‌ಆರ್ ನಿಯಮಕ್ಕೆ ತಿದ್ದುಪಡಿ ಮಾಡಿ ಸರ್ಕಾರಿ ಭೂ ಮಾಪಕರು ನಿರ್ವಹಿಸುವ ಎಲ್ಲ ಕೆಲಸ ಕೆಲಸಗಳ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.
ಕಳೆದ 23 ವರ್ಷಗಳಿಂದ ಕನಿಷ್ಠ ಸೇವಾ ಶುಲ್ಕಕ್ಕೆ ಕಾರ್ಯ ನಿರ್ವಹಿಸುತ್ತಿರುವ ನಮಗೆ ಕಡತಕ್ಕೆ 360ರೂ. ಮಾತ್ರ ನೀಡಲಾಗುತ್ತಿದೆ. ಅಳತೆ ಪೂರ್ಣಗೊಂಡರೆ 1,200ರೂ. ನೀಡಲಾಗುತ್ತದೆ. ಹಲವಾರು ವರ್ಷಗಳಿಂದ ಸೇವೆ ಕಾಯಮಾತಿ ಇಲ್ಲವೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬೇಡಿಕೆಯೊಂದಿಗೆ ವಿವಿಧ ಹಂತದ ಹೋರಾಟ ನಡೆಸಲಾಗುತ್ತಿದೆ.
ಫೆಬ್ರವರಿಯಿಂದ ಎಲ್ಲಾ ಕೆಲಸ ಸ್ಥಗಿತಗೊಳಿಸಿ, ಹೋರಾಟ ನಡೆಸುತ್ತಿದ್ದೇವೆ. ಹೋರಾಟಕ್ಕೆ ಮುಂದಾದ 46 ಜನರನ್ನು ಅಮಾನತು ಮಾಡಲಾಗಿದೆ. ಸರ್ಕಾರಿ ನೌಕರರೇ ಅಲ್ಲದಿದ್ದರೂ ಯಾವ ಆಧಾರದಲ್ಲಿ ಅಮಾನತು ಮಾಡಲಾಗಿದೆ ಎಂಬುದೇ ಅರ್ಥ ಆಗುತ್ತಿಲ್ಲ ಎಂದು ತಿಳಿಸಿದರು.
ಕೆಲಸ ನಿಲುಗಡೆ ಕಾರಣಕ್ಕೆ ದಾವಣಗೆರೆ ಜಿಲ್ಲೆಯಲ್ಲಿ 35,587 ಸೇರಿ ರಾಜ್ಯದಲ್ಲಿ 5,76,941 ಕಡತಗಳು ವಿಲೇವಾರಿಯಾಗದೆ ಬಾಕಿ ಇವೆ. ಹದ್ದುಬಸ್ತು, ಇ-11, ಪೋಡು ಯಾವ ಕೆಲಸಗಳೂ ನಡೆಯುತ್ತಿಲ್ಲ. ಹೀಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ನಂತರ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಟಿ.ಎಸ್. ಗುರುಮೂರ್ತಿ, ಎಸ್.ಬಸವರಾಜ್, ಶಂಕರಗೌಡ ಪಾಟೀಲ್, ಡಿ. ಮಾರಪ್ಪ, ಡಿ.ಆರ್. ಭಾಸ್ಕರ್, ಶಿವಾನಂದಯ್ಯ, ವೃಷಭೇಂದ್ರಯ್ಯ, ವಿನಯ್‌ಕುಮಾರ್ ಇದ್ದರು.