ದಾವಣಗೆರೆಯಲ್ಲಿ ಭೂಮಾಪಕರ ಶಕ್ತಿ ಪ್ರದರ್ಶನ

ಕಾಯಮಾತಿಗಾಗಿ ಆಗ್ರಹಿಸಿ, ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಡಿ ಪರವಾನಗಿ ಭೂಮಾಪಕರು ದಾವಣಗೆರೆಯ ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಕಾಯಮಾತಿಗಾಗಿ ಆಗ್ರಹಿಸಿ, ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಡಿ ಪರವಾನಗಿ ಭೂಮಾಪಕರು ದಾವಣಗೆರೆಯ ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಯಂ ಇಲ್ಲವೇ ಸಮಾನ ಕೆಲಸಕ್ಕೆ ಸೂಕ್ತ ವೇತನ ಕೊಡಿ
  • 300 ಸರ್ವೇಯರ್ಸ್‌ ಅಮಾನತು ಆದೇಶ ವಾಪಾಸಿಗೆ ಆಗ್ರಹ
  • ಹೋರಾಟಕ್ಕೆ ಬೆಂಬಲಿಸಿದ ರೈತ ಸಂಘಟನೆಗಳು
ದಾವಣಗೆರೆ: ನಮ್ಮನ್ನು ಕಾಯಂಗೊಳಿಸಿ. ಇಲ್ಲವೇ ಅದು ಸಾಧ್ಯವಾಗುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂಬ ಕೂಗಿನೊಂದಿಗೆ ದಾವಣಗೆರೆಯಲ್ಲಿ ನೆರೆದಿದ್ದ ಸಾವಿರಾರು ಪರವಾನಗಿ ಭೂಮಾಪಕರು ಮಂಗಳವಾರ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು.
ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಡಿ ರಾಜ್ಯದ ವಿವಿಧೆಡೆಗಳಿಂದ ಭಾಗವಹಿಸಿದ್ದ ಭೂಮಾಪಕರು ಇಲ್ಲಿನ ಹೈಸ್ಕೂಲ್ ಮೈದಾನದಿಂದ ಮೆರವಣಿಗೆ ಮೂಲಕ ಜಯದೇವ ವೃತ್ತ ಸೇರಿ ಮಾನವ ಸರಪಳಿ ರಚಿಸಿದರು. ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದರು. ರೈತ ಸಂಘ ಹಾಗೂ ಹಸಿರು ಸೇನೆ ಇತರೆ ಸಂಘಟನೆಗಳು ಪ್ರತಿಭಟನೆಗೆ ಬೆಂಬಲಿಸಿದವು.
ಸಂಘದ ರಾಜ್ಯಾಧ್ಯಕ್ಷ ತಿರುಮಲೇಗೌಡ ಮಾತನಾಡಿ ಸರ್ಕಾರಿ ಭೂಮಾಪಕರಿಗೆ 60 ಸಾವಿರ ರೂ.ನಿಂದ 1 ಲಕ್ಷ ರೂ. ವೇತನ ಶೇಣಿ ಇದೆ. ಆದರೆ ನಾವು ಪರವಾನಗಿ ಭೂಮಾಪಕರು ಕಳೆದ 23 ವರ್ಷದಿಂದ ಪರವಾನಗಿ ತಿಂಗಳಿಗೆ ಸುಮಾರು 15 ಸಾವಿರ ರೂ. ಸಂಭಾವನೆಯಲ್ಲಿಯೇ ಬದುಕುವ ಸ್ಥಿತಿ ಇದೆ. ಸರ್ವೇ ಕೆಲಸ ಜತೆಗೆ ಸರ್ಕಾರದ ಯೋಜನೆ, ಡಿಜಟಲೀಕರಣ ಇತ್ಯಾದಿಗೆ ಬಳಸಿಕೊಳ್ಳುವ ಸರ್ಕಾರ ನಮ್ಮ ಬೇಡಿಕೆ ಈಡೇರಿಸದೆ ಕಡೆಗಣಿಸುತ್ತಿದೆ ಎಂದು ದೂರಿದರು.
ಕಾನೂನು ಹೋರಾಟ ನಡೆಸಿದಾಗ ನಮ್ಮನ್ನು ಒಂದು ಬಾರಿ ವಿಶೇಷ ನೇಮಕಾತಿ ಮಾಡುವ ಅವಕಾಶ ದೊರೆತಿದೆ. 8 ವಾರದೊಳಗೆ ಸಕ್ರಮ ಮಾಡಿಕೊಳ್ಳಬಹುದು ಎಂದು ಕೋರ್ಟ್ ಕೂಡ ಹೇಳಿದೆ. 5800 ಮಂದಿ ಭೂಮಾಪಕರು ಕೆಲಸ ಸ್ಥಗಿತಗೊಳಿಸಿ ಎರಡೂವರೆ ತಿಂಗಳಿಂದ ಮುಷ್ಕರ ನಡೆಸುತ್ತಿದ್ದು, ರಾಜ್ಯದಲ್ಲಿ ಸುಮಾರು 11 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇಯಾಗಿಲ್ಲ. ಇದು ನಮ್ಮ ಅಗತ್ಯತೆಯನ್ನು ತೋರಿಸಲಿವೆ ಎಂದರು.
ಭೂಮಾಪಕರು ಸಣ್ಣ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. 1500 ಮಹಿಳಾ ಸರ್ವೇಯರ್‌ಗಳಿಗೂ ಭದ್ರತೆ ಸಮಸ್ಯೆ ಇದೆ. ನಾವು ಕೂಡ ರೈತರ ಮಕ್ಕಳು. ಕಳೆದ 3 ದಿನದ ಹಿಂದಷ್ಟೇ 300 ಮಂದಿ ಭೂಮಾಪಕರ ಲೈಸೆನ್ಸ್ ರದ್ದುಪಡಿಸಿ ಅಮಾನತುಗೊಳಿಸಲಾಗಿದೆ. ಇದನ್ನು ಹಿಂಪಡೆಯಬೇಕು. ನಮ್ಮನ್ನು ಜೀತಮುಕ್ತಗೊಳಿಸಬೇಕು ಎಂದು ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ ವಿಪಕ್ಷದಲ್ಲಿದ್ದಾಗ ಭೂಮಾಪಕರ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದ ಸಿದ್ದರಾಮಯ್ಯ ಅವರೀಗ ಮೌನ ತಾಳಿದ್ದಾರೆ. ಸಮಾನ ವೇತನಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ ಶಾಸಕರ ವೇತನವನ್ನು ಮನಸೋಇಚ್ಛೆ ಏರಿಸಿಕೊಳ್ಳುವ ಸರ್ಕಾರ, ಪರವಾನಗಿ ಭೂಮಾಪಕರ ಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯ ಮಟ್ಟದ ಹೋರಾಟ ತೀವ್ರವಾಗಬೇಕು ಎಂದರು.
ಎಸ್‌ಎಫ್‌ಐ ಮುಖಂಡ ಮಹಾಲಿಂಗಪ್ಪ ಹಿರೇಮಲ್ಲನಹೊಳೆ ಮಾತನಾಡಿ ರೈತರ ಹೊಲಗಳಲ್ಲಿ ಅಳತೆ ಮಾಡಿ ಬೆವರು ಸುರಿಸುವ ಭೂಮಾಪಕರನ್ನು ಸರ್ಕಾರ ಬೀದಿಗೆ ತಂದು ನಿಲ್ಲಿಸಿದೆ. ಈ ಜನರ ಬಗ್ಗೆ ಕಂದಾಯ ಇಲಾಖೆ ಸಚಿವರಿಗೆ ಅನುಕಂಪವಿಲ್ಲವೆ? 54 ಸಾವಿರ ಹುದ್ದೆ ತುಂಬದ ಸರ್ಕಾರ, ಭೂಮಾಪಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಯದೇವ ವೃತ್ತದಿಂದ ಪಿ.ಬಿ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಎಡಿಸಿ ಶಿವಕುಮಾರ್ ಶೀಲವಂತ್ ಅವರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಕಂದಾಯ ಇಲಾಖೆಗೆ 498 ಕೋಟಿ ರೂ. ಆದಾಯ ತರುವ ಭೂಮಾಪಕರನ್ನು ಕಡೆಗಣಿಸಬಾರದು. ಸ್ಥಿರ ವೇತನ ನೀಡಬೇಕು. ಕಾಯಮಾತಿಗೆ ಕಾನೂನು ತೊಡಕಿಲ್ಲದಿದ್ದರೂ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಕಂದಾಯ ಇಲಾಖೆ ಹಿಂದೆ ಬಿದ್ದಿದೆ. ಕಂದಾಯ ಸಚಿವರು ಅಧಿಕಾರಿಗಳ ಮಾತು ಕೇಳದೆ ವಿವೇಚನೆ ಬಳಸಬೇಕು. ಬೆಳಗಾವಿ, ಮೈಸೂರು ನಂತರ ದಾವಣಗೆರೆಯಲ್ಲಿ ಪ್ರತಿಭಟನೆ ನಡೆದಿದೆ. ಬೆಂಗಳೂರಲ್ಲಿ ಮುಂದಿನವಾರ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ಹೇಳಿದರು.
ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ರೈತ ಮುಖಂಡರಾದ ತೇಜಸ್ವಿ ಪಟೇಲ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಗುಮ್ಮನೂರು ಬಸವರಾಜ್, ಭರಮಸಮುದ್ರ ಕುಮಾರ್, ಹೊನ್ನೂರು ಮುನಿಯಪ್ಪ, ಮಂಡಲೂರು ವಿಶ್ವನಾಥ್, ಹುಚ್ಚವ್ವನಹಳ್ಳಿ ಸಿದ್ದಪ್ಪ ಚಿಕ್ಕತೊಗಲೇರಿ ಮಲ್ಲಿಕಾರ್ಜುನ, ಕೋಲ್ಕುಂಟೆ ಉಚ್ಚೆಂಗಪ್ಪ, ಭೂಮಾಪಕರ ಸಂಘದ ರಾಜ್ಯ ಗೌರವಾಧ್ಯಕ್ಷ ಭಾರ್ಗವ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಟಿ.ಎಂ. ಪ್ರಸನ್ನಕುಮಾರ್, ಸಂಘಟನಾ ಕಾರ್ಯದರ್ಶಿ ಕೋದಂಡರಾಮು, ಷಣ್ಮುಖ, ದಾವಣಗೆರೆ ಜಿಲ್ಲಾಧ್ಯಕ್ಷ ಟಿ.ಎಸ್. ಗುರುಮೂರ್ತಿ, ಎಸ್.ಬಸವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net