ಎಸ್‌ಐಆರ್ ಬೆಂಬಲಿಸಿ ಪ್ರಜಾಪ್ರಭುತ್ವ ಬಲಪಡಿಸಿ

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಸಂಬಂಧ, ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಸಿರುನಿಶಾನೆ ತೋರಿದರು. ರೇಷ್ಮಾ ಕೌಸರ್, ಮಲ್ಲನಾಯಕ್, ಎನ್.ಮಹಾಂತೇಶ್, ಪಳನಿ ಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮನವಿ
  • ಸ್ವೀಪ್ ಸಮಿತಿಯಿಂದ ದಾವಣಗೆರೆಯಲ್ಲಿ ಜಾಥಾ
  • ಸಹಾಯ ಕೇಂದ್ರಗಳಲ್ಲಿ ಮತದಾರರಿಗೆ ನೆರವು
ದಾವಣಗೆರೆ: ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಸದೃಢಗೊಳಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಎಸ್‌ಐಆರ್ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಾಗುವ ಬಗ್ಗೆ ಸಾರ್ವಜನಿಕರಲ್ಲಿನ ಗೊಂದಲ, ಆತಂಕ ನಿವಾರಿಸಲು ಜಿಲ್ಲಾಡಳಿತದ ವತಿಯಿಂದ ಪ್ರತಿ ವಾರವೂ ಜಾಗೃತಿ ಜಾಥಾಗಳನ್ನು ನಡೆಸುತ್ತಿದೆ. ನೈಜ ಮತದಾರರು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದರು.
ನಿಗದಿತ ಅವಧಿಯೊಳಗೆ ಫಾರಂ ತುಂಬಿ ನೀಡದಿದ್ದಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಷ್ಟವಾಗಲಿದ್ದು, ತದನಂತರ ಆಕ್ಷೇಪಣೆ ಹಾಗೂ ಮೇಲ್ಮನವಿ ಸಲ್ಲಿಸುವಾಗ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಲಿದೆ. ಹೀಗಾಗಿ ಸಾರ್ವಜನಿಕರು ಎನ್ಯುಮರೇಷನ್ ನಮೂನೆಯನ್ನು ಭರ್ತಿ ಮಾಡಿ ಜುಲೈ 29 ರೊಳಗೆ ತಮ್ಮ ಭಾಗದ ಬಿಎಲ್‌ಒಗೆ ಕಡ್ಡಾಯವಾಗಿ ಹಿಂತಿರುಗಿಸಬೇಕು ಎಂದು ಹೇಳಿದರು.
ನಮೂನೆಗಳ ಭರ್ತಿಗಾಗಿ ಸಾರ್ವಜನಿಕರಿಗೆ ಗೊಂದಲ ಅಥವಾ ಸಮಸ್ಯೆಗಳಿದ್ದಲ್ಲಿ ನೆರವಾಗಲು ಜಿಲ್ಲಾದ್ಯಂತ ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ನಗರ ಪ್ರದೇಶದಲ್ಲಿ 87, ಗ್ರಾಮೀಣ ಭಾಗದಲ್ಲಿ 194 ಕೇಂದ್ರಗಳಿದ್ದು, ಬಿಎಲ್‌ಒ ಅಥವಾ ಈ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯಬಹುದು ಎಂದರು.
ಮತದಾರರ ಜಾಗೃತಿ ಹಾಗೂ ಈ ಪ್ರಕ್ರಿಯೆಯ ಅನುಷ್ಠಾನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ಅರ್ಜಿಗಳನ್ನು ಪಡೆದ ನಂತರ ಡಿಜಿಟಲೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ತಮ್ಮ ಪಾಲಕರು, ಇತರೆ ಜಿಲ್ಲೆಗಳಲ್ಲಿನ ಸಂಬಂಧಿಕರಿಗೂ ಮಾಹಿತಿ ನೀಡಿ, ಎಲ್ಲರೂ ಅರ್ಜಿ ತುಂಬಿಕೊಡಲು ತಿಳಿಸಬೇಕು ಎಂದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆರಂಭವಾದ ಜಾಥಾ, ಗ್ರಾಮಾಂತರ ಠಾಣೆವರೆಗೆ ಸಾಗಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ಲೆಕಾರ್ಡ್‌ಗಳನ್ನು ಹಿಡಿದು ಹೆಜ್ಜೆ ಹಾಕಿದರು.
ಜಾಥಾದಲ್ಲಿ ಜಿಪಂ ಯೋಜನಾಧಿಕಾರಿ ರೇಷ್ಮಾ ಕೌಸರ್, ಸಿಪಿಒ ಮಲ್ಲನಾಯಕ್, ಪಾಲಿಕೆ ಆಯುಕ್ತ ಎನ್.ಮಹಾಂತೇಶ್, ಡಿಡಿಪಿಯು ಪಳನಿ ಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
--
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಸಂಬಂಧ, ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಸಿರುನಿಶಾನೆ ತೋರಿದರು. ರೇಷ್ಮಾ ಕೌಸರ್, ಮಲ್ಲನಾಯಕ್, ಎನ್.ಮಹಾಂತೇಶ್, ಪಳನಿ ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net