ಶಾಲೆಗಳಿಗೆ ವಾರದಲ್ಲಿ ಅಕ್ಕಿ, ಗೋಧಿ ಪೂರೈಕೆ

ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಸಂಗ್ರಹ ಚಿತ್ರ.
ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಸಂಗ್ರಹ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಾಹ್ನದ ಬಿಸಿಯೂಟ ಯೋಜನೆ
  • ಬೇಳೆ ಬರುವುದು ಬಾಕಿ
ದಾವಣಗೆರೆ : ನೂತನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಚಾಲನೆ ದೊರೆತಿದೆ. ಶಾಲೆಗಳ ಅಡುಗೆ ಕೋಣೆಯಲ್ಲಿ ಒಲೆಗಳ ಸದ್ದು ಕೇಳಿಸುತ್ತಿದೆ.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿ ವರೆಗಿನ 1491 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1.28 ಲಕ್ಷ ವಿದ್ಯಾರ್ಥಿಗಳು ಮತ್ತು ಪೂರ್ವ ಪ್ರಾಥಮಿಕ ಶಾಲೆಗಳ 2381 ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಮೇ 29 ಮತ್ತು 30ರಂದು ಶಾಲೆಗಳ ಅಡುಗೆ ಕೋಣೆ, ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಬಿಸಿಯೂಟಕ್ಕೆ ಅಣಿಗೊಳಿಸಲಾಯಿತು. ಜೂ. 1ರಂದು ಸಿಹಿಯೂಟದೊಂದಿಗೆ ಪ್ರಸಕ್ತ ಸಾಲಿನ ಚಟುವಟಿಕೆ ಆರಂಭಿಸಲಾಯಿತು.
ಜಿಲ್ಲೆಯಲ್ಲಿ 3245 ಅಡುಗೆ ಸಿಬ್ಬಂದಿ ಈ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯ ಅಡುಗೆಯವರು, ಅವರಿಗೊಬ್ಬರು ಸಹಾಯಕರು ಇರುತ್ತಾರೆ.
ವಿದ್ಯಾರ್ಥಿಗಳಿಗೆ ಬೆಳಗ್ಗೆ 1 ಲೋಟ ಹಾಲನ್ನು (150 ಎಂ.ಎಲ್) ರಾಗಿ ಹೆಲ್ತ್ ಮಿಕ್ಸ್ ಜತೆಗೆ ನೀಡಲಾಗುತ್ತದೆ. ಊಟಕ್ಕೆ ಅನ್ನ-ಸಾಂಬಾರ್, ಪಲಾವ್, ಬಿಸಿಬೇಳೆ ಬಾತ್ ಇತ್ಯಾದಿ ಯಾವುದಾದರೂ ಒಂದನ್ನು ನೀಡಲಾಗುತ್ತದೆ. ವಾರದಲ್ಲಿ 6 ದಿನ ಮೊಟ್ಟೆ ಅಥವಾ ಬಾಳೆ ಹಣ್ಣನ್ನು ಊಟದ ಜತೆಗೆ ಕೊಡಲಾಗುತ್ತದೆ.

ಆಹಾರಧಾನ್ಯ ಸರಬರಾಜು

ಬಿಸಿಯೂಟ ಯೋಜನೆಗೆ ಭಾರತ ಆಹಾರ ನಿಗಮದಿಂದ 3 ತಿಂಗಳಿಗೊಮ್ಮೆ ಅಕ್ಕಿ ಮತ್ತು ಗೋಧಿ ಸರಬರಾಜಾಗುತ್ತದೆ. ಬೇಳೆ ಮತ್ತು ಅಡುಗೆ ಎಣ್ಣೆಯನ್ನು ಮಾತ್ರ 2 ತಿಂಗಳಿಗೊಮ್ಮೆ ರಾಜ್ಯಮಟ್ಟದಲ್ಲಿ ಟೆಂಡರ್ ಮಾಡಿ ಪೂರೈಸಲಾಗುತ್ತದೆ.
ಮಕ್ಕಳ ಸಂಖ್ಯೆಯನ್ನು ಆಧರಿಸಿ ಈಗಾಗಲೇ 2689 ಕ್ವಿಂಟಾಲ್ ಅಕ್ಕಿ, 542 ಕ್ವಿಂಟಾಲ್ ಗೋಧಿ ಕೆಎಸ್‌ಸಿಎಫ್‌ಸಿ ಗೋಡೌನ್‌ಗಳಲ್ಲಿ ದಾಸ್ತಾನು ಮಾಡಲಾಗಿದೆ. 55,596 ಲೀಟರ್ ಅಡುಗೆ ಎಣ್ಣೆಯೂ ಬಂದಿದೆ. ಈ ವಾರದಲ್ಲಿ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಕಳೆದ ಸಾಲಿನಲ್ಲಿ ಉಳಿದಿರುವ ಆಹಾರ ಧಾನ್ಯಗಳನ್ನು ಸದ್ಯಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬೇಳೆ ಮಾತ್ರ ಇನ್ನೂ ಟೆಂಡರ್ ಆಗಿಲ್ಲ, ಅಲ್ಲಿಯ ವರೆಗೆ ಶಾಲಾ ಮಟ್ಟದಲ್ಲೇ ಬೇಳೆ ಖರೀದಿಸಲು ಸಾದಿಲ್ವಾರು (ಪರಿವರ್ತನಾ ವೆಚ್ಚ) ಹಣವನ್ನು ಬಿಡುಗಡೆ ಮಾಡಲಾಗಿದೆ. ಸಾದಿಲ್ವಾರು ಹಣದಲ್ಲೇ ಅಡುಗೆಗೆ ಬೇಕಾದ ತರಕಾರಿ, ಸಾಂಬಾರು ಪುಡಿ, ಸಕ್ಕರೆ ಮುಂತಾದ ಪದಾರ್ಥಗಳನ್ನು ಖರೀದಿಸಲಾಗುತ್ತದೆ.
"

ಮಧ್ಯಾಹ್ನ ಉಪಾಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆ ಶಿಕ್ಷಣ ಇಲಾಖೆಯ ಪ್ರತಿಷ್ಠಿತ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯು ಜಿಲ್ಲೆಯ ಸರ್ಕಾರಿ/ಅನುದಾನಿತ ಶಾಲೆಗಳ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರಲ್ಲಿ ಸ್ವಚ್ಛತೆ, ಸುರಕ್ಷತೆ, ಮಿತವ್ಯಯ ಪ್ರಮುಖವಾಗಿರುತ್ತದೆ. ಶಾಲೆಗಳಲ್ಲಿ ದಾಖಲಾತಿ, ಹಾಜರಾತಿ, ಕಲಿಕೆಗೆ ತುಂಬಾ ಅನುಕೂಲವಾಗಿದೆ.

— ಮಹೇಶ ಎಚ್. ದೊಡ್ಡಮನಿ, ಶಿಕ್ಷಣಾಧಿಕಾರಿ (ಪ್ರಭಾರ), ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಾಹಾರ ಯೋಜನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net