ಸೂಪರ್ ಪವರ್‌ಗೆ ಬೇಕು ವಿನ್ಯಾಸದ ಸ್ಪರ್ಶ

ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿನ್ಯಾಸ ಮತ್ತು ನಾವೀನ್ಯತೆ ಶೃಂಗಸಭೆ’ ಕಾರ್ಯಕ್ರಮದಲ್ಲಿ ಈಶ್ವರೀಯ ವಿವಿ ಪ್ರಧಾನ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿದರು. ಪ್ರೊ. ವೈ.ವೃಷಭೇಂದ್ರಪ್ಪ, ಡಾ.ಎಚ್.ಪಿ. ವಿನುತಾ, ಸತೀಶ್ ಹಿಂದರ್, ಎನ್. ಸುಹಾಸ್, ಬ್ರಹ್ಮಾಕುಮಾರಿ ಸವಿತಾ, ಬಿ.ಕೆ. ರೂಪಂ ಇದ್ದರು.
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿನ್ಯಾಸ ಮತ್ತು ನಾವೀನ್ಯತೆ ಶೃಂಗಸಭೆ’ ಕಾರ್ಯಕ್ರಮದಲ್ಲಿ ಈಶ್ವರೀಯ ವಿವಿ ಪ್ರಧಾನ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿದರು. ಪ್ರೊ. ವೈ.ವೃಷಭೇಂದ್ರಪ್ಪ, ಡಾ.ಎಚ್.ಪಿ. ವಿನುತಾ, ಸತೀಶ್ ಹಿಂದರ್, ಎನ್. ಸುಹಾಸ್, ಬ್ರಹ್ಮಾಕುಮಾರಿ ಸವಿತಾ, ಬಿ.ಕೆ. ರೂಪಂ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಜಿನಿಯರ್ ಮಿದುಳನ್ನು ಬದಲಿಸದು ಕೃತಕ ಬುದ್ದಿಮತ್ತೆ
  • ಬಿಐಇಟಿ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಹೇಳಿಕೆ
  • ವಿನ್ಯಾಸ ಮತ್ತು ನಾವೀನ್ಯತೆ ಶೃಂಗಸಭೆ ಕಾರ್ಯಕ್ರಮ
ದಾವಣಗೆರೆ: ವಿಶ್ವದ ಎಲ್ಲ ರಾಷ್ಟ್ರಗಳು ಸೂಪರ್ ಪವರ್ ಬಗ್ಗೆ ಚಿಂತನೆ ನಡೆಸುತ್ತಿವೆ. ಇದು ಸಾಧ್ಯವಾಗಬೇಕಿದ್ದರೆ ಎಲ್ಲ ಕ್ಷೇತ್ರದಲ್ಲೂ ವಿನ್ಯಾಸ ಮಹತ್ವದ ಪಾತ್ರ ವಹಿಸಲಿದೆ ಎಂದು ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಹೇಳಿದರು.
‘ವಿಶ್ವ ವಿನ್ಯಾಸ ದಿನ’ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿವಿ ದಾವಣಗೆರೆ ಶಾಖೆ ವತಿಯಿಂದ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿನ್ಯಾಸ ಮತ್ತು ನಾವೀನ್ಯತೆ ಶೃಂಗಸಭೆ ಕಾರ್ಯಕ್ರಮದಲ್ಲಿ ಮಾತನಾಡಿ ವಿನ್ಯಾಸ ವಿಭಾಗದಲ್ಲಿ ವಿಪುಲ ಉದ್ಯೋಗಕಾಶಗಳಿವೆ ಎಂದು ಹೇಳಿದರು.
ವಿನ್ಯಾಸದ ಹಿನ್ನೆಲೆಯಿಂದಾಗಿ ಜಗತ್ತಿನಲ್ಲಿ ವಿಮಾನಗಳ ಇಂಜಿನ್ ತಯಾರಿಕೆಯಲ್ಲಿ ರೋಸ್‌ವಾಕ್ ಹಾಗೂ ಜನರಲ್ ಎಲೆಕ್ಟ್ರಿಕ್ ಕಂಪನಿಗಳು ಹೆಸರಾಗಿವೆ. ವಿನ್ಯಾಸವಿಲ್ಲದೆ ನಮ್ಮ ತಂತ್ರಜ್ಞಾನ ಬಳಸಲು ಸಾಧ್ಯವಾಗದು. ಕರ್ನಾಟಕದಲ್ಲೂ ಕಾವೇರಿ ಇಂಜಿನ್ ಅಭಿವೃದ್ಧಿ ಹಂತದಲ್ಲಿದೆ. ಹೀಗಾಗಿ ವಿನ್ಯಾಸಕ್ಕೆ ಉತ್ತೇಜನ ನೀಡಬೇಕಿದೆ ಎಂದರು.
ಕೆಲವು ಕಟ್ಟಡಗಳು ಶ್ವೇತ ವರ್ಣದಲ್ಲಿ ಗಮನ ಸೆಳೆಯುತ್ತಿವೆ. ವೈಜ್ಞಾನಿಕವಾಗಿ ಬಿಳಿ ಬಣ್ಣ ಶಾಖವನ್ನು ಪ್ರತಿಫಲಿಸುವುದಿಲ್ಲ. ಅದೇ ರೀತಿಯಲ್ಲಿ ಕಟ್ಟಡ ಎತ್ತರವಾಗಿದ್ದಲ್ಲಿ ಗಾಳಿಯ ಪರಿಮಾಣ ಹೆಚ್ಚಿರುತ್ತದೆ. ಇಂತಹ ಸಣ್ಣಪುಟ್ಟ ಅಂಶಗಳನ್ನೂ ಸಹ ವಿನ್ಯಾಸ ರಂಗದಲ್ಲಿನ ಇಂದಿನ ಯುವಕರು ತಿಳಿಯಬೇಕು ಎಂದು ಹೇಳಿದರು.
ಬಿಐಇಟಿಯ ಸಿಎಸ್ ವಿಭಾಗದ ಮುಖ್ಯಸ್ಥೆ ಡಾ.ಎಚ್.ಪಿ. ವಿನುತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಸಂದರ್ಭದಲ್ಲಿ ಹೊಸ ಸವಾಲು ಎದುರಾಗುತ್ತವೆ. ಅದನ್ನು ಎದುರಿಸಲು ಅನ್ವೇಷಣೆಗಳಿಗೆ ತಯಾರಾಗಬೇಕು. ಕೃತಕ ಬುದ್ಧಿಮತ್ತೆಯನ್ನು ಕೂಡ ಪರಿಮಿತಿಗೆ ತಕ್ಕಷ್ಟು ಬಳಸಬೇಕು. ಇದು ಉದ್ಯೋಗಗಳನ್ನು ತೆಗೆಯುವುದಿಲ್ಲ ಎಂದರು.
ವೃಷಭೇಂದ್ರಪ್ಪ ಮಾತನಾಡಿ ಕಟ್ಟಡ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಇತ್ಯಾದಿಯಲ್ಲಿ ವಿನ್ಯಾಸ ಬೇಕೇ ಬೇಕು. ಎಐಗೆ ಇದನ್ನು ವಹಿಸಿದಾಗ ಮನೆ ಬಾಗಿಲಿಗೆ ಬಾತ್‌ರೂಂ ವಿನ್ಯಾಸ ಮಾಡಿಕೊಡುವ ಅಪಾಯವೂ ಇದೆ. ಹೀಗಾಗಿ ಅಗತ್ಯವಿದ್ದೆಡೆ ಮಾತ್ರ ಕೃತಕ ಬುದ್ಧಿಮತ್ತೆ ಬಳಸಬೇಕು. ಇಂಜಿನಿಯರಿಂಗ್‌ನಲ್ಲಿ ಎಐ ಇದ್ದೇ ಇದೆ. ಅದನ್ನು ಸರಿಯಾಗಿ ಬಳಸಬೇಕು. ಕೃತಕ ಬುದ್ಧಿಮತ್ತೆಯು ನಮ್ಮ ಇಂಜಿನಿಯರಿಂಗ್ ಮಿದುಳನ್ನು ಬದಲಿ ಮಾಡದು ಎಂದರು.
ಸೆವೆನ್‌ಹಿಲ್ಸ್ ಗ್ರೂಪ್‌ನ ಕಾರ್ಯ ನಿರ್ವಾಹಕ ಎನ್. ಸುಹಾಸ್ ಮಾತನಾಡಿ ಬಿಗ್‌ಬಾಸ್ ಮನೆಗೆ ಸೀಮಿತವಾಗದೆ ಆಸ್ಪತ್ರೆ, ರೆಸ್ಟೋರೆಂಟ್, ಜವಳಿ, ಸಿನಿಮಾ ಕ್ಷೇತ್ರದಲ್ಲಿ ಇಂದು ವಿನ್ಯಾಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಾಂತಾರ, ಬಾಹುಬಲಿ, ಕೆಜಿಎಫ್‌ನಂತಹ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಣದಲ್ಲಿ ಶೇ.60ರಷ್ಟು ವೆಚ್ಚ ವಿನ್ಯಾಸಗಾರರಿಗೆ ತಲುಪುತ್ತಿದೆ. ವಿನ್ಯಾಸವು ಪ್ರವರ್ಧಮಾನಕ್ಕೆ ಬರುತ್ತಿದೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ 2030ರೊಳಗೆ 20 ಬಿಲಿಯನ್ ಉದ್ಯೋಗಗಳು ವಿನ್ಯಾಸ ವಿಭಾಗ ಅವಲಂಬಿಸಲಿವೆ. ಆದರೆ ಅದರ ಬಗ್ಗೆ ಅನೇಕರಿಗೆ ಅರಿವಿಲ್ಲ. ಭಾರತದ ಗಡಿಭಾಗದಲ್ಲಿ ಐಐಟಿ ಮಾದರಿಯಲ್ಲೇ ಡಿಸೈನ್ ವಿಭಾಗಕ್ಕೆ ಪ್ರತ್ಯೇಕ ಸಂಸ್ಥೆ ಶುರುವಾಗುತ್ತಿದೆ ಎಂದು ವಿವರಿಸಿದರು.
ಸಿನಿಮಾಗಳ ಪ್ರಮೋಷನ್‌ಗೂ ಕೂಡ ಶೇ.30ರಷ್ಟು ಹಣ ವೆಚ್ಚವಾಗುತ್ತಿದೆ. ಆ್ಯನಿಮೇಷನ್, ಭಿತ್ತಿಪತ್ರ, ಮೇಕಪ್ ಕಲಾವಿದರು, ಫೋಟೋಗ್ರಫಿಯಲ್ಲೂ ವಿನ್ಯಾಸ ಸ್ಪರ್ಶ ಕಾಣಬಹುದು. ವಿನ್ಯಾಸ ಉದ್ಯಮದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಇದರಿಂದ ಭವಿಷ್ಯ ರೂಪಿಸಿಕೊಳ್ಳಲೂ ಬಹುದು ಎಂದರು.
ಹಿರಿಯ ವಾಸ್ತುಶಿಲ್ಪಿ ಸತೀಶ್ ಹಿಂದರ್ ಮಾತನಾಡಿ ವಿನ್ಯಾಸ ರಂಗದಲ್ಲಿ ತೊಡಗುವ ಯುವಜನಾಂಗಕ್ಕೆ ಮೊದಲು ಕಲ್ಪನೆ ಮಾಡಿಕೊಳ್ಳಬೇಕು. ಬಜೆಟ್‌ಗೆ ತಕ್ಕಂತೆ ವಿನ್ಯಾಸ ಮಾಡವ ಮುನ್ನ ಅಧ್ಯಯನ ಮಾಡಬೇಕು. ಹೊಸ ಆಲೋಚನೆಗಳ ಬಗ್ಗೆ ಯೋಜನೆ ಮಾಡಿಕೊಳ್ಳಬೇಕಿದೆ ಎಂದರು.
ರಾಜಯೋಗಿನಿ ಬ್ರಹ್ಮಾಕುಮಾರಿ ಸವಿತಾ, ಬ್ರಷ್‌ಮ್ಯಾನ್ ನಾಗರಾಜ್, ಮೌಂಟ್ ಅಬುನ ಬಿ.ಕೆ. ರೂಪಂ ಇತರರಿದ್ದರು.

ಯಾವುದೇ ಕೆಲಸ ನಿರ್ವಹಿಸುವಾಗಲೂ ಮಾನಸಿಕ ಶಾಂತಿ ಮತ್ತು ಏಕಾಗ್ರತೆ ಅಗತ್ಯವಿದೆ. ಇದು ಜೀವನದ ಬುನಾದಿ ಆಗಬೇಕಿದೆ. ದಿನದ 15 ನಿಮಿಷ ಧ್ಯಾನಕ್ಕೆ ಮೀಸಲಿಡಬೇಕು. ಇದು 3ರಿಂದ ನೂರು ವರ್ಷದವರಿಗೂ ಅತ್ಯವಶ್ಯಕ. ವಿದ್ಯಾರ್ಥಿಗಳು ಚಂಚಲತೆಯಿಂದ ಮುಕ್ತರಾಗಲು ಗುರಿಯತ್ತ ತಲುಪಲು ಧ್ಯಾನ ಸಹಕಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net