ಬಸವಾಪಟ್ಟಣ :ಚನ್ನಗಿರಿ ತಾಲೂಕು ಮರಬನಹಳ್ಳಿ ಬಳಿ ಶುಕ್ರವಾರ, ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಬಿಕಾಂ ವ್ಯಾಸಂಗ ಮಾಡುತ್ತಿದ್ದ ಕುಂದೂರು ಗ್ರಾಮದ ದರ್ಶನ್(21) ಮೃತ ವಿದ್ಯಾರ್ಥಿ. ಬಸ್ ದಾವಣಗೆರೆಯಿಂದ ಹೊನ್ನಾಳಿಗೆ ಬಸವಾಪಟ್ಟಣ ಮಾರ್ಗವಾಗಿ ಬರುವಾಗ ಮರಬನಹಳ್ಳಿ ಬಳಿ ಆ್ಯಕ್ಸೆಲ್ ತುಂಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಅಪಘಾತದ ತೀವ್ರತೆಗೆ ದರ್ಶನ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಬಸ್ಸಿನಲ್ಲಿ ಮಹಿಳೆಯರು, ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಅಪಘಾತವಾದ ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರು. ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರ ತಂದು ಆಂಬುಲೆನ್ಸ್ ಮತ್ತು ಖಾಸಗಿ ವಾಹನಗಳಲ್ಲಿ ಬಸವಾಪಟ್ಟಣ ಹಾಗೂ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಎಸ್ಪಿ ಎಚ್.ಟಿ. ಶೇಖರ್, ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್ ಬಸಾಪುರ, ಡಿಪೋ ಟ್ರಾಫಿಕ್ ಅಧಿಕಾರಿ ಫಕ್ರುದ್ದೀನ್, ಸಾರಿಗೆ ಸಂಸ್ಥೆಯ ತನಿಖಾ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿ, ಸರ್ಕಾರಿ ಬಸ್‌ಗಳು ಹಳೆಯದಾಗಿದ್ದು ಸಮರ್ಪಕ ನಿರ್ವಹಣೆ ಇಲ್ಲದೆ ಸಂಚರಿಸುತ್ತಿವೆ. ಈ ರೀತಿಯ ದುರಂತಗಳಿಗೆ ಕೆಎಸ್‌ಆರ್‌ಟಿಸಿಯೆ ಹೊಣೆ ಎಂದು ದೂರಿದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ ಕುಮಾರ್ ಬಸಾಪುರ ಮಾತನಾಡಿ, ವಿದ್ಯಾರ್ಥಿಯ ಅಂತ್ಯಕ್ರಿಯೆಗೆ 25 ಸಾವಿರ ರೂ. ಪರಿಹಾರ ನೀಡಲಾಗುವುದು. ತನಿಖಾಧಿಕಾರಿಗಳು ಸಂಪೂರ್ಣ ಪರಿಶೀಲಿಸಿದ ಬಳಿಕ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
10 ಲಕ್ಷ ಪರಿಹಾರಕ್ಕೆ ಸೂಚನೆ
ಬಸ್ ದುರಂತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗಂಭೀರ ಗಾಯಗೊಂಡವರಿಗೆ ದಾವಣಗೆರೆ ಎಸ್.ಎಸ್. ಆಸ್ಪತ್ರೆ ಹಾಗೂ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ಕೊಡಿಸುವಂತೆ ನಿರ್ದೇಶನ ನೀಡಲಾಗಿದೆ. ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಓಡಿಸಬೇಕು. ಒಂದು ಟ್ರಿಪ್ ಹೋಗಿ ಡಿಪೋಗೆ ಬಂದ ತಕ್ಷಣವೆ ಬಸ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ದುಸ್ಥಿತಿಯಲ್ಲಿದ್ದರೆ ದುರಸ್ತಿ ಮಾಡಿ ಹಳ್ಳಿ ಮಾರ್ಗಗಳಿಗೆ ಕಳಿಸಬೇಕು ಎಂದು ತಿಳಿಸಿದ್ದಾರೆ.
ಸುಸ್ಥಿತಿಯಲ್ಲಿರದ ಬಸ್‌ಗಳನ್ನು ಯಾವುದೆ ಕಾರಣಕ್ಕೂ ಕಳುಹಿಸಬಾರದು. ಕಳಿಸಿದರೆ ಇಂತಹ ಅವಘಡಗಳು ಸಂಭವಿಸುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.