ಚನ್ನಗಿರಿಯ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರ ಭಾರತಿ ಮಹಿಳಾ ಅಭ್ಯಾಸ ವರ್ಗವನ್ನು ರಾಜ್ಯ ಮಹಿಳಾ ಪ್ರಮುಖ್ ಶೈಲಾ ಹಿರೇಮಠ್ ಉದ್ಘಾಟಿಸಿದರು. ಪುಷ್ಪಾವಾಲಿ, ಮಂಜುಳಾ ಟಿ.ವಿ. ರಾಜು ಇತರರಿದ್ದರು.Cooperative sector
ಚನ್ನಗಿರಿ:ಸಹಕಾರ ಭಾರತಿ ಬಂಧುಗಳು ಅಭ್ಯಾಸ ವರ್ಗಗಳಲ್ಲಿ ಭಾಗವಹಿಸಿ ಪಡೆಯುವ ಮಾಹಿತಿಯನ್ನು ಸದ್ಬಳಕೆ ಮಾಡಿಕೊಂಡು, ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಸಹಕಾರ ಭಾರತಿಯ ಬಲವರ್ಧನೆಗೆ ಕಾರಣವಾಗಬೇಕು ಎಂದು ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ್ ಶೈಲಾ ಹಿರೇಮಠ್ ಹೇಳಿದರು.
ಇಲ್ಲಿನ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಸಹಕಾರ ಭಾರತಿ ತಾಲೂಕು ಮಟ್ಟದ ಮಹಿಳಾ ಅಭ್ಯಾಸ ವರ್ಗದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಕೊಡುಗೆ ಅಪಾರವಾಗಿದೆ. ಮಹಿಳೆಯರು ಸಹಕಾರಿ ಕ್ಷೇತ್ರದ ಕುರಿತು ಹೆಚ್ಚಿನ ಅಧ್ಯಯನ ನಡೆಸಿ, ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಮತ್ತಷ್ಟು ಶಕ್ತಿಯಾಗಿ ಕೆಲಸ ಮಾಡಬೇಕಿದೆ. ಇದರಲ್ಲಿ ಭಾಗವಹಿಸುವ ಮಹಿಳೆಯರಿಗೆ ನಾಯಕತ್ವ, ಆಡಳಿತಾತ್ಮಕ ಕೌಶಲ ಹಾಗೂ ಸಹಕಾರಿ ತತ್ವಗಳನ್ನು ಬೋಧಿಸಲು ಈ ಮಹಿಳಾ ಅಭ್ಯಾಸ ವರ್ಗದ ಮೂಲಕ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸಲು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂತಹ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಇದರಲ್ಲಿ ಮಹಿಳಾ ಸದಸ್ಯರಿಗೆ ಮತ್ತು ನಿರ್ದೇಶಕರಿಗೆ ಸಹಕಾರಿ ಸಂಘಗಳ ನಿರ್ವಹಣೆ, ಕಾಯ್ದೆಗಳು ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಸ್ವಸಹಾಯ ಸಂಘಗಳು ಮತ್ತು ಮಹಿಳಾ ಉದ್ದಿಮೆಗಳನ್ನು ಬಲಪಡಿಸುವ ಕುರಿತು ತಜ್ಞರಿಂದ ಉಪನ್ಯಾಸ ಕೊಡಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದರು.
ಶಿವ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಮಂಜುಳಾ ಟಿ.ವಿ. ರಾಜು ಮಾತನಾಡಿ, ನಾನು ಸಹಕಾರ ಕ್ಷೇತ್ರದ ಕುರಿತು ಅಧ್ಯಯನ ಮಾಡಿದಾಗ ಆಸಕ್ತಿ ಮೂಡಿ ಬಂದೆ. ಮಹಿಳೆಯರಲ್ಲಿ ಸಹಕಾರ ಕ್ಷೇತ್ರವು ನಾಯಕತ್ವ ಗುಣವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಜತೆಗೆ ಮಹಿಳೆಯರು ಆಡಳಿತದ ಪ್ರಮುಖ ಸ್ಥಾನಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳಿಸಲು ಇದು ಮುಖ್ಯ ವೇದಿಕೆಯಾಗಿದೆ ಎಂದರು.
ಸುಖಿ ಸೌಹಾರ್ದ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಕಮಲಾ ಹರೀಶ್ ಮಾತನಾಡಿ, ಸಹಕಾರ ಕ್ಷೇತ್ರಗಳು ದೇಶದ ಆರ್ಥಿಕತೆಯ ಬೆನ್ನಲುಬಾಗಿವೆ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಸ್ಕೃತಿ ಹಾಗೂ ಜವಾಬ್ದಾರಿಗಳ ಕುರಿತು ತಿಳಿವಳಿಕೆ ಮೂಡಿಸಲು ಈ ಅಭ್ಯಾಸ ವರ್ಗ ಸಹಕಾರಿಯಾಗಿದೆ. ಜತೆಗೆ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿಯಲು ಇದು ಉತ್ತಮ ವೇದಿಕೆ ಎಂದರು.
ದಾವಣಗೆರೆ ಸಹಕಾರ ಭಾರತಿ ಜಿಲ್ಲಾ ಮಹಿಳಾ ಪ್ರಮುಖ್ ಪುಷ್ಪಾವಾಲಿ, ತಾಲೂಕು ಮಹಿಳಾ ಪ್ರಮುಖ್ ಸೌಮ್ಯ ವೀರೇಶ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ನೀತು ಬಳ್ಳಾರಿ, ಜಿಲ್ಲಾ ಮಹಿಳಾ ಸಹ ಪ್ರಮುಖ್ ಶುಭ ಐನಳ್ಳಿ, ಜಿಲ್ಲಾ ಮಹಿಳಾ ಕಾರ್ಯಕಾರಿಣಿ ಸದಸ್ಯೆ ಶೋಭಾ ವಿಜಯ್ ಇತರರಿದ್ದರು.