ಒತ್ತಡ ರಹಿತ ಸಹಜ ಕಲಿಕೆ ಅಗತ್ಯ

ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಕಲಾ ಅಂತರ್ಗತ ಶಾಲಾ ಯೋಜನೆಗಳ ಪರಿಚಯ ಕಾರ್ಯಕ್ರಮದಲ್ಲಿ ಕಲ್ಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಕೀರ್ತನಾ, ಪ್ರೀತಿ, ಕಾವೇರಿ ಮತ್ತು ತಂಡದವರು ಸಂಗೀತವನ್ನು ಪ್ರಸ್ತುತಪಡಿಸಿದರು.
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಕಲಾ ಅಂತರ್ಗತ ಶಾಲಾ ಯೋಜನೆಗಳ ಪರಿಚಯ ಕಾರ್ಯಕ್ರಮದಲ್ಲಿ ಕಲ್ಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಕೀರ್ತನಾ, ಪ್ರೀತಿ, ಕಾವೇರಿ ಮತ್ತು ತಂಡದವರು ಸಂಗೀತವನ್ನು ಪ್ರಸ್ತುತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿ.ಎನ್. ಕೃಷ್ಣಮೂರ್ತಿ ಹೇಳಿಕೆ
  • ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ
  • ಸಂಗೀತದ ಪ್ರಸ್ತುತಿ
ದಾವಣಗೆರೆ : ಮಕ್ಕಳ ಕಲಿಕೆ ಸಹಜವಾಗಿರಬೇಕು, ಒತ್ತಡ ರಹಿತವಾಗಿರಬೇಕು. ಖುಷಿಯಿಂದ ಕಲಿಯುವ ವಾತಾವರಣವನ್ನು ಸೃಷ್ಟಿಸಬೇಕು ಎಂದು, ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌ನ ಹಿರಿಯ ಕಾರ್ಯ ನಿರ್ವಹಣಾಧಿಕಾರಿ ಟಿ.ಎನ್. ಕೃಷ್ಣಮೂರ್ತಿ ಹೇಳಿದರು.
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಹಯೋಗದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ, ಕಲಾ ಅಂತರ್ಗತ ಶಾಲಾ ಯೋಜನೆಗಳ ಪರಿಚಯ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಭಯ, ಆತಂಕದಂಥ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅದರಿಂದ ಮುಕ್ತಿ ಪಡೆಯುವ ಜತೆಗೆ ಒತ್ತಡರಹಿತ ಜೀವನದ ಆನಂದವನ್ನು ಅನುಭವಿಸಬಹುದು ಎಂದು ತಿಳಿಸಿದರು.
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯು 30 ವರ್ಷಗಳಿಂದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಪ್ರಸ್ತುತ ಮೈಸೂರಿನ ಅರಿವು ಶಾಲೆ ಹಾಗೂ ಧಾರವಾಡದ ಕಲ್ಕೇರಿ ಸಂಗೀತ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣದಲ್ಲಿ ಕಲಾ ಸಂಯೋಜಿತ ಪ್ರಯೋಗಗಳನ್ನು ಉತ್ತೇಜಿಸುವುದು, ಸ್ಥಳೀಯ ಸಂಪನ್ಮೂಲಗಳನ್ನು ಶಾಲಾ ಬೋಧನಾ ಕ್ರಮಗಳಲ್ಲಿ ಶಿಕ್ಷಕರು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು, ವಿದ್ಯಾರ್ಥಿಕೇಂದ್ರಿತ ಸೃಜನಶೀಲ ಕಲಿಕಾ ವಾತಾವರಣವನ್ನು ಶಾಲೆಯಲ್ಲಿ ಬೆಳೆಸುವ ಉದ್ದೇಶದೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಲ್ಕೇರಿ ಸಂಗೀತ ವಿದ್ಯಾಲಯದ ಸುನೀಲ್ ಮಾನಿ ಮಾತನಾಡಿ, ತಮ್ಮ ಶಾಲೆಯು 2002 ರಲ್ಲಿ ಆರಂಭವಾಯಿತು. ಕೆನಡಾ ದೇಶದ ದಂಪತಿ ಈ ಶಾಲೆಯನ್ನು ಆರಂಭಿಸಿದರು. 20 ಮಕ್ಕಳಿಂದ ಆರಂಭವಾಗಿ ಈಗ 220 ವಿದ್ಯಾರ್ಥಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಇಲ್ಲಿ ಮಕ್ಕಳಿಗೆ ಉಚಿತವಾಗಿ ಹಿಂದುಸ್ತಾನಿ ಸಂಗೀತದ ಶಿಕ್ಷಣವನ್ನು ನೀಡಲಾಗುತ್ತದೆ. ವಿವಿಧ ಉದ್ಯಮಗಳು ಸಿಎಸ್‌ಆರ್ ನಿಧಿಯಿಂದ ನೆರವು ನೀಡುತ್ತಿವೆ. ಮಕ್ಕಳನ್ನು ಪ್ರಾಯೋಜಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ್ ಕುಮಾರ್ ಪಿ.ವಲ್ಲೇಪುರೆ, ಹಿರಿಯ ರಂಗಕರ್ಮಿ ಸಿದ್ದರಾಜು, ಬೆಂಗಳೂರಿನ ರಾಧಿಕಾ ಭಾರದ್ವಾಜ್, ಮುರಳೀಧರ, ಎಸ್.ಎಫ್. ಹುಸೇನಿ, ಅರುಣ್, ನಿರ್ಮಲಾ, ಡಾ. ಮನೋಹರ್, ಲೇಖಕ ಬಾ.ಮ. ಬಸವರಾಜಯ್ಯ, ಕಲಾವಿದರಾದ ಮಹಾಲಿಂಗಪ್ಪ, ರವೀಂದ್ರ ಅರಳಗುಪ್ಪಿ ಭಾಗವಹಿಸಿದ್ದರು.
ಬೆಳಗ್ಗೆಯಿಂದ ಓರಿಗಾಮಿ, ಕಿರಿಗಾಮಿ ಹಾಗೂ ಅನ್ವಯಿಕ ರಂಗಕಲೆ ಬಗ್ಗೆ ಕಾರ್ಯಾಗಾರಗಳು ನಡೆದವು. ಭಾನುವಾರ ಬೆಳಗ್ಗೆ 9.15 ರಿಂದ ಅನ್ವಯಿಕ ಸಂಗೀತ, ನಾಟಕ ಮತ್ತು ಕೀಟಗಳ ಪ್ರಪಂಚ ಕಾರ್ಯಾಗಾರ ನಡೆಯಲಿದೆ. 11.30 ರಿಂದ ಮೈಸೂರಿನ ಅರಿವು ಶಾಲೆ ಮಕ್ಕಳಿಂದ ಮಾಲ್ಗುಡಿಗೆ ದಾರಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 1.15ಕ್ಕೆ ಸಮಾರೋಪ ಕಾರ್ಯಕ್ರಮ ಜರುಗಲಿದೆ.

ಸಂಗೀತ ರಸದೌತಣ

ಕಲ್ಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಕೀರ್ತನಾ, ಪ್ರೀತಿ, ಕಾವೇರಿ ಮತ್ತು ತಂಡದ ಸದಸ್ಯರು ತಾವು ಶಾಲೆಯಲ್ಲಿ ಕಲಿತ ಸಂಗೀತದ ಸುಧೆಯನ್ನು ಉಣಬಡಿಸಿದರು.
ಉಳ್ಳವರು ಶಿವಾಲಯ ಮಾಡುವರು ಎಂಬ ವಚನದೊಂದಿಗೆ ಆರಂಭಿಸಿದರು. ಯಾದವ ನೀ ಬಾ ಯದುಕುಲ ನಂದನ...ಎಂಬ ದಾಸರ ಪದ ಹಾಡಿದರು. ‘ಸುವ್ವಕ್ಕ ಸುವ್ವಲಾಲಿ’ ಎಂಬ ಜಾನಪದ ಗೀತೆ, ರೆಕ್ಕೆ ಇದ್ದರೆ ಸಾಕೇ ಎಂಬ ಭಾವಗೀತೆಯನ್ನು ಪ್ರಸ್ತುತಪಡಿಸಿದರು.
ವಿದ್ಯಾರ್ಥಿಗಳಾದ ಹರೀಶ್, ಸಂಜಯ್, ಕಲ್ಮಗಿ ಅವರ ತಬಲಾ ವಾದನ ಮೋಡಿ ಮಾಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net