ಹೊನ್ನಾಳಿ ಇಂದಿರಾ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರ ವಿತರಣೆ Indira Canteen

ಹೊನ್ನಾಳಿ ಇಂದಿರಾ ಕ್ಯಾಂಟಿನ್‌ನಲ್ಲಿ ಹಳಸಿದ ಆಹಾರ ನೀಡುತ್ತಿರುವ ಬಗ್ಗೆ ಗ್ರಾಹಕರು ನೀಡಿದ ದೂರಿನನ್ವಯ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಗುರುವಾರ ಪರಿಶೀಲನೆ ನಡೆಸಿದರು. ದೂರುದಾರ ಮಂಜುನಾಥ್ ಇದ್ದರು.Indira Canteen
ಹೊನ್ನಾಳಿ ಇಂದಿರಾ ಕ್ಯಾಂಟಿನ್‌ನಲ್ಲಿ ಹಳಸಿದ ಆಹಾರ ನೀಡುತ್ತಿರುವ ಬಗ್ಗೆ ಗ್ರಾಹಕರು ನೀಡಿದ ದೂರಿನನ್ವಯ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಗುರುವಾರ ಪರಿಶೀಲನೆ ನಡೆಸಿದರು. ದೂರುದಾರ ಮಂಜುನಾಥ್ ಇದ್ದರು.Indira Canteen
Published on

ಪ್ರಮುಖ ಮುಖ್ಯಾಂಶಗಳು

  • ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಾಧಿಕಾರಿ
  • ಮೇಲಧಿಕಾರಿಗೆ ವರದಿ ನೀಡುವ ಎಚ್ಚರಿಕೆ
ಹೊನ್ನಾಳಿ: ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಪಟ್ಟಣದ ಎಸ್‌ಎಂಎಫ್‌ಸಿ ಕಾಲೇಜು ಆವರಣದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್’, ಲೋಕಾರ್ಪಣೆಗೊಂಡ ಕೇವಲ ಎರಡೇ ತಿಂಗಳಲ್ಲಿ ಕಳಪೆ ನಿರ್ವಹಣೆಯಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಗುರುವಾರ ಬೆಳಗ್ಗೆ ಮಾರಿಕೊಪ್ಪದ ನಿವಾಸಿ ಮಂಜುನಾಥ್ ಸೇರಿದಂತೆ ಹಲವು ಗ್ರಾಹಕರು ಉಪಾಹಾರ ಸೇವಿಸಲು ಕ್ಯಾಂಟೀನ್‌ಗೆ ತೆರಳಿದ್ದರು. ಈ ವೇಳೆ ಗ್ರಾಹಕರಿಗೆ ನೀಡಲಾದ ಇಡ್ಲಿ-ಸಾಂಬಾರ್‌ನಲ್ಲಿ, ಸಾಂಬಾರ್ ಸಂಪೂರ್ಣವಾಗಿ ಹಳಸಿದ ಸ್ಥಿತಿಯಲ್ಲಿದ್ದು, ಕೆಟ್ಟ ವಾಸನೆ ಬರುತ್ತಿತ್ತು. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಅವರು ಜವಾಬ್ದಾರಿಯುತ ಉತ್ತರ ನೀಡುವ ಬದಲು ಗ್ರಾಹಕರನ್ನೇ ತಾತ್ಸಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮಂಜುನಾಥ್ ಅವರು, ಕೂಡಲೇ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದರು.
ಮುಖ್ಯಾಧಿಕಾರಿ ಭೇಟಿ, ತರಾಟೆ: ದೂರು ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮುಖ್ಯಾಧಿಕಾರಿ ಟಿ. ಲೀಲಾವತಿ, ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಸಾಂಬಾರ್ ಹಳಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕ್ಯಾಂಟೀನ್ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾಹಕರಿಗೆ ಗುಣಮಟ್ಟದ ಬಿಸಿ ಊಟ, ತಿಂಡಿ ನೀಡಬೇಕು. ಇಲ್ಲವಾದರೆ ಮೇಲಧಿಕಾರಿಗಳಿಗೆ ವರದಿ ನೀಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಚ್ಛತೆ ಮರೀಚಿಕೆ: ಕೇವಲ ಆಹಾರದ ಗುಣಮಟ್ಟವಷ್ಟೇ ಅಲ್ಲದೆ, ಕ್ಯಾಂಟೀನ್ ನಿರ್ವಹಣೆಯೂ ಹದಗೆಟ್ಟಿದೆ. ಅಡುಗೆ ಪಾತ್ರೆಗಳು ಗಲೀಜಾಗಿದ್ದು, ಕ್ಯಾಂಟೀನ್ ಸುತ್ತಮುತ್ತ ಕಸ-ಕಡ್ಡಿಗಳು ತುಂಬಿವೆ. ಕ್ಯಾಂಟೀನ್‌ನ ಕೊಳಚೆ ನೀರು ಮುಂಭಾಗದಲ್ಲೇ ಹರಿಯುತ್ತಿದ್ದು, ಅಸಹ್ಯ ಹುಟ್ಟಿಸುತ್ತಿದೆ. ಅಲ್ಲದೆ, ಪ್ರವೇಶ ದ್ವಾರದ ಬಾಗಿಲಿನ ಗಾಜುಗಳು ಒಡೆದು ಹೋಗಿದ್ದರೂ ದುರಸ್ತಿ ಮಾಡಿಲ್ಲ ಎಂಬುದು ಪರಿಶೀಲನೆ ವೇಳೆ ಕಂಡುಬಂದಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆರಂಭವಾದ ಈ ಯೋಜನೆ, ಸರಿಯಾದ ನಿರ್ವಹಣೆ ಇಲ್ಲದೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. ಮುಂದಿನ ದಿನಗಳಲ್ಲಿ ಸುಧಾರಣೆ ಕಾಣದಿದ್ದರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ದೂರುದಾರ ಮಂಜುನಾಥ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net