ಆಭರಣದ ಬ್ಯಾಗ್ ಮಾಲೀಕರಿಗೆ ವಾಪಾಸ್ ಕೊಟ್ಟ ಸಿಬ್ಬಂದಿ

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ
jewelry returned
ಚನ್ನಗಿರಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಆಭರಣವನ್ನು ಮಾಲೀಕರಿಗೆ ಮರಳಿಸಲಾಯಿತು. ಸಿದ್ದೇಶ್, ಗೋಣಿ ಬಸಪ್ಪ, ಮಂಜುನಾಥ್, ವಿಲ್ಸನ್, ಸಂತೋಷ್, ಬಸವರಾಜ್, ಮಂಜುನಾಥ್, ಅಶೋಕ್‌ನಾಯ್ಕ ಇತರರು ಇದ್ದರು.jewelry returned
Published on: 

ಚನ್ನಗಿರಿ: ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಆಭರಣದ ಬ್ಯಾಗ್ ಅನ್ನು ಅದರ ವಾರಸುದಾರರಿಗೆ ಮರಳಿಸಿದ ಘಟನೆ ಚನ್ನಗಿರಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸೋಮವಾರ ನಡೆದಿದೆ.

ಜ್ಯೋತಿಬಾಯಿ ಎಂಬುವವರು ಭಾನುವಾರ ಸೇವಾನಗರ ಗ್ರಾಮದಿಂದ ಹೊಸೂರಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರ ದಟ್ಟಣೆ ಅಧಿಕವಾಗಿದ್ದರಿಂದ ಬ್ಯಾಗನ್ನು ಮರೆತು ಇಳಿದು ಹೋಗಿದ್ದರು. ಮನೆಗೆ ಹೋದ ನಂತರ ಬಸ್‌ನಲ್ಲಿ ಬ್ಯಾಗ್ ಬಿಟ್ಟಿರುವ ಸಂಗತಿ ನೆನಪಾಗಿದೆ. ಗಂಡನಿಗೆ ಹೇಳಿದರೆ ಗಲಾಟೆ ಮಾಡುತ್ತಾರೆ ಎಂಬ ಭಯದಿಂದ ಸುಮ್ಮನಾಗಿದ್ದರು.

ಬಸ್ಸಿನ ಚಾಲಕ ಮಂಜುನಾಥ್ ರಾತ್ರಿ ಬಸ್‌ನಿಂದ ಇಳಿಯುವಾಗ ಬ್ಯಾಗು ಇರುವುದನ್ನು ಗಮನಿಸಿ ಡಿಪೋ ಮ್ಯಾನೇಜರ್ ಸಿದ್ದೇಶ್ ಅವರ ಕೈಗೆ ನೀಡಿದ್ದಾರೆ. ಬೆಳಗ್ಗೆ ಬ್ಯಾಗ್ ಪರಿಶೀಲಿಸಿದ ನಂತರ ಬಟ್ಟೆ ಜತೆ 45 ಗ್ರಾಂ ಬಂಗಾರದ ಆಭರಣ ಸಿಕ್ಕಿದ್ದು, ಮಾಲೀಕರ ಪತ್ತೆಗೆ ಮುಂದಾದರು. ನಂತರ ಚನ್ನಗಿರಿ ಪೊಲೀಸ್ ಠಾಣೆಗೆ ನೀಡುವ ನಿರ್ಧಾರ ಮಾಡಿಕೊಂಡು ಆಭರಣ ಇರುವ ಬಗ್ಗೆ ಚಾಲಕ ಮತ್ತು ಏಜೆಂಟರ ಗ್ರೂಪ್‌ನಲ್ಲಿ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಆಭರಣ ಖರೀದಿಸಿದ್ದ ವಿಳಾಸಕ್ಕೆ ಹೋಗಿ ಅಂಗಡಿ ಮಾಲೀಕರಿಗೆ ವಿಚಾರಿಸುವಷ್ಟರಲ್ಲಿ ಇನ್ನೊಬ್ಬ ಬಸ್ ಚಾಲಕನ ಸಂಬಂಧಿಕರು ಆಭರಣ ಕಳೆದುಕೊಂಡ ಮಾಹಿತಿಯನ್ನು ಅಧಿಕಾರಿಗೆ ತಿಳಿಸಿದ್ದರು.

ನಂತರ ಜ್ಯೋತಿಬಾಯಿ ಮತ್ತು ಮಗಳು, ಆಕೆಯ ಸಹೋದರ ಚನ್ನಗಿರಿ ಡಿಪೋಗೆ ಬಂದು ಸ್ಪಷ್ಟ ಮಾಹಿತಿ ನೀಡಿದ ನಂತರ ಆಭರಣಗಳನ್ನು ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಚಾಲಕ ಹಾಗೂ ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಸಂಚಾರ ನಿರೀಕ್ಷಕ ಗೋಣಿ ಬಸಪ್ಪ, ಭದ್ರತಾ ಶಾಖೆ ಸಿಬ್ಬಂದಿ ಮಂಜುನಾಥ್, ಚಾಲಕರಾದ ವಿಲ್ಸನ್, ಸಂತೋಷ್, ಬಸವರಾಜ್, ಮಂಜುನಾಥ್, ಅಶೋಕ್‌ನಾಯ್ಕ ಇತರರು ಇದ್ದರು.

ಪ್ರಯಾಣಿಕರು ಬಸ್‌ಗಳಲ್ಲಿ ಹೋಗುವಾಗ ತಾವು ತಂದ ವಸ್ತುಗಳ ಮೇಲೆ ನಿಗಾ ವಹಿಸಬೇಕು. ಬಸ್ಸಿನಲ್ಲಿ ಬಿಟ್ಟು ಹೋದ ವಸ್ತ್ತುಗಳನ್ನು ಸಿಬ್ಬಂದಿ ನೋಡಿದರೆ ಜೋಪಾನವಾಗಿಡುತ್ತಾರೆ. ಬೇರೆ ವ್ಯಕ್ತಿಗಳು ಅದನ್ನು ತೆಗೆದುಕೊಂಡು ಹೋದರೆ ನಾವು ಜವಾಬ್ದಾರರಲ್ಲ.
ಸಿದ್ದೇಶ್ ಡಿಪೋ ಮ್ಯಾನೇಜರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net