ದಾವಣಗೆರೆ :ದೈವೀಭಕ್ತರು, ಕಾಯಕ ನಿಷ್ಠರು, ಮೇರು ವ್ಯಕ್ತಿತ್ವದ ಡಾ.ಶಾಮನೂರು ಶಿವಶಂಕರಪ್ಪ ಅವರ ಸಮಾಜ ಸೇವಾ ಕಾರ್ಯಗಳು ಸ್ಮರಣೀಯ ಎಂದು ಚಿಗಟೇರಿ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.
ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ, ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಮನೂರು ಶಿವಶಂಕರಪ್ಪ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳಲ್ಲಿ ಮಾಡಿದ ಸೇವೆ ಅನನ್ಯವಾದುದು. ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಅವರಲ್ಲಿದ್ದ ತಾಳ್ಮೆ, ತಂದೆ-ತಾಯಿಯನ್ನು, ದೇವರನ್ನು ಪೂಜಿಸುವ ಗುಣ ವಿಶೇಷವಾದುದು ಎಂದು ಬಣ್ಣಿಸಿದರು.
ಚಿಕ್ಕ ವ್ಯಾಪಾರದಿಂದ ಆರಂಭಿಸಿ ಸಾವಿರಾರು ಕೋಟಿ ರೂ.ಗಳ ಒಡೆಯರಾದರು. ಕೈಗಾರಿಕೆಗಳನ್ನು ಸ್ಥಾಪಿಸಿ, ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾದರು. ಕಡಿಮೆ ವಿದ್ಯಾಭ್ಯಾಸ ಮಾಡಿದ್ದರೂ ಅವರಲ್ಲಿ ಹೇರಳವಾದ ಸಾಮಾನ್ಯ ಜ್ಞಾನವಿತ್ತು. ನಿಗರ್ವಿಗಳು, ಕಿಂಚಿತ್ತೂ ಅಹಂಕಾರ ಇಲ್ಲದ ಸರಳ, ಸಜ್ಜನಿಕೆ ಉಳ್ಳವರಾಗಿದ್ದರು ಎಂದರು.
ನಾಡಿನ ಅನೇಕ ದೇಗುಲಗಳಿಗೆ, ಮಠ ಮಾನ್ಯಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಅವರ ನಡೆ-ನುಡಿ, ಸತ್ಯತೆ, ಆದರ್ಶ ಗುಣಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರಪ್ಪ, ಹಿರಿಯ ಪತ್ರಕರ್ತ ಎಂ.ಎಸ್. ಶಿವಶರಣಪ್ಪ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ, ಮೆಳ್ಳೇಕಟ್ಟೆ ನಾಗರಾಜಪ್ಪ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ವೀಣಾ ಮಂಜುನಾಥ್, ಶಾಮನೂರು ಬಸಣ್ಣ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕಕ್ಕರಗೊಳ್ಳ ಕೆ.ಬಿ.ಪರಮೇಶ್ವರಪ್ಪ, ಶಿಕ್ಷಕ ನಾಗರಾಜ ಸಿರಿಗೆರೆ, ಶ್ರೀನಿವಾಸ್, ಷಡಾಕ್ಷರಪ್ಪ ವಡ್ಡಿನಹಳ್ಳಿ, ಸಂತೋಷ್, ಸುವರ್ಣಮ್ಮ, ವನಜಾ ಮಹಾಲಿಂಗಯ್ಯ, ಶಿವಾನಂದಪ್ಪ, ಷಣ್ಮುಖಪ್ಪ, ಬಿ.ಟಿ.ಪ್ರಕಾಶ್ ಇದ್ದರು.