ದಾವಣಗೆರೆಯಲ್ಲಿ ಶ್ರೀರಾಮೋತ್ಸವ ಸಂಭ್ರಮ

ಶ್ರೀರಾಮ ಉತ್ಸವ ಸಮಿತಿ ವತಿಯಿಂದ ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀರಾಮೋತ್ಸವದ ಪೂಜಾ ಕಾರ್ಯಕ್ರಮದಲ್ಲಿ  ಶ್ರೀನಿವಾಸ ದಾಸಕರಿಯಪ್ಪ, ಸತೀಶ್ ಪೂಜಾರಿ, ಸಂದೀಪ್ ಗುರೂಜಿ, ಅಮೋಘವರ್ಷ, ಜಿ.ಹರೀಶ್ ಇತರರಿದ್ದರು.
ಶ್ರೀರಾಮ ಉತ್ಸವ ಸಮಿತಿ ವತಿಯಿಂದ ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀರಾಮೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ದಾಸಕರಿಯಪ್ಪ, ಸತೀಶ್ ಪೂಜಾರಿ, ಸಂದೀಪ್ ಗುರೂಜಿ, ಅಮೋಘವರ್ಷ, ಜಿ.ಹರೀಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೃಹತ್ ಮೂರ್ತಿಗಳ ಆಕರ್ಷಕ ಮೆರವಣಿಗೆ
  • ಕಣ್ಸೆಳೆದ ವಿದ್ಯುದಲಂಕಾರ, ಕೋಲ್ಡ್ ಫೈರ್
  • ರಕ್ತದಾನ ಶಿಬಿರ, ಭಕ್ತರಿಗೆ ಪ್ರಸಾದ ವಿತರಣೆ
ದಾವಣಗೆರೆ: ಶ್ರೀರಾಮ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಐದನೇ ಬಾರಿಗೆ ಭಾನುವಾರ ಆಯೋಜಿಸಿದ್ದ ‘ಶ್ರೀರಾಮೋತ್ಸವ’ ಸಾಮಾಜಿಕ ಕಾರ್ಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯ ನೀತಿ ಸಂಹಿತೆ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಬೆಳಗ್ಗೆ ಹರಳೆಣ್ಣೆ ಕೊಟ್ಟಬಸಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 55 ಯುವಕರು ರಕ್ತದಾನದೊಂದಿಗೆ ಸಾಮಾಜಿಕ ಕಾರ್ಯ ಮಾಡಿದರು.
ಸಂಜೆ ಶ್ರೀರಾಮ, ಆಂಜನೇಯ ಸ್ವಾಮಿ ಹಾಗೂ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಗಳನ್ನು ಟ್ರಾೃಕ್ಟರ್ ಇತರೆ ವಾಹನಗಳ ಮೇಲಿರಿಸಿ ಮೆರವಣಿಗೆ ನಡೆಸಲಾಯಿತು. ಪಿ.ಜೆ.ಬಡಾವಣೆಯ ಖಮಿತ್ಕರ್ ಶ್ರೀರಾಮ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ, ಎವಿಕೆ ಕಾಲೇಜು ರಸ್ತೆ ಮೂಲಕ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಗಿಡ್ಡ ತಳಿಯ ಜೋಡಿ ಹಸುಗಳು ಮಕ್ಕಳನ್ನು ಆಕರ್ಷಿಸಿದವು. ನಾಸಿಕ್ ಡೋಲು ವಾದನ ಅಬ್ಬರಿಸಿದರೆ, ಗಣೇಶ ದೇವಸ್ಥಾನದ ಬಳಿ ಶ್ರೀರಾಮ-ಆಂಜನೇಯನ ಕುರಿತಾದ ಹಾಡುಗಳು ಮಾರ್ದನಿಸಿದವು. ಭಾರತ್ ಮಾತಾ ಕೀ ಜೈ, ಜೈ ಜೈ ಶ್ರೀರಾಮ್, ಹರಹರ ಮಹಾದೇವ್ ಘೋಷಣೆಗಳು ಮೊಳಗಿದವು.
ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಬೃಹತ್ ಮೂರ್ತಿಗಳನ್ನು ಇರಿಸಿ, ಶ್ರೀರಾಮನ ಮೂರ್ತಿಗೆ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪಾನಕ, ಕೇಸರಿಬಾತ್ ಪ್ರಸಾದ ವಿತರಿಸಲಾಯಿತು. ವೃತ್ತದ ಸುತ್ತಲೂ ರಾಮೋತ್ಸವದ ವಿವಿಧ ಜಾಹೀರಾತು ಫಲಕಗಳು ರಾರಾಜಿಸಿದವು.
ಬೃಹತ್ ಕ್ರೇನ್ ಮೂಲಕ ಇವೆಂಟ್‌ಗಳಲ್ಲಿ ಬಳಸುವ ವರ್ಣರಂಜಿತ ವಿದ್ಯುದ್ದೀಪಗಳು ರಸ್ತೆ ತುಂಬೆಲ್ಲ ಝಗಮಗಿಸಿದರೆ ಕೋಲ್ಡ್ ಫೈರ್ ಕೂಡ ನೋಡುಗರ ಕಣ್ಸೆಳೆಯಿತು. ಇದಲ್ಲದೆ ಕಾನ್ಪೆಟ್ಟಿ ಬ್ಲೋವರ್ ಯಂತ್ರದ ಮೂಲಕ ಬಣ್ಣ ಬಣ್ಣದ ಕಾಗದಗಳನ್ನು ಗಾಳಿ ಮೂಲಕ ಬಾನೆತ್ತರಕ್ಕೆ ಹಾರಿಬಿಡಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ದಕ್ಷಿಣ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹಸಂಚಾಲಕ ಸತೀಶ್ ಪೂಜಾರಿ, ರಾಷ್ಟ್ರ ರಕ್ಷಾ ಸೇನೆಯ ಸಂದೀಪ್ ಗುರೂಜಿ, ಶ್ರೀರಾಮ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಅಮೋಘವರ್ಷ, ಜಿ.ಹರೀಶ್, ಸಚಿನ್, ಯಶವಂತ್, ನವೀನ್, ಆರ್. ಹರೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net