

ಹರಿಹರ: ಶರನ್ನವರಾತ್ರಿಯ ಆಚರಣೆಗೆ ತಾಲೂಕಿನಾದ್ಯಂತ ಭಾನುವಾರ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ಸಾಮೂಹಿಕ ದಸರಾ ಮಹೋತ್ಸವ ಸಮಿತಿಯಿಂದ ನಗರದ ನಡುವಲ ಪೇಟೆಯ ನಾಮದೇವ ಕಲ್ಯಾಣ ಮಂಟಪದಲ್ಲಿ ಜಗನ್ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಕುಂಕುಮಾರ್ಚನೆ ಮಾಡುವ ಮೂಲಕ ಹನ್ನೊಂದು ದಿನದ ಶರನ್ನವರಾತ್ರಿ ಆಚರಣೆ ಪ್ರಾರಂಭವಾಯಿತು.
ನಗರದ ಮಹಜೇನಹಳ್ಳಿ ಹಾಗೂ ಕಸಬಾ ಗ್ರಾಮದೇವತೆ ಊರಮ್ಮದೇವಿಗೆ ಪ್ರಥಮ ದಿನ ಹೊರನಾಡು ಅನ್ನಪೂರ್ಣೇಶ್ವರಿ ಅಲಂಕಾರ ಮಾಡಿ ಪೂಜೆ ಮಾಡಲಾಯಿತು. ನಗರದ ಭರಂಪುರ ಗ್ರಾಮದೇವತೆ, ಹರ್ಲಾ ಪುರದ ಸೊಲ್ಲಾಪುರದಮ್ಮ, ವಿಜಯ
ನಗರದ ಬನ್ನಿ ಮಹಾಂಕಾಳಿ, ಮೆಟ್ಟಿಲುಹೊಳೆ ರಸ್ತೆಯ ಅಂಬಾಭವಾನಿ, ದೇವಸ್ಥಾನ ರಸ್ತೆಯ ಕನ್ನಿಕಾ ಪರಮೇಶ್ವರಿ, ಹಳ್ಳದಕೇರಿಯ ಏಕನಾಥೇಶ್ವರಿ, ಹಳೇಹರ್ಲಾಪುರದ ಚಾಮುಂಡೇಶ್ವರಿ ಹಾಗೂ ಬನ್ನಿಮಹಾಂಕಾಳಿ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಕ್ಕಡಗಾತ್ರಿ ಕರಿ ಬಸವೇಶ್ವರ, ಕೊಕ್ಕನೂರಿನ ಆಂಜನೇಯ, ಕೆ.ಬೇವಿನಹಳ್ಳಿಯ ಕಾಶಿವಿಶ್ವನಾಥ, ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ಸೇರಿ ವಿವಿಧೆಡೆ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕರು ಹಾಗೂ ಸ್ಥಳೀಯ ದೇವಸ್ಥಾನದ ಸಮಿತಿಯವರು ನಾಡಹಬ್ಬ ಶರನ್ನವರಾತ್ರಿ ಪ್ರಯುಕ್ತ ದೇವಸ್ಥಾನಗಳಿಗೆ ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಿದ್ದು, ಇದು ನೋಡುಗರ ಕಣ್ಮನ ಸೆಳೆಯುವಂತಿದೆ.