ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ಜಿ.ಎಂ. ಗಂಗಾಧರ ಸ್ವಾಮಿ
ಜಿ.ಎಂ. ಗಂಗಾಧರ ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಜು. 29ರ ವರೆಗೆ ಮನೆ-ಮನೆಗೆ ಬಿಎಲ್‌ಒ ಭೇಟಿ
  • ಜಿ.ಎಂ. ಗಂಗಾಧರ ಸ್ವಾಮಿ ಮಾಹಿತಿ
ದಾವಣಗೆರೆ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ 3ನೇ ಹಂತದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅ. 1ಕ್ಕೆ ಅರ್ಹತಾ ದಿನಾಂಕದೊಂದಿಗೆ ಪ್ರಕ್ರಿಯೆ ಜರುಗಲಿದೆ.
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪರಿಷ್ಕರಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಸಾರ್ವಜನಿಕರು ಹಾಗೂ ಮತದಾರರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲ ಬೂತ್‌ಮಟ್ಟದ ಅಧಿಕಾರಿಗಳು ಮಂಗಳವಾರದಿಂದ ಜು. 29ರ ವರೆಗೆ ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಗಾಗಿ ಪ್ರತಿಯೊಬ್ಬರ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಬಿಎಲ್‌ಒಗಳು ಒದಗಿಸುವ ದ್ವಿಪ್ರತಿಯಲ್ಲಿನ ಎರಡು ಫಾರಂಗಳನ್ನು ಭರ್ತಿ ಮಾಡಿ, ಇತ್ತೀಚಿನ ಒಂದು ಬಣ್ಣದ ಭಾವಚಿತ್ರವನ್ನು (ಕಡ್ಡಾಯವಲ್ಲ) ಅಂಟಿಸಿ, ಬಿಎಲ್‌ಒಗಳಿಗೆ ಹಿಂತಿರುಗಿಸಿ ಕಡ್ಡಾಯವಾಗಿ ಸ್ವೀಕೃತಿ ಪಡೆಯಬೇಕು.
ಮತದಾರರ ಅನುಕೂಲಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಾರ್ಡ್‌ಗಳಲ್ಲಿ ಮತದಾರರ ಸಹಾಯ ಕೇಂದ್ರ ಮತ್ತು ಪ್ರತಿ ಮತಗಟ್ಟೆಯಲ್ಲಿ ಬಿಎಲ್‌ಒ ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಅರ್ಹತಾ ದಿನಾಂಕವನ್ನು ಅ. 1 ಎಂದು ನಿಗದಿಪಡಿಸಲಾಗಿದ್ದು, ಜು. 29ರೊಳಗಾಗಿ ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ನಡೆಯಲಿದೆ. ಆ. 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಸಾರ್ವಜನಿಕರು ಆ. 5ರಿಂದ ಸೆ. 4ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿಯು ಆ. 5ರಿಂದ ಅ. 3ರ ಅವಧಿಯಲ್ಲಿ ಜರುಗಲಿದೆ. ಅ. 7ರಂದು ಸುಧಾರಿತ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಸಾರ್ವಜನಿಕರು ಯಾವುದೇ ಗೊಂದಲ ಅಥವಾ ಹೆಚ್ಚಿನ ಮಾಹಿತಿಗಾಗಿ ಆಯಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net