ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು. ಶೀಲವಂತ ಶಿವಕುಮಾರ್ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು. ಶೀಲವಂತ ಶಿವಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿ
  • ಡಿಸಿ ಗಂಗಾಧರ ಸ್ವಾಮಿ ಮಾಹಿತಿ
ದಾವಣಗೆರೆ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದು ಹಾಕಲು ಹಾಗೂ ಮ್ಯಾಪಿಂಗ್ ಮತ್ತು ಪ್ರೋಜೆನಿ (2002ರ ಮತದಾರರ ಪಟ್ಟಿಗೆ ತಾಳೆ ಮಾಡುವುದು) ಮಾಡಲು ಜೂ. 16ರ ವರೆಗೆ ಅವಕಾಶವಿದೆ. ನಂತರ ಪೋರ್ಟಲ್ ಫ್ರೀಜ್ ಆಗಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವ ವರೆಗೆ ಯಾವುದೆ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ ಎಂದರು.
ಪ್ರಕ್ರಿಯೆ ಸಂಬಂಧ ಮತಗಟ್ಟೆ ಅಧಿಕಾರಿಗಳಿಗೆ ಸಿದ್ಧತೆ, ತರಬೇತಿ ಮತ್ತು ಮುದ್ರಣವು ಜೂ. 26ರಿಂದ 29ರ ವರೆಗೆ ನಡೆಯಲಿದೆ. ಮತಗಟ್ಟೆ ಮಟ್ಟದ ಬಿಎಲ್ಒಗಳ ಮನೆ ಮನೆ ಭೇಟಿಯು ಜೂ. 30ರಿಂದ ಜು. 29ರ ವರೆಗೆ ನಡೆಯಲಿದೆ. ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯುವರು ಎಂದು ವಿವರಿಸಿದರು.
ಕರಡು ಮತದಾರರ ಪಟ್ಟಿಯನ್ನು ಆ. 5ರಂದು ಪ್ರಕಟಿಸಲಿದ್ದು ಆಕ್ಷೇಪಣೆಗಳಿದ್ದಲ್ಲಿ ಸೆ. 4ರ ವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಅ. 7ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ ಎಂದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇದ್ದರು.

ಸುಲಭ ವಿಧಾನ

ಎಸ್.ಐ.ಆರ್. ಸುಲಭ ವಿಧಾನವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದು 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು.
2004ರ ಡಿ. 2ರ ವರೆಗಿನ ಜನ್ಮ ದಿನಾಂಕದವರು ಸ್ವಯಂ ಜನ್ಮ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢಪಡಿಸುವ ದಾಖಲೆ ನೀಡಬೇಕು.
2004ರ ಡಿ. 2ರ ನಂತರ ಜನಿಸಿದವರು ಸ್ವಯಂ ಜನ್ಮ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಂದೆ ಹುಟ್ಟಿದ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಾಯಿ ಹುಟ್ಟಿದ ದಿನಾಂಕ, ಸ್ಥಳವನ್ನು ದೃಢಪಡಿಸುವ ದಾಖಲೆ, ಯಾವುದೆ ಪಾಲಕರು ಭಾರತೀಯರಲ್ಲದಿದ್ದರೆ ಜನನದ ಸಮಯದಲ್ಲಿ ಪಾಲಕರ ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆ ನೀಡಬೇಕು.
ಭಾರತದ ಹೊರಗೆ ಜನಿಸಿದವರು ವಿದೇಶದಲ್ಲಿರುವ ಭಾರತೀಯ ಮಿಷನ್‌ನಿಂದ ಜನನ ನೋಂದಣಿ ದಾಖಲೆ ನೀಡಬೇಕು, ನೈಸರ್ಗಿಕವಾಗಿ ಜನಿಸಿದವರು ಪೌರತ್ವ ನೋಂದಣಿ ಪ್ರಮಾಣ ಪತ್ರ ನೀಡಬೇಕು ಎಂದರು.

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ

ಮತದಾರರ ನೋಂದಣಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಆಯಾ ಭಾಗದ ಬಿಎಲ್ಒಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ, ಆನ್‌ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಮತ್ತು ಸಣ್ಣಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವೋಟರ್ ಫೆಸಿಲಿಟೇಶನ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾಲಿಕೆ ವಿಭಾಗೀಯ ಕಂದಾಯ ಕಚೇರಿಗಳಿರುವ 2 ವಲಯಗಳ ಕಚೇರಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಂಟರ್ನೆಟ್ ಅಥವಾ ಕಂಪ್ಯೂಟರ್ ಜ್ಞಾನ ಇಲ್ಲದವರು ಈ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net