ಪ್ರತಿಕೂಲ ಹವಾಮಾನದಿಂದ ಬಿತ್ತನೆ ವಿಫಲ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಬೆಳೆ ವಿಮೆ ಪರಿಹಾರ ಕುರಿತ ಸಭೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿದರು. ಬಲ್ಲೂರು ರವಿಕುಮಾರ್, ಹುಚ್ಚವ್ವನಹಳ್ಳಿ ಮಂಜುನಾಥ್ ಇನ್ನಿತರ ಮುಖಂಡರು ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಬೆಳೆ ವಿಮೆ ಪರಿಹಾರ ಕುರಿತ ಸಭೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿದರು. ಬಲ್ಲೂರು ರವಿಕುಮಾರ್, ಹುಚ್ಚವ್ವನಹಳ್ಳಿ ಮಂಜುನಾಥ್ ಇನ್ನಿತರ ಮುಖಂಡರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಮಾ ಮೊತ್ತದ ಶೇ. 25ರಷ್ಟು ಗರಿಷ್ಠ ಪರಿಹಾರ
  • ರೈತ ಮುಖಂಡರೊಂದಿಗೆ ಜಿಲ್ಲಾಡಳಿತ ಸಭೆ

ದಾವಣಗೆರೆ : ಮುಂಗಾರು ಹಂಗಾಮಿನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಶೇ. 75ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆ ವಿಫಲಗೊಂಡಿರುವ ಜಗಳೂರು ಮತ್ತು ಹರಿಹರ ತಾಲೂಕಿನ, ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ. 25ರಷ್ಟು ಗರಿಷ್ಠ ಪರಿಹಾರ ಕೊಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿ ತೀರ್ಮಾನಕ್ಕೆ ಬರಲಾಯಿತು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, 3 ದಿನದೊಳಗೆ ಈ ಬಗ್ಗೆ ತೀರ್ಮಾನಿಸಿ ಸರ್ಕಾರಕ್ಕೆ ಕಳಿಸಿಕೊಡಬೇಕಿದೆ. ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶ ಜಿಲ್ಲಾಡಳಿತಕ್ಕಿದೆ. ಇದರಲ್ಲಿ ಯಾವುದೇ ಒತ್ತಾಯವಿಲ್ಲ. ರೈತರಿಗೆ ಇಷ್ಟವಿದ್ದರೆ ಮುಂದುವರಿಯಬಹುದು. ಚಿತ್ರದುರ್ಗ ಜಿಲ್ಲೆಯಲ್ಲೂ ಇದನ್ನು ಜಾರಿಗೆ ತರಲು ಅಲ್ಲಿನ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2023-24ರಲ್ಲಿ 47095 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದರು. 2024-25ರಲ್ಲಿ 78,510, 2025-26ರಲ್ಲಿ 69576 ರೈತರು ನೋಂದಣಿ ಮಾಡಿಸಿದ್ದರು. 2026-27ನೇ ಸಾಲಿಗೆ ಅತಿಹೆಚ್ಚು 90,730 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಶೇ. 60ಕ್ಕಿಂತ ಹೆಚ್ಚು ರೈತರು ಬಿತ್ತನೆ ಮಾಡದೇ ಬೆಳೆ ವಿಮೆ ಕಟ್ಟಿದ್ದಾರೆ, ಅವರಿಗೂ ಇದರಿಮದ ಲಾಭವಾಗುತ್ತದೆ. ಶೇ. 25ರಷ್ಟು ಗರಿಷ್ಠ ಪರಿಹಾರ ದೊರೆಯುವುದರೊಂದಿಗೆ ವಿಮೆಯ ಪ್ರಯೋಜನ ಅಲ್ಲಿಗೆ ಮುಕ್ತಾಯವಾಗುತ್ತದೆ. ರೈತರು ಬೇಕಿದ್ದರೆ ಅಲ್ಲಿ ಇನ್ನೊಂದು ಬೆಳೆ ಬೆಳೆಯುವುದ್ಕ್ಕೂ ಅವಕಾಶವಿದೆ ಎಂದು ತಿಳಿಸಿದರು.
ವಿಮಾ ಕಂಪನಿಯ ಅಧಿಕಾರಿಗಳು ಮಾತನಾಡಿ, ಈ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 16,875 ರೂ. ಪರಿಹಾರ ಸಿಗುತ್ತದೆ ಎಂದು ಹೇಳಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ರೈತರು ಸಂಕಷ್ಟದಲ್ಲಿ ಇರುವುದರಿಂದ ಅವರಿಗೆ ಸಾಧ್ಯವಾದಷ್ಟು ಹೆಚ್ಚು ಪರಿಹಾರ ಸಿಗಬೇಕು. ತೋಟಗಾರಿಕೆ ಬೆಳೆಗಳಿಗೂ ಇದು ಅನ್ವಯವಾಗಬೇಕು. ಈ ಕುರಿತು ಸರ್ಕಾರಕ್ಕೆ ನಮ್ಮ ಮನವಿ ಇದೆ ಎಂದು ತಿಳಿಸಿದರು.
ಮತ್ತೊಬ್ಬ ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಎರಡು ರೀತಿಯ ಬರ ಇವೆ. ಮಳೆಯೇ ಬಾರದೇ ಬಿತ್ತನೆ ಆಗದಿರುವುದು ಒಣ ಬರ. ಬಿತ್ತನೆ ಆಗಿಯೂ ಬೆಳೆ ಬಾರದಿರುವುದು ಹಸಿ ಬರ. ಪರಿಹಾರ ನೀಡುವಾಗ ಇದನ್ನು ಗಮನಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸುವುದಕ್ಕಿಂತ ಜಗಳೂರು ಮತ್ತು ಹರಿಹರ ತಾಲೂಕು ಕೇಂದ್ರಗಳಲ್ಲೇ ಸಭೆ ನಡೆಸುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸಲಹೆ ನೀಡಿದರು.
ಡಿಸಿ ಗಂಗಾಧರ ಸ್ವಾಮಿ ಮಾತನಾಡಿ, ರೈತರು ತಮ್ಮ ವ್ಯಾಪ್ತಿಯ ಕೃಷಿ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿಮಾ ಕಚೇರಿಗೆ ಸ್ಥಳಾವಕಾಶ ಒದಗಿಸುವಂತೆ ಸೂಚನೆ ನೀಡಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ರೈತ ಮುಖಂಡರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.
ತಾಲೂಕುವಾರು ವಿವರ
ಬೆಳೆ ವಿಮೆ ಮಾಡಿಸಿದವರ ತಾಲೂಕುವಾರು ವಿವರ ಹೀಗಿದೆ: ಚನ್ನಗುರು ತಾಲೂಕಿನಲ್ಲಿ 9500 ರೈತರು, ದಾವಣಗೆರೆ 13,164, ಹರಿಹರ 5935, ಹೊನ್ನಾಳಿ 12069, ಜಗಳೂರು ತಾಲೂಕಿನಲ್ಲಿ ಅತಿಹೆಚ್ಚು 34,431 ಹಾಗೂ ನ್ಯಾಮತಿ ತಾಲೂಕಿನಲ್ಲಿ 15,631 ರೈತರು ನೋಂದಣಿ ಮಾಡಿಸಿದ್ದಾರೆ.
ಬೆಳೆವಾರು ಗಮನಿಸಿದಾಗ ಮೆಕ್ಕೆಜೋಳ ಬೆಳೆದ 74,188 ರೈತರು, ರಾಗಿ ಬೆಳೆಗೆ 7565 ರೈತರು ಬೆಳೆವಿಮೆ ಮಾಡಿಸಿದ್ದಾರೆ. ಇನ್ನುಳಿದಂತೆ ಹತ್ತಿ, ಈರುಳ್ಳಿ, ಸಜ್ಜೆ, ಜೋಳ, ಸೂರ್ಯಕಾಂತಿ ಬೆಳೆಗಳಿಗೆ ಕಡಿಮೆ ಇದೆ. ಭತ್ತಕ್ಕೆ 3029 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net