ರಸ್ತೆ ಮತ್ತು ಚರಂಡಿ ಸಮಸ್ಯೆಗಳಿಗೆ ಪರಿಹಾರ

ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ
Road works
ಮಾದೇನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವರಾಜ್ ಶಿವಗಂಗಾ ಗುದ್ದಲಿಪೂಜೆ ನೆರವೇರಿಸಿದರು. ಶ್ರೀಕಾಂತ್, ಕುಬೇಂದ್ರ ನಾಯ್ಕ, ಆಂಜನೇಯ, ನಾಗಣ್ಣ, ಕವಿತಮ್ಮ ಇತರರಿದ್ದರು.Road works
Published on: 

ಚನ್ನಗಿರಿ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ಗ್ರಾಮಸ್ಥರು ಬಹುದಿನಗಳಿಂದ ಅನುಭವಿಸುತ್ತಿರುವ ರಸ್ತೆ ಮತ್ತು ಚರಂಡಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.

ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ 2.8 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಮತ್ತು ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು. ಎಲ್ಲರ ಸಹಕಾರವಿದ್ದರೆ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ವಿಪಕ್ಷಗಳು ಮಾಡುತ್ತಿರುವ ಟೀಕೆಗಳನ್ನು ನಮ್ಮ ಸರ್ಕಾರ ಸುಳ್ಳು ಮಾಡಿದ್ದು, ತಾಲೂಕಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ. ಅನುದಾನ ನೀಡಿದೆ ಎಂದರು.

ಅಧಿಕಾರ ಶಾಶ್ವತವಲ್ಲ, ಮತದಾರರ ಋಣ ತೀರಿಸಲು ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಜನರ ಕೆಲಸ ಮತ್ತು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಿದ್ದೇನೆ. ಶಾಸಕನಾದ ಮೊದಲ ದಿನದಿಂದಲೂ ಶಿಕ್ಷಣ, ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮೂರು ಮಂತ್ರಗಳನ್ನಾಗಿ ಮಾಡಿಕೊಂಡು ಸಾಗುತ್ತಿದ್ದೇನೆ ಎಂದು ಹೇಳಿದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿಯೊಂದು ಮಗುವೂ ಕಲಿಕೆಯಲ್ಲಿ ಭಾಗವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಲು ಅನೇಕ ಸಭೆಗಳನ್ನು ಮಾಡಲಾಗಿದೆ. ಶಿಕ್ಷಣ ಇಲಾಖೆಯಿಂದ 45 ಶಾಲಾ ಕೊಠಡಿಗಳು, 17 ಹೊಸ ಶಾಲೆಗಳ ಕಟ್ಟಡ ಹಾಗೂ ಶಾಸಕರ ಅನುದಾನದಲ್ಲಿ 120 ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಾಕಿ ಇರುವ ಕೊಠಡಿಗಳ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಶ್ರೀಕಾಂತ್, ಕುಬೇಂದ್ರನಾಯ್ಕ, ಆಂಜನೆಯ, ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗಣ್ಣ, ಕವಿತಮ್ಮ, ಜತೇಂದ್ರನಾಯ್ಕ, ನಾಗರಾಜಪ್ಪ ಇತರರು ಇದ್ದರು.

2.8 ಕೋಟಿ ರೂ. ಕಾಮಗಾರಿ

ಮಾದೇನಹಳ್ಳಿಯಿಂದ ಶ್ರೀನಿವಾಸಪುರ ಕಾಂಕ್ರಿಟ್ ರಸ್ತೆ 100 ಲಕ್ಷ ರೂ., ಮಾದೇನಹಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಾಣ 25 ಲಕ್ಷ ರೂ., ಸೇವಾಲಾಲ್ ಸಮುದಾಯ ಭವನ 20 ಲಕ್ಷ ರೂ., ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ 14.5 ಲಕ್ಷ ರೂ., ಕೆ. ಗಾನದಕಲಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಕೊಠಡಿಗಳು 43.5 ಲಕ್ಷ ರೂ., ಜೋಳದಾಲು ಕುಕ್ಕುವಾಡೇಶ್ವರಿ ದೇವಸ್ಥಾನ ಮಹಾದ್ವಾರ ನಿರ್ಮಾಣ 5 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net