ನಾಟಕ ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ

  ದಾವಣಗೆರೆಯಲ್ಲಿ ಸೋಮವಾರ ನಡೆದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕದ 50ನೇ ಪ್ರಯೋಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಬಿ.ಎನ್. ಮಲ್ಲೇಶ್, ಮಲ್ಲಿಕಾರ್ಜುನ ಕಡಕೋಳ, ಚಿಂದೋಡಿ ಬಂಗಾರೇಶ್, ಭದ್ರಪ್ಪ ಇದ್ದರು.
ದಾವಣಗೆರೆಯಲ್ಲಿ ಸೋಮವಾರ ನಡೆದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕದ 50ನೇ ಪ್ರಯೋಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಬಿ.ಎನ್. ಮಲ್ಲೇಶ್, ಮಲ್ಲಿಕಾರ್ಜುನ ಕಡಕೋಳ, ಚಿಂದೋಡಿ ಬಂಗಾರೇಶ್, ಭದ್ರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಣೇಹಳ್ಳಿ ಶ್ರೀ ಪ್ರತಿಪಾದನೆ
  • ‘ಗಂಡನಿಗೆ ತಕ್ಕ ಹೆಂಡತಿ’ 50ನೇ ಪ್ರಯೋಗ ಉದ್ಘಾಟನೆ
ದಾವಣಗೆರೆ : ನಾಟಕ ಕಂಪನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ. ಪ್ರೇಕ್ಷಕರಿಗೆ ಏನು ಸಂದೇಶ ನೀಡಬೇಕು ಎಂಬುದನ್ನು ಆಲೋಚಿಸಬೇಕು. ಸಮಾಜದ ದಿಕ್ಕು ತಪ್ಪಿಸಬಾರದು ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿಂದ ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕದ 50ನೇ ಪ್ರಯೋಗ ಉದ್ಘಾಟನೆ ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸೋಮವಾರ ಮಾತನಾಡಿದರು.
ಹವ್ಯಾಸಿ ಅಥವಾ ವೃತ್ತಿ ರಂಗಭೂಮಿ ಎರಡಕ್ಕೂ ಈ ಮಾತು ಅನ್ವಯಿಸುತ್ತದೆ. ಜನರಲ್ಲಿ ಪರಿವರ್ತನೆ ತರಲು ನಾಟಕಗಳು ಪ್ರೇರಣೆ ನೀಡಿದಾಗ ಯಶಸ್ಸು ದೊರೆಯುತ್ತದೆ. ಒಳ್ಳೆಯ ಸಂದೇಶ ನೀಡುವ ಮೂಲಕ ಪ್ರೇಕ್ಷಕರ ಮನಸ್ಸು ಅರಳಿಸಬೇಕೇ ಹೊರತು ಕೆರಳಿಸಬಾರದು ಎಂದು ಅಭಿಪ್ರಾಯಪಟ್ಟರು.
ವೃತ್ತಿ ರಂಗಭೂಮಿಯಲ್ಲಿ ಧ್ವನಿ ಇದೆ, ಅಭಿನಯ ಕಡಿಮೆ. ಹವ್ಯಾಸಿ ರಂಗಭೂಮಿಯಲ್ಲಿ ಅಭಿನಯವಿದೆ, ಧ್ವನಿ ಕಡಿಮೆ. ಇವೆರಡರ ಸಂಗಮವಾದಾಗ ಬೆಳವಣಿಗೆ ಸಾಧ್ಯ ಎಂದು ನುಡಿದರು.
ನಾಟಕ ಕಂಪನಿ ಮಾಲೀಕ ಚಿಂದೋಡಿ ಬಂಗಾರೇಶ್ ಮಾತನಾಡಿ, ಸರ್ಕಾರ ವೃತ್ತಿ ನಾಟಕ ಕಂಪನಿಗಳಿಗೆ ಪ್ರತಿ ವರ್ಷ ತಲಾ 50 ಲಕ್ಷ ರೂ. ನೀಡಿದರೆ ಪ್ರೇಕ್ಷಕರಿಗೆ ಕಡಿಮೆ ಖರ್ಚಿನಲ್ಲಿ ಪ್ರದರ್ಶನ ನೀಡುವುದಾಗಿ ತಿಳಿಸಿದರು.
ನಾಟಕ ರಚನೆಯಾದಾಗ ಕತೆಯ ಮೂಲ ಸ್ವರೂಪದಲ್ಲಿ ಅಶ್ಲೀಲತೆ ಇರುವುದಿಲ್ಲ, ಕ್ರಮೇಣ ಅದನ್ನು ಬದಲಾವಣೆ ಮಾಡಿದಾಗ ಮಾತ್ರ ಅಶ್ಲೀಲ ಸಂಭಾಷಣೆಗಳು ನುಸುಳುತ್ತವೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಭದ್ರಪ್ಪ ಮಾತನಾಡಿ, ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿಗೆ ರಂಗ ಮಂದಿರದ ಕೊರತೆಯಿದೆ ಎಂದು ಹೇಳಿದರು. ಷಣ್ಮುಖಸ್ವಾಮಿ, ಕೊಟ್ರಪ್ಪ, ಶ್ರೀಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ಮಾಲೀಕ ಪಾಪು ಕಲ್ಲೂರ ಮಾತನಾಡಿದರು.
ಕಂಪನಿಯ ವ್ಯವಸ್ಥಾಪಕ ಮಹಾದೇವಪ್ಪ ಹುಣಶ್ಯಾಳ, ಚಂದ್ರು ಇನ್ನಿತರ ರಂಗಾಸಕ್ತರು ಪಾಲ್ಗೊಂಡಿದ್ದರು. ನಾಟಕ ಮತ್ತು ರಂಗಭೂಮಿಯ ಬಗ್ಗೆ ಸಂವಾದ ನಡೆಯಿತು. ಕನಕಲಕ್ಷ್ಮಿ ನಿರೂಪಿಸಿದರು.

ಒಳ್ಳೆಯದಿದ್ದರೆ ಸ್ವೀಕಾರ

ನಾಟಕಗಳ ಮೂಲಕ ಒಳ್ಳೆಯದನ್ನು ನೀಡಿದರೆ ಸಮಾಜ ಸ್ವೀಕರಿಸುತ್ತದೆ, ಆ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಎಂದು ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಹೇಳಿದರು.
ಸಿಗರೇಟ್ ಸೇವನೆ ಇನ್ನಿತರ ದುಶ್ಚಟಗಳ ದೃಶ್ಯಗಳನ್ನು ತೋರಿಸದಿದ್ದರೆ ಒಳ್ಳೆಯದು. ಲೋಪಗಳನ್ನು ಸರಿಪಡಿಸಿಕೊಂಡರೆ ಜನರು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ದಾವಣಗೆರೆ ರಂಗಭೂಮಿ ಚಟುವಟಿಕೆಗಳ ತವರೂರು. ನಷ್ಟದಲ್ಲಿದ್ದ ಅನೇಕ ಕಂಪನಿಗಳು ಇಲ್ಲಿಗೆ ಬಂದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡ ಉದಾಹರಣೆಗಳಿವೆ. ಪ್ರತಿಮಾ ಸಭಾದಂಥ ರಂಗ ತಂಡ ಇಲ್ಲಿ ಕೆಲಸ ಮಾಡುತ್ತಿದೆ. 70-80ರ ದಶಕ ದಾವಣಗೆರೆಯಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಸುವರ್ಣ ಕಾಲವಾಗಿತ್ತು ಎಂದು ತಿಳಿಸಿದರು.

ವೃತ್ತಿ ರಂಗಭೂಮಿಗೆ ಸಾವಿಲ್ಲ

ವೃತ್ತಿ ರಂಗಭೂಮಿಗೆ ಸಾವಿಲ್ಲ. ಕೆಲವು ಬದಲಾವಣೆ ಮಾಡಿಕೊಂಡರೆ ಜನರ ಬದುಕಿನಲ್ಲಿ ಇನ್ನಷ್ಟು ಪರಿವರ್ತನೆ ತರಲು ಸಾಧ್ಯವಿದೆ ಎಂದು ಪ್ರತಿಮಾಸಭಾದ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್ ಹೇಳಿದರು.
ವೃತ್ತಿ ರಂಗಭೂಮಿಯಲ್ಲಿ ಮೈಕ್ ಮುಂದೆ ನಿಂತು ಸಂಭಾಷಣೆ ನಡೆಸುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಭಿನಯಕ್ಕೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ವಿಶೇಷತೆಗಳನ್ನು ಸಮ್ಮಿಳಿತಗೊಳಿಸಬೇಕು. ಸಿನಿಮಾಗಳಿಂದ ಪ್ರೇರಿತವಾಗಿ ಕೆಲವು ಗಿಮಿಕ್ ಮಾಡುವುದನ್ನು ಬಿಡಬೇಕು. ಜನ ಕೇಳಿದ್ದನ್ನು ಕೊಡುವ ಬದಲು ಪ್ರೇಕ್ಷಕರ ಅಭಿರುಚಿ ತಿದ್ದುವ ಕೆಲಸ ಆಗಬೇಕು ಎಂದರು.
ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಕೊಂಡಜ್ಜಿಯಲ್ಲಿ ರಂಗಾಯಣದ 10 ಎಕರೆ ಜಾಗಕ್ಕೆ ಬೇಲಿ ಹಾಕಲಾಗಿದೆ. ಅಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆಯನ್ನು ಶೀಘ್ರವೇ ನೆರವೇರಿಸಲಾಗುವುದು ಎಂದು ತಿಳಿಸಿದರು.
ಕನ್ನಡ ರಂಗಭೂಮಿಗೆ 160 ವರ್ಷಗಳ ಚರಿತ್ರೆಯಿದೆ. ವೃತ್ತಿ ರಂಗಭೂಮಿಯು ಜನರ ಹೃದಯವನ್ನು ತಲುಪುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 18 ಸಾವಿರ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net