ಚನ್ನಗಿರಿಯಲ್ಲಿ ಭಾನುವಾರ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ನಗರ ಶಾಖೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಡಾ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೊದಿಗೆರೆ ರಮೇಶ್, ಜಿ.ನಿಂಗಪ್ಪ ಇತರರಿದ್ದರು.City branch inauguration
ಚನ್ನಗಿರಿ:ಅಂಬೇಡ್ಕರ್ ಸಂವಿಧಾನ ರಚಿಸಿ ನೊಂದವರಿಗೆ ಮೀಸಲಾತಿ ಕಾಯ್ದೆ ಜಾರಿ ಮಾಡದಿದ್ದರೆ ಕೆಳ ಸಮುದಾಯಗಳಿಗೆ ಇಂದಿಗೂ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಇಲ್ಲಿನ ದುರ್ಗಾಂಬಿಕಾ ನಗರದಲ್ಲಿರುವ ಡಾ.ಬಾಬು ಜಗಜೀವನ್‌ರಾಮ್ ಭವನದಲ್ಲಿ ಭಾನುವಾರ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ನಗರ ಶಾಖೆ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರೃ ಪೂರ್ವ ಮತ್ತು ನಂತರದಲ್ಲಿ ಕೆಳ ಸಮಾಜದವರಿಗೆ ಸರಿಯಾದ ಸ್ವಾತಂತ್ರೃ ಸಿಗದಿರುವುದು ನೋವಿನ ಸಂಗತಿ. ಅದಕ್ಕಾಗಿ ಅಂಬೇಡ್ಕರ್ ಉಳ್ಳವರ ಪಾಲಾಗಿದ್ದ ಅಧಿಕಾರದಿಂದ ಜನರು ಕಷ್ಟ ಅನುಭವಿಸಬಾರದು ಎಂದು ಸಂವಿಧಾನದಲ್ಲಿ ಮತ ಚಲಾಯಿಸುವ ಹಕ್ಕು ಮತ್ತು ಶಿಕ್ಷಣದ ಹಕ್ಕು ಪ್ರತಿಯೊಬ್ಬರಿಗೂ ನೀಡಿದರು ಎಂದರು.
ಗ್ರಾಮಕ್ಕೊಂದು ದೇವಸ್ಥಾನವನ್ನು ನಿರ್ಮಿಸಿ ಗಂಟೆ ಬಾರಿಸುವ ಬದಲು ಶಾಲೆ ಯನ್ನು ನಿರ್ಮಿಸಿದರೆ ದೇಶ ಎಲ್ಲ ಸಮಸ್ಯೆ ಗಳಿಂದ ದೂರವಿರುತ್ತದೆ ಎಂದು ತಿಳಿಸಿದರು.
ಯಾವುದೇ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿದರೆ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ವಿದ್ಯೆ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದರು.
ಶಾಸಕನಾಗಿದ್ದ ಅವಧಿಯಲ್ಲಿ ಮಾದಿಗ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ತಾಲೂಕಿನ ಎಲ್ಲ ಪರಿಶಿಷ್ಟ ಜಾತಿಗಳ ಬೀದಿಗಳಿಗೆ ಸಿಸಿ ರಸ್ತೆ, ಕುಡಿಯುವ ನೀರಿನ ಸಂಪರ್ಕ, ಚರಂಡಿ ಅಭಿವೃದ್ಧಿ ಪಡಿಸಿದ್ದೇನೆ. ಜತೆಗೆ ಸಮುದಾಯ ಭವನಗಳನ್ನು ನಿರ್ಮಿಸಿಕೊಡಲಾಗಿದೆ. ಮಾದಾರ ಚನ್ನಯ್ಯ ಸ್ವಾಮೀಜಿ ರಾಜ್ಯದೆಲ್ಲೆಡೆ ಸಂಚರಿಸಿ ಮಾದಿಗ ಸಮಾಜವನ್ನು ಜಾಗೃತಗೊಳಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನೀವು ಸಾಗಬೇಕು ಎಂದು ಹೇಳಿದರು.
ಚಿತ್ರದುರ್ಗದ ಶಿವಶರಣ ಡಾ.ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಒಂದು ಸಮಾಜ ಗುರಿ ಮುಟ್ಟಬೇಕಾದರೆ ಗುರುಗಳ ಮಾರ್ಗದರ್ಶನ ಮತ್ತು ಶಿಕ್ಷಣ ಮುಖ್ಯ. ಇವೆರಡನ್ನು ಹಿಂಬಾಲಿಸಿದಾಗ ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಲಿದೆ ಎಂದರು.
ಮಾದಿಗ ಸಮಾಜದ ಪರಿವರ್ತನೆ, ಶಿಕ್ಷಣ, ರಾಜಕೀಯ ಸ್ಥಾನಮಾನ ಮತ್ತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವುದು ಈ ಸಮಿತಿಯ ಮೂಲ ಉದ್ದೇಶವಾಗಿದೆ. ಸಮಿತಿ ರಾಜ್ಯದಲ್ಲಿಯೇ ಪ್ರಥಮವಾಗಿ ಚನ್ನಗಿರಿ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವುದು ಈ ಭಾಗದವರ ಸೌಭಾಗ್ಯವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇಟ್ಟುಕೊಂಡಾಗ ಶ್ರೇಯಸ್ಸು, ಯಶಸ್ಸು ಸುಲಭವಾಗಿ ಸಿಗಲಿದೆ. ರಾಜ್ಯದಲ್ಲಿ ಮಾದಿಗ ಸಮಾಜ ದೊಡ್ಡ ಸಂಖ್ಯೆಯಲ್ಲಿದ್ದು ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾನೂನಿನ ಅಡಿಯಲ್ಲಿ ಬದುಕುತ್ತಿರುವ ನಾವು ಚುನಾವಣೆಯ ಸಂದರ್ಭದಲ್ಲಿ ಯಾವ ಪಕ್ಷದಲ್ಲಿಯೇ ಗುರುತಿಸಿಕೊಂಡಿರಲಿ, ಆದರೆ ಸಮಾಜದ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ಸಮಾಜ ಮುಂದು ವರಿಯಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ತಾಲೂಕಾಧ್ಯಕ್ಷ ಜಿ.ನಿಂಗಪ್ಪ ವಹಿಸಿದ್ದರು. ಸಮಿತಿಯ ಪ್ರಮುಖರಾದ ರಾಕೇಶ್, ಬಿ.ಎಂ.ಶಿವಪ್ಪ, ಸಿ.ಆರ್.ನಾಗೇಂದ್ರಪ್ಪ, ಲಕ್ಷ್ಮೀ ದೇವಮ್ಮ, ಎನ್.ಮಂಜಪ್ಪ, ಪರಶುರಾಮ್, ಶಿವಲಿಂಗಪ್ಪ ಇತರರಿದ್ದರು.