ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಉದ್ಘಾಟಿಸಿದರು. ಕುಲಪತಿಗಳಾದ ಪ್ರೊ.ಎ.ಎನ್. ಖಾನ್, ಪ್ರೊ.ಬಿ.ಡಿ.ಕುಂಬಾರ, ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಂಗೇಶ್ ಅನುಪಮ್, ಪ್ರೊ.ಡಿ.ಜಿ.ಪ್ರಕಾಶ್, ಪ್ರೊ.ಎಸ್.ಎನ್. ಪ್ರಮೋದ್ ಇದ್ದರು.
ದಾವಣಗೆರೆ :ಕೌಶಲಗಳು ಭವಿಷ್ಯದ ಕರೆನ್ಸಿಯಾಗಿವೆ ಎಂದು ಇಂಗ್ಲೆಂಡ್‌ನ ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಅಂಗೇಶ್ ಅನುಪಮ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ: ಜಾಗತಿಕ ಸ್ಪರ್ಧಾತ್ಮಕತೆಯ ಒಂದು ನೋಟ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಶಕ್ತಿ ಮತ್ತು ತಾಂತ್ರಿಕ ಪ್ರತಿಭೆ ಭಾರತದ ಬಹುದೊಡ್ಡ ಬಲವಾಗಿದ್ದು, ಸರಿಯಾದ ನೈತಿಕತೆಯೊಂದಿಗೆ ಬಳಸಿದರೆ ಮಾನವ ಕಲ್ಯಾಣಕ್ಕೆ ಮಹತ್ತರ ಕೊಡುಗೆ ನೀಡಬಹುದು ಎಂದರು.
ಭಾರತವು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಲ್ಲಿ ವೇಗವಾಗಿ ಬೆಳೆಯುತ್ತಿದೆ. ದತ್ತಾಂಶ ಗೌಪ್ಯತೆ, ನಿಷ್ಪಕ್ಷಪಾತ, ಪಾರದರ್ಶಕತೆಗಳು ಮುಖ್ಯವಾಗಿವೆ. ಭವಿಷ್ಯವು ಯಂತ್ರಗಳಿಗೆ ಸೇರಿದ್ದಲ್ಲ. ಯಂತ್ರಗಳನ್ನು ಬುದ್ಧಿವಂತಿಕೆಯಿಂದ ಬಳಸುವ ಮಾನವರಿಗೆ ಸೇರಿದೆ ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಭಾರತದ ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗುರುತಿಸಿ, ಪ್ರೊತ್ಸಾಹಿಸುವ ಶಿಕ್ಷಣ ಕ್ರಮಗಳು ಅಗತ್ಯವಾಗಿವೆ ಎಂದು ಹೇಳಿದರು.
ವೈಯಕ್ತಿಕ ಕಲಿಕೆ, ಬುದ್ಧಿವಂತ ಮೌಲ್ಯಮಾಪನ ವ್ಯವಸ್ಥೆಗಳು ಉದ್ಯೋಗ ಅವಕಾಶಗಳನ್ನು ಒದಗಿಸುತ್ತವೆ. ಆದರೆ ಸ್ಥಳೀಯ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ, ಪರಿಹರಿಸುವ ಚಿಂತನೆ ಮತ್ತು ಸ್ಥಳೀಯ ಜ್ಞಾನ ಸಂರಕ್ಷಣೆಗೂ ಮನ್ನಣೆ ನೀಡುವ ಶಿಕ್ಷಣವು ಮುಖ್ಯವಾಗಿದೆ. ಇದಕ್ಕೆ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಪೂರಕವಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಸೇರಿ ತಾಂತ್ರಿಕ ಮತ್ತು ಯಾಂತ್ರಿಕ ಸಂಶೋಧನೆಗಳು, ಮಾನವನ ಸಮಗ್ರ ಬೆಳವಣಿಗೆಗೆ ಕೊಡುಗೆಯಾಗಬೇಕೇ ಹೊರತು ಹೊರೆಯಾಗಬಾರದು. ವಿದ್ಯಾರ್ಥಿಗಳು ಪದವಿಯ ಜತೆಗೆ ನೈತಿಕ ಮೌಲ್ಯಗಳು, ದೇಸಿ ಜ್ಞಾನ, ವೃತ್ತಿ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಎಂಇ ನಿರ್ದೇಶಕ ಪ್ರೊ.ಡಿ.ಜಿ. ಪ್ರಕಾಶ್ ಸ್ವಾಗತಿಸಿದರು. ಪ್ರೊ.ಎಸ್.ಎನ್. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಡಾ.ಆರ್.ಕೆ. ಸತೀಶ ವಂದಿಸಿದರು.
ಬದಲಾಗಲಿ ಶಿಕ್ಷಣದ ಗುಣಮಟ್ಟ
ವಿದ್ಯಾರ್ಥಿಗಳು ಕೇವಲ ಪದವೀಧರರಾಗದೇ ಜಾಗತಿಕ ಅನುಭವ, ಆತ್ಮವಿಶ್ವಾಸ ಮತ್ತು ವಿಶಾಲ ವೃತ್ತಿ ಅವಕಾಶಗಳೊಂದಿಗೆ ಜಾಗತಿಕ ನಾಗರಿಕರಾಗುವಿಕೆ ಅನಿವಾರ್ಯವಾಗಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಹೇಳಿದರು.
ಇಂದಿನ ಉದ್ಯೋಗದಾತರು ಜಾಗತಿಕ ದೃಷ್ಟಿಕೋನ ಹೊಂದಿದ ಪದವೀಧರರನ್ನು ಹುಡುಕುತ್ತಿದ್ದಾರೆ. ಸಂವಹನ, ತಂಡ ಕಾರ್ಯ ಮತ್ತು ವಿಭಿನ್ನ ಸಂಸ್ಕೃತಿಗಳೊಂದಿಗೆ ಕೆಲಸ ಮಾಡುವ ಕೌಶಲಗಳನ್ನು ವೃದ್ಧಿಸಿಕೊಂಡಾಗ ಅವಕಾಶಗಳ ಸೃಷ್ಟಿಯಾಗುತ್ತವೆ ಎಂದು ಹೇಳಿದರು.
ನಮ್ಮ ಶಿಕ್ಷಣದ ಗುಣಮಟ್ಟವೂ ಬದಲಾಗಬೇಕು. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಾಂಸ್ಕೃತಿಕ ಅರಿವು ಮತ್ತು ಹೊಂದಿಕೊಳ್ಳುವ ಸಾಮರ್ಥ್ಯ ಬೆಳೆಸುವ ಶಿಕ್ಷಣ ಅತ್ಯಗತ್ಯ ಎಂದು ತಿಳಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ. ಖಾನ್ ಮಾತನಾಡಿ, ಜಾಗತಿಕ ಸ್ಪರ್ಧಾತ್ಮಕ ಯುಗಲ್ಲಿ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಪದ್ಧತಿಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ. ವಿದ್ಯಾರ್ಥಿಗಳು ಹೊಸ ಸ್ಪರ್ಧೆಯಲ್ಲಿ ಸವಾಲೊಡ್ಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ತಂತ್ರಜ್ಞಾನದ ಅಳವಡಿಕೆ, ಸಂಶೋಧನೆ, ವಿಭಿನ್ನ ಸಂಸ್ಕೃತಿಯ ಜನರೊಂದಿಗೆ ಕೂಡಿ ಕೆಲಸ ಮಾಡುವ ಮತ್ತು ಬೌದ್ಧಿಕ ಜ್ಞಾನ ವಿಸ್ತರಿಸಿಕೊಳ್ಳಲು ಅತ್ಯಗತ್ಯವಾಗಿದೆ ಎಂದರು.