ದಾವಣಗೆರೆ :ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56ರಷ್ಟು ಎನ್ಯುಮರೇಷನ್ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬಿಎಲ್‌ಒಗಳು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 90ರಷ್ಟು ಜನರಿಗೆ ಫಾರ್ಮ್ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಜಿಲ್ಲೆಯು ಪ್ರಸ್ತುತ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ನಗರದಲ್ಲಿ 45 ಕೇಂದ್ರಗಳು ಸೇರಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ನೋಡಲ್ ಅಧಿಕಾರಿಗಳು ಮತ್ತು ಮೇಲ್ವಿಚಾರಕರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿದೆ. ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆ. 7ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ. ಎನ್. ಮಹಾಂತೇಶ್, ಚುನಾವಣಾ ಶಾಖೆಯ ಸಿಬ್ಬಂದಿ ಇದ್ದರು.
17,499 ನಮೂನೆ ವಾಪಸ್ ಬಂದಿಲ್ಲ
ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಎನ್ಯುಮರೇಷನ್ ನಮೂನೆಗಳು ವಾಪಸ್ ಬಂದಿಲ್ಲ ಎಂದು ಡಿಸಿ ಗಂಗಾಧರಸ್ವಾಮಿ ಹೇಳಿದರು.
ಇದರಲ್ಲಿ 7,487 ಮರಣ ಪ್ರಕರಣ, 263 ವಿಳಾಸ ಪತ್ತೆಯಾಗದವರು, 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು, 2,994 ಜನ ಡಬಲ್ ಎಂಟ್ರಿ ಮಾಡಿರುವುದು, ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.
ಒಟ್ಟು 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜು. 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ಡಬಲ್ ಎಂಟ್ರಿಯನ್ನು ಉದ್ದೇಶಪೂರ್ವಕವಾಗಿ ಮಾಡಿದ್ದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆ
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಕುರಿತು ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ವರದಿ ನೀಡಿದೆ. ಅನಸ್ತೇಷಿಯಾ ವರ್ಕ್ ಸ್ಟೇಷನ್‌ನಲ್ಲಿನ ಸಮಸ್ಯೆಯಿಂದ ಈ ದುರಂತ ಸಂಭವಿಸಿದೆ ಎಂದು ಡಿಸಿ ತಿಳಿಸಿದರು.
ಈ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು ಪರಿಣಾಮಕಾರಿಯಾಗಿವೆ. ಇದರಿಂದ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ ಎಂದು ತಿಳಿಸಿದರು.
ಮಳೆಯ ಕೊರತೆ ಇರುವುದರಿಂದ ಜನರು ನೀರನ್ನು ಪೋಲು ಮಾಡಬಾರದು. ಎಲ್ಲೆಂದರಲ್ಲಿ ಕಸ ಎಸೆಯಬಾರದು, ಪ್ರಜ್ಞಾವಂತರು ಎನಿಸಿಕೊಂಡವರು ಈ ರೀತಿ ಮಾಡಬಾರದು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೇವಲ 150ರಿಂದ 200 ಪೌರಕಾರ್ಮಿಕರು ಇಡೀ ನಗರದ ಸ್ವಚ್ಛತೆಯನ್ನು ಕಾಪಾಡುವುದು ಸವಾಲಿನ ಕೆಲಸ. ಸಾರ್ವಜನಿಕರೂ ಸಹಕರಿಸಿದರೆ ನಗರವನ್ನು ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳಬಹುದು ಎಂದು ಹೇಳಿದರು.