ದಾವಣಗೆರೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಹಾ ಸಂಸ್ಥಾನ ಮಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಡಾ. ಎಚ್. ವಿಶ್ವನಾಥ್, ನಿಜಗುಣ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
27ರ ಸಂಪುಟ ಸಭೆಯಲ್ಲಿ ತೀರ್ಮಾನಿಸಲು ಒತ್ತಾಯ
ಹರಿಹರದಿಂದ ಪಾದಯಾತ್ರೆಯಲ್ಲಿ ಆಗಮನ
ದಾವಣಗೆರೆ :ಮಾ. 27ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋಡಿಹಳ್ಳಿ ಶ್ರೀ ಆದಿಜಾಂಬವ ಮಹಾ ಸಂಸ್ಥಾನ ಮಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದರು.
ಹರಿಹರದ ಮೈತ್ರಿ ವನದಿಂದ ಆರಂಭಿಸಿರುವ ಪಾದಯಾತ್ರೆಯ ಅಂಗವಾಗಿ ನಗರಕ್ಕೆ ಆಗಮಿಸಿದ್ದ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ, ಒಳಮೀಸಲಾತಿ ಅನ್ವಯಿಸುವ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಹಲವು ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಮಾದಿಗ ಸಮುದಾಯಕ್ಕೆ ಮೀಸಲಾತಿ ಗ್ಯಾರಂಟಿ ನೀಡುವ ಮೂಲಕ ನ್ಯಾಯ ಒದಗಿಸಬೇಕು. ಹಸಿದವರಿಗೆ ಹೆಚ್ಚು ಅನ್ನ ನೀಡಿ ಎಂಬುದು ನಮ್ಮ ಮನವಿಯಾಗಿದೆ ಎಂದರು.
ಹಕ್ಕುಗಳಿಗೆ ಆಗ್ರಹಿಸಿ ಮಾದಿಗ ಸಮುದಾಯ 35 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದೆ. ಹಲವು ಆಯೋಗಗಳು ವರದಿಯನ್ನೂ ನೀಡಿವೆ. ಆದರೆ ಸರ್ಕಾರಗಳು ನಿರ್ಲಕ್ಷೃ ಮಾಡುತ್ತ ಬಂದಿವೆ. ಸಿದ್ದರಾಮಯ್ಯ ಅವರೂ ಮಾದಿಗರನ್ನು ಸಮಾಧಾನಪಡಿಸುತ್ತ ಕಾಲ ದೂಡಿ ಅಧಿಕಾರದಿಂದ ನಿರ್ಗಮಿಸುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ಸಮುದಾಯದ ಯಾವುದೇ ಸಚಿವರು ರಾಜೀನಾಮೆ ನೀಡುವುದು ಬೇಡ, ಸರ್ಕಾರದಲ್ಲಿ ಇದ್ದುಕೊಂಡೇ ಅಗತ್ಯ ಪ್ರಯತ್ನ ಮಾಡಬೇಕು. ಸರ್ಕಾರ ಮಾದಿಗ ಸಮುದಾಯದ ತಾಳ್ಮೆ ಪರೀಕ್ಷಿಸುವುದು ಬೇಡ. ಮುಂಬರುವ ದಿನಗಳಲ್ಲಿ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ಸಮುದಾಯ ತಿರುಗಿ ಬೀಳುವ ಕಾಲ ದೂರವಿಲ್ಲ ಎಂದು ಹೇಳಿದರು.
ಸಮುದಾಯದ ಮುಖಂಡ ಡಾ. ಎಚ್. ವಿಶ್ವನಾಥ್ ಮಾತನಾಡಿ, ಮಾದಿಗ ಸಮುದಾಯದವರು ಪೌರಕಾರ್ಮಿಕರಾಗಿ, ಊರಿನ ಸ್ವಚ್ಛತೆ ಕೆಲಸ ಮಾಡುತ್ತ ಬಂದಿದ್ದಾರೆ. ಅವರ ಜೀವನಮಟ್ಟ ಸುಧಾರಣೆಯಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳೆಯಬೇಕಾದರೆ ಅವರಿಗೆ ಒಳಮೀಸಲಾತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.