ನಾಡಿದ್ದು ಎಸ್‌ಎಫ್‌ಐ ರಾಜ್ಯ ಅಧ್ಯಯನ ಶಿಬಿರ

 ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಎಫ್‌ಐನ ರಾಜ್ಯ ಉಪಾಧ್ಯಕ್ಷ ಎಸ್.ಬಸವರಾಜ, ದೊಡ್ಡ ಬಸವರಾಜ ಗುಳೆದಾಳ, ಅನಂತರಾಜ್, ಎನ್.ಕೃಷ್ಣ  ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಎಫ್‌ಐನ ರಾಜ್ಯ ಉಪಾಧ್ಯಕ್ಷ ಎಸ್.ಬಸವರಾಜ, ದೊಡ್ಡ ಬಸವರಾಜ ಗುಳೆದಾಳ, ಅನಂತರಾಜ್, ಎನ್.ಕೃಷ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳ ಉಳಿವಿಗಾಗಿ ಕಾರ್ಯಕ್ರಮ
  • ವಿವಿಧೆಡೆಗಳಿಂದ 120 ಪ್ರತಿನಿಧಿಗಳು ಭಾಗಿ
  • ರಾಜ್ಯ ಉಪಾಧ್ಯಕ್ಷ ಎಸ್.ಬಸವರಾಜ ಮಾಹಿತಿ
ದಾವಣಗೆರೆ: ಹರಿಹರ ಹೊರವಲಯದಲ್ಲಿನ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಸಭಾಂಗಣದಲ್ಲಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ರಾಜ್ಯ ಸಮಿತಿಯಿಂದ ವಿದ್ಯಾರ್ಥಿ ಚಳವಳಿ ಮುಖಂಡರಿಗೆ ಏ.23ರಿಂದ ನಾಲ್ಕು ದಿನಗಳ ಕಾಲ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ಶಾಲೆಗಳು, ಕ್ಯಾಂಪಸ್ ಡೆಮಾಕ್ರಸಿ ಉಳಿವಿಗಾಗಿ ಹಾಗೂ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲು ಆಗ್ರಹಿಸಿ ಈ ಶಿಬಿರ ಆಯೋಜಿಸಲಾಗಿದ್ದು ರಾಜ್ಯದ ವಿವಿಧೆಡೆಗಳಿಂದ 120 ಪ್ರತಿನಿಧಿಗಳು ಭಾಗವಹಿಸುವರು ಎಂದು ಎಸ್‌ಎಫ್‌ಐನ ರಾಜ್ಯ ಉಪಾಧ್ಯಕ್ಷ ಎಸ್.ಬಸವರಾಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿ ಉಗಮ, ಬೆಳವಣಿಗೆ ಹಾಗೂ ಸವಾಲುಗಳು, ಸ್ವಾತಂತ್ರೃ ಹೋರಾಟದ ನಂತರದ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆ, ಸ್ವಾತಂತ್ರ ಚಳವಳಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಅಸ್ಮಿತೆಯ ರಾಜಕಾರಣ ಹೀಗೆ ಹಲವು ವಿಷಯ ಕುರಿತಂತೆ ಶಿಬಿರದಲ್ಲಿ ಪಾಠಗಳು ನಡೆಯಲಿವೆ.
ಅಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಅವುಗಳನ್ನು ಬಗೆಹರಿಸಲು ಬಲಿಷ್ಟ ವಿದ್ಯಾರ್ಥಿ ಚಳುವಳಿ ರೂಪಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಟಿ.ಎಸ್. ವಿಜಯಕುಮಾರ್ ಮಾತನಾಡಿ, ಎಸ್‌ಎಫ್‌ಐ ಸಂಘಟನೆಯು ಶೈಕ್ಷಣಿಕ ಸಮಸ್ಯೆಗಳಲ್ಲದೆ ಜಾತಿಭೇದ, ಅಸ್ಪಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಮತಾಂಧತೆ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳ ವಿರುದ್ಧ ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಸಂಘಟನೆ ಶ್ರಮಿಸುತ್ತಿದೆ. ವಿದ್ಯಾರ್ಥಿ ಸಮುದಾಯವನ್ನು ವೈಚಾರಿಕ,ಸೈದ್ಧಾಂತಿವಾಗಿ ಜಾಗೃತಿಗೊಳಿಸುತ್ತಾ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತಿದೆ.
ರಾಜ್ಯಾದ್ಯಂತ ವಿದ್ಯಾರ್ಥಿ ಸಮುದಾಯಗಳಲ್ಲಿ ವಿಚಾರ ಸಂಕಿರಣಗಳು, ಸಂವಾದ, ಕ್ರೀಡೆ- ಸಾಂಸ್ಕೃತಿಕ ಕಾರ್ಯಕ್ರಮ ಶೈಕ್ಷಣಿಕ ಸಮಸ್ಯೆಗಳ ಕುರಿತು ಜಾಗೃತಿ ಜಾಥಾಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ರಾಜ್ಯವ್ಯಾಪ್ತಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಉಳಿವಿಗಾಗಿ ಹಾಗೂ ಹಾಸ್ಟೆಲ್ ಬಲವರ್ಧನೆಗಾಗಿ, ಶಿಕ್ಷಣ ಉದ್ಯೋಗ ಮೂಲ ಹಕ್ಕಾಗಬೇಕೆಂದು ಚಳವಳಿ ರೂಪಿಸಲಾಗುವುದು ಎಂದರು.
ಏ.23ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ. ಶ್ರೀನಿವಾಸ ಶಿಬಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಎಸ್‌ಎಫ್‌ಐ ಅಖಿಲ ಭಾರತ ಸಮಿತಿ ಸದಸ್ಯೆ ವೈ. ಸುಜಾತಾ, ಗಣೇಶ ರಾಥೋಡ್, ಡಾ. ದೊಡ್ಡ ಬಸವರಾಜ ಗುಳೆದಾಳ ಭಾಗವಹಿಸುವರು. ರಾಜ್ಯ ಕಾರ್ಯದರ್ಶಿ ಟಿ.ಎಸ್. ವಿಜಯಕುಮಾರ್ ಪ್ರಾಸ್ತಾವಿಕ ಮಾತನಾಡುವರು. ಶಿವಪ್ಪ ಅಂಬ್ಲಿಕಲ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ದೊಡ್ಡ ಬಸವರಾಜ ಗುಳೆದಾಳ, ಜಿಲ್ಲಾ ಸಂಚಾಲಕ ಅನಂತರಾಜ್, ಎನ್.ಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net