

ದಾವಣಗೆರೆ: ಹುಡುಗ ಮತ್ತು ಹುಡುಗಿ ಎರಡೂ ಕಡೆ ಸಂಬಂಧ ಒಪ್ಪಿಗೆಯಾಗಿ ಮದುವೆ ಮಾಡಲು ನಿರ್ಧರಿಸಿದ್ದ ಪ್ರಕರಣದಲ್ಲಿ ಹುಡುಗ ಮದುವೆಯಾಗಬೇಕಿದ್ದ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಅವನ ವಿರುದ್ಧ ಪೋಕ್ಸೋ ಕೇಸು ದಾಖಲು ಮಾಡಲಾಗಿದೆ. ತಾಲೂಕಿನ ಹಳ್ಳಿಯೊಂದರಲ್ಲಿ ಎರಡು ಕುಟುಂಬಗಳ ನಡುವೆ ಹಿರಿಯರು ವೈವಾಹಿಕ ಸಂಬಂಧ ಬೆಳೆಸುವ ನಿರ್ಧಾರ ಮಾಡಿದ್ದರು. ಆದರೆ ಹುಡುಗಿ ಅಪ್ರಾಪ್ತೆಯಾಗಿದ್ದ ಕಾರಣ ತಕ್ಷಣ ಮದುವೆ ಮಾಡಿದರೆ ಬಾಲ್ಯ ವಿವಾಹದ ಪ್ರಕರಣ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ತಕ್ಷಣ ಮದುವೆಯ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.
ಆದರೆ ಹುಡುಗಿ ಪ್ರಾಪ್ತೆಯಾದ ನಂತರ ಮದುವೆ ಮಾಡಲು ಎರಡೂ ಕುಟುಂಬಗಳು ಸಹಮತಕ್ಕೆ ಬಂದಿದ್ದು, ಒಪ್ಪಂದವಾಗಿತ್ತು ಎಂದು ಗೊತ್ತಾಗಿದೆ. ಹುಡುಗಿ ಪ್ರಾಪ್ತೆಯಾಗಲು ಇನ್ನೂ 15 ತಿಂಗಳು ಬೇಕಿತ್ತು. ಮದುವೆ ಒಪ್ಪಂದ ಆಗಿದೆ ಎನ್ನುವ ಕಾರಣಕ್ಕೆ ಹುಡುಗ ಮತ್ತು ಹುಡುಗಿ ನಡುವೆ ಸಲುಗೆ ಬೆಳೆದಿದ್ದು, ಹುಡುಗ ಬೀಗರ ಮನೆಗೆ ಬಂದು ಹೋಗುವುದು ನಡೆದಿತ್ತು. ಈ ನಡುವೆ ಹುಡುಗ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ. ಹುಡುಗಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವರ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ಮಾಡಿದ ವೈದ್ಯರು, ಹುಡುಗಿ ಗರ್ಭಿಣಿ ಎಂದು ತಿಳಿಸಿದ್ದಾರೆ. ಆಗ ಕುಟುಂಬದವರಿಗೆ ತಮ್ಮ ಮಗಳನ್ನು ಮದುವೆಯಾಗಬೇಕಿದ್ದ ಹುಡುಗ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಈಗ ಹುಡುಗಿಯ ತಾಯಿ ಹುಡುಗನ ಮೇಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಿಸಿದ್ದಾರೆ.
ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮದುವೆ ಮಾಡೋಣ ಎಂದರೆ ಹುಡುಗಿ ಇನ್ನೂ ಅಪ್ರಾಪ್ತೆ. ಈಗಲೇ ಮದುವೆ ಮಾಡುವಂತಿಲ್ಲ. ವಯಸ್ಸಿಗೆ ಬಂದ ನಂತರ ಮದುವೆ ಮಾಡೋಣ ಎಂದರೆ ಹುಡುಗಿ ಪ್ರಾಪ್ತೆಯಾಗುವ ವೇಳೆಗೆ ತಾಯಿಯಾಗಿರುತ್ತಾಳೆ. ಇಂಥ ಸನ್ನಿವೇಶ ಇಲ್ಲಿ ನಿರ್ಮಾಣವಾಗಿದೆ.