ದಯಾಮರಣ ಪ್ರಕ್ರಿಯೆ ಜಾರಿಗೆ ಹಿನ್ನಡೆ

 ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಜುಳಾ ಬಸವಲಿಂಗಪ್ಪ, ಪ್ರಭಾ ರವೀಂದ್ರ, ಷಹನಾಜ್ ಇತರರಿದ್ದರು.
ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಜುಳಾ ಬಸವಲಿಂಗಪ್ಪ, ಪ್ರಭಾ ರವೀಂದ್ರ, ಷಹನಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರ್ತಿ ಕರಿಬಸಮ್ಮ ಅಸಮಾಧಾನ
  • ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಲು ಒತ್ತಾಯ
  • ನರಳಾಟದ ರೋಗಿಗಳತ್ತ ಗಮನಹರಿಸಲಿ ಸರ್ಕಾರ
ದಾವಣಗೆರೆ: ಸುಪ್ರೀಂಕೋರ್ಟ್ 2018ರಲ್ಲಿ ದಯಾಮರಣಕ್ಕೆ ಆದೇಶ ನೀಡಿದ್ದರ ತರುವಾಯ, ಐತಿಹಾಸಿಕ ಕಾನೂನು ಜಾರಿಯಾಗಿ ಅನೇಕ ವರ್ಷ ಕಳೆದರೂ ಅದರ ವಿಧಿವಿಧಾನಗಳ ಬಗ್ಗೆ ಮಾಹಿತಿ ಇಲ್ಲವಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಹಣಬಲ, ಜನಬಲವಿಲ್ಲದ ಸಾವಿರಾರು ಬಡ ವಯೋವೃದ್ಧರು ತರಹೇವಾರಿ ರೋಗಗಳಿಂದ ನರಳುತ್ತಾ, ಮಲಮೂತ್ರದಲ್ಲೇ ದಿನ ಕಳೆಯುತ್ತಾ ಸಾವಿಗಾಗಿ ಹಂಬಲಿಸುತ್ತಿದ್ದಾರೆ. ಇಂಥವರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ದಯಾಮರಣದ ಪ್ರಕ್ರಿಯೆಗಳು ಸರ್ಕಾರಿ ಆಸ್ಪತ್ರೆಗಳಲ್ಲೇ ನಡೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ದಯಾಮರಣಕ್ಕಾಗಿ ಅರ್ಜಿ ಸಲ್ಲಿಸುವುದು, ಯಾವ ಆಸ್ಪತ್ರೆ ಸಂಪರ್ಕಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಮಾಹಿತಿ ಇಲ್ಲದೆ ಸಹಸ್ರಾರು ವೃದ್ಧರು ಹಿಡಿಶಾಪ ಹಾಕುತ್ತಾ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಕೂಡಲೇ ದಯಾಮರಣದ ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
86 ವರ್ಷದ ನಾನು ಅನೇಕ ರೋಗಗಳಿಂದ ನರಳುತ್ತಿದ್ದೇನೆ. ದಿನವೂ ದೇಹ ರಿಪೇರಿ ಮಾಡಿಕೊಂಡು ಬದುಕುವ ಜೀವನ ನನಗೀಗ ಬೇಡವಾಗಿದೆ. ರೋಗಗಳು ಉಲ್ಬಣಿಸಿ ಪರಾವಲಂಬಿಯಾಗಿ ಬದುಕುವ ಮುನ್ನವೇ, ದೇಹದಲ್ಲಿ ಅಲ್ಪಸ್ವಲ್ಪ ಬಲವಿರುವಾಗಲೇ ಕಾನೂನಾತ್ಮಕವಾಗಿ ಸಾವು ಬಯಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಜುಳಾ ಬಸವಲಿಂಗಪ್ಪ, ಪ್ರಭಾ ರವೀಂದ್ರ, ಷಹನಾಜ್, ವೆಂಕಟೇಶ, ಶಾಂತಮ್ಮ, ವಿಜಯಕುಮಾರಿ, ಗಿರಿಜಮ್ಮ, ರೇಖಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net