ದಾವಣಗೆರೆ: ನಗರದ ಲೂರ್ಡ್ಸ್ ಬಾಲಕರ ಶಾಲಾವರಣದಲ್ಲಿ ಭಾನುವಾರ ಫುಟ್‌ಬಾಲ್‌ನದೇ ಕಲರವ. ಮಳೆಯ ತುಂತುರಿನಿಂದ ತುಸು ಒದ್ದೆಯಾದ ಮೈದಾನದಲ್ಲಿ ಇಂಡಿಯಾ ಖೇಲೋ ಫುಟ್‌ಬಾಲ್ ಪ್ರತಿಭಾನ್ವೇಷಣೆಯ ಆಯ್ಕೆ ಟ್ರಯಲ್ಸ್ ಸಾಂಗವಾಗಿ ನಡೆಯಿತು.
ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ದಾವಣಗೆರೆ ವಲಯ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ನಗರದಲ್ಲಿ ಕರ್ನಾಟಕ ಫುಟ್‌ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಕರುನಾಡು ಫುಟ್‌ಬಾಲ್ ಕ್ಲಬ್ ಈ ಪ್ರಕ್ರಿಯೆ ನಡೆಸಿತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಧಾರವಾಡವಲ್ಲದೆ ದಾವಣಗೆರೆ, ಹರಿಹರ, ರಾಣೆಬೆನ್ನೂರು ಕಡೆಗಳಿಂದ 150ಕ್ಕೂ ಹೆಚ್ಚು ಪಟುಗಳು ಭಾಗಿಯಾಗಿದ್ದರು. ಇದರಲ್ಲಿ ಏಳು ಬಾಲಕಿಯರಿದ್ದುದು ವಿಶೇಷ. 13, 15 ಹಾಗೂ 17 ವರ್ಷದೊಳಗಿನ ವಿಭಾಗಗಳಲ್ಲಿ ಬಾಲಕ-ಬಾಲಕಿಯರು ಆಟದ ನೈಪುಣ್ಯಗಳನ್ನು ಪ್ರದರ್ಶಿಸಿದರು.
ಬೆಳಗ್ಗೆ 8ರಿಂದ ಮಧ್ಯಾಹ್ನ 3-45ರವರೆಗೆ ನಡೆದ ಫುಟ್‌ಬಾಲ್ ಹಬ್ಬದಲ್ಲಿ ಇಡೀ ದಿನ 10 ಪಂದ್ಯಗಳನ್ನು ನಡೆಸಲಾಯಿತು. ಕೊನೆಯ ಪಂದ್ಯಕ್ಕೆ ಮಳೆರಾಯನೂ ದರ್ಶನ ನೀಡಿದ! ಐಕೆಎಫ್‌ನ ಸುಹೈಲ್ ನೇತೃತ್ವದಲ್ಲಿ ರಶ್ ಫುಟ್‌ಬಾಲ್ ಅಕಾಡೆಮಿ ತರಬೇತುದಾರ ಜೆರೋಮ್, ಗೋಲ್‌ಕೀಪಿಂಗ್ ತರಬೇತುದಾರ ಮಂಜಿ ಆಯ್ಕೆ ಪ್ರಕ್ರಿಯೆಗೆ ಸಾಥ್ ನೀಡಿದರು.
ಆಯಾ ಆಟಗಾರರ ಆಟದ ಕೌಶಲ, ಬಾಲ್ ರಿಸೀವಿಂಗ್, ಪಾಸಿಂಗ್ ಹಾಗೂ ಬಾಲ್ ಚಿಪ್ಪಿಂಗ್ ಮೊದಲಾದ ಮಾನದಂಡ ಆಧರಿಸಿ ಇಂಡಿಯಾ ಖೇಲೋ ಫುಟ್‌ಬಾಲ್‌ನ ನಾಲ್ವರು ಸ್ಕೌಟ್‌ಗಳು (ತೀರ್ಪುಗಾರರು) ರಾಜ್ಯ ಮಟ್ಟದ ಅರ್ಹತಾ ಪಂದ್ಯಗಳಿಗೆ ಆಯ್ಕೆ ಮಾಡಿದರು.
ದಾವಣಗೆರೆ ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಹಾಸ್ಟೆಲ್‌ನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಗಳನ್ನು ಪ್ರತಿನಿಧಿಸಿದ್ದ ಪ್ರತಿಭಾವಂತ ಆಟಗಾರರಾದ ಶ್ರೇಯಸ್, ಸಾಹಿಲ್ ಕೂಡ ಪಾಲ್ಗೊಂಡಿದ್ದರು. ಜಿಲ್ಲಾ ಫುಟ್‌ಬಾಲ್ ಕ್ಲಬ್‌ನ ದಿನೇಶ್ ಕೆ. ಶೆಟ್ಟಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಖ್ಯಾತ ಫುಟ್‌ಬಾಲ್ ಆಟಗಾರ ತಿಮ್ಮಣ್ಣ ಇದ್ದರು.
ವಾರದೊಳಗೆ ಅಂತಿಮ ಪಟ್ಟಿ ಪ್ರಕಟವಾಗಲಿದ್ದು ಆಟಗಾರರ ಪಾಲಕರಿಗೆ ಕರೆ ಮಾಡಿ ಮಾಹಿತಿ ರವಾನಿಸಲಾಗುತ್ತದೆ. ಆಯ್ದ ಆಟಗಾರರನ್ನು ರಾಜ್ಯ ಮಟ್ಟಕ್ಕೆ ಆಹ್ವಾನಿಸಿ, ಅಲ್ಲಿನ ಪಂದ್ಯಗಳಲ್ಲಿ ಗಮನ ಸೆಳೆದಲ್ಲಿ ‘ಐಕೆಎಫ್ ಸೌತ್ ಜೋನಲ್ ಚಾಂಪಿಯನ್‌ಶಿಪ್, ತದನಂತರದಲ್ಲಿ ರಾಷ್ಟ್ರ ಮಟ್ಟ (ಇಂಡಿಯಾ ಖೇಲೋ ಫುಟ್‌ಬಾಲ್ ನ್ಯಾಷನಲ್ ಫೈನಲ್ಸ್)ಕ್ಕೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿದ ಫುಟ್‌ಬಾಲ್ ಪಟುಗಳಿಗೆ ಮಾಸಿಕ 20 ಸಾವಿರ ರೂ. ಸ್ಟೈಫೆಂಡ್ ನೀಡಲಾಗುತ್ತದೆ.
ಅಲ್ಲದೆ ಹೆಸರಾಂತ ಕ್ಲಬ್‌ಗಳು ಈ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ತಮ್ಮೊಂದಿಗೆ ಇರಿಸಿಕೊಂಡು ತಮ್ಮ ಕ್ಲಬ್‌ಗಳಿಂದ ಆಟವಾಡಿಸಲು ಉತ್ತೇಜಿಸುತ್ತಾರೆ. ಈ ಹಿಂದೆಲ್ಲ ಆಯ್ಕೆ ಒಂದೇ ಕಡೆ ಸೀಮಿತವಿತ್ತು. ಈಗ ಹಲವಾರು ಹಂತಗಳನ್ನು ದಾಟಿ ಆಯ್ಕೆ ನಡೆಸುತ್ತಿರುವುದು ಮೊದಲ ಬಾರಿಯದಾಗಿದೆ ಎಂದು ಕರುನಾಡು ಫುಟ್‌ಬಾಲ್ ಕ್ಲಬ್‌ನ ಅಹಮದ್ ಮುಸ್ತಫಾ ಪತ್ರಿಕೆಗೆ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಇಂಡಿಯಾ ಖೇಲೋ ಫುಟ್‌ಬಾಲ್ ಪ್ರತಿಭಾನ್ವೇಷಣೆಯ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಬಾಲಕರು.