ಸ್ವಯಂಪ್ರೇರಿತ ರಕ್ತದಾನದಿಂದ ಮತ್ತೊಬ್ಬರ ಜೀವ ರಕ್ಷಣೆ blood donation
ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅಂಧರು ರಕ್ತದಾನ ಮಾಡಿದರು. blood donation
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಕ್ತವನ್ನು ಕೃತಕವಾಗಿ ಉತ್ಪಾದಿಸುವುದು ಅಸಾಧ್ಯ
ಜೀವ ಉಳಿಸುವುದಕ್ಕೆ ಸ್ವಯಂ ಪ್ರೇರಣೆಯಿಂದ ರಕ್ತದಾನ
ಡಾ.ಬಿ.ಜಿ.ಧನಂಜಯ ವಿದ್ಯಾರ್ಥಿಗಳಿಗೆ ಸಲಹೆ
ಹೊನ್ನಾಳಿ: ರಕ್ತವನ್ನು ಕೃತಕವಾಗಿ ಉತ್ಪಾದಿಸುವುದು ಅಸಾಧ್ಯ, ಆದ್ದರಿಂದ ಇನ್ನೊಬ್ಬರ ಜೀವ ಉಳಿಸುವುದಕ್ಕೆ ಸ್ವಯಂ ಪ್ರೇರಣೆಯಿಂದ ರಕ್ತ ದಾನ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಧನಂಜಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಹಾಗೂ ರೇಂಜರ್ಸ್ ಘಟಕ ಮತ್ತು ಶಿವಮೊಗ್ಗದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿದತ್ತವಾಗಿ ಮನುಷ್ಯರಲ್ಲಿ ರಕ್ತ ಉತ್ಪತಿಯಾಗುತ್ತದೆ. ಆರೋಗ್ಯವಂತ ಹಾಗೂ ಸದೃಢ ದೇಹ ಹೊಂದಿರುವ ಎಲ್ಲರೂ 3 ತಿಂಗಳಿಗೊಮ್ಮೆ ರಕ್ತ ದಾನ ಮಾಡಬೇಕು. ಅನಾರೋಗ್ಯ ಪೀಡಿತ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಅಲ್ಲದೆ ಆರೋಗ್ಯ ಉತ್ತಮವಾಗುತ್ತದೆ. ಆದರೆ ಇತ್ತೀಚಿಗೆ ಯುವಕರು ರಕ್ತ ದಾನಕ್ಕೆ ಮುಂದೆ ಬರುತ್ತಿಲ್ಲ. ರಕ್ತದಾನದಿಂದ ಅನಾರೋಗ್ಯ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ ಎಂದರು.
ರಕ್ತದಾನ ಮಾಡಿ ಅಪಘಾತ ಹಾಗೂ ಇತರ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತ ಸಾವು, ಬದುಕಿನ ಮಧ್ಯೆ ಹೋರಾಡುತ್ತಿರುವ ವ್ಯಕ್ತಿಯ ಜೀವ ಉಳಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ನಾಗರಾಜ್ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 51 ಜನರು ರಕ್ತದಾನ ಮಾಡಿದರು.
120 ಬಾರಿ ರಕ್ತದಾನ
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧಿಕಾರಿ ಧರಣೇಂದ್ರ ದಿನಕರ್ ಮಾತನಾಡಿ, 1986ರಿಂದ ಇಲ್ಲಿಯವರೆಗೂ 120 ಬಾರಿ ರಕ್ತದಾನ ಮಾಡಿದ್ದೇನೆ. ನಾವು ಕೊಡುವ ಸ್ವಲ್ಪ ರಕ್ತ ಮತ್ತೊಬ್ಬರ ಪ್ರಾಣ ಉಳಿಯುತ್ತದೆ ಎಂದರೆ ಅದಕ್ಕಿಂತ ಪುಣ್ಯದ ಕಾರ್ಯ ಮತ್ತೊಂದಿಲ್ಲ ಎಂದು ಹೇಳಿದರು.
ಯುವಕರು ಪ್ರತಿವರ್ಷ ಎರಡು ಬಾರಿ ರಕ್ತದಾನ ಮಾಡಿದರೆ ದೇಹದಲ್ಲಿರುವ ರಕ್ತ ಶುದ್ಧೀಕರಣವಾಗುತ್ತದೆ ಹೊರತು ದೇಹದ ಯಾವುದೇ ಅಂಗಾಂಗಗಳಿಗೆ ತೊಂದರೆ ಆಗುವುದಿಲ್ಲ. ರಕ್ತ ಕೊಟ್ಟು ಇನ್ನೊಬ್ಬರ ಪ್ರಾಣ ಉಳಿಸುವ ಶಕ್ತಿ ಮನುಷ್ಯರಿಗೆ ಸಿಕ್ಕಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಬಿರದಲ್ಲಿ ಅಂಧರು ಭಾಗಿ
ಪಟ್ಟಣದ ಟಿ.ಬಿ.ವೃತ್ತದಲ್ಲಿರುವ ಸ್ಫೂರ್ತಿ ಸಂಸ್ಥೆಯ ಐದಾರು ಅಂಧರು ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಅಂಧರು ಸೇರಿ ಒಟ್ಟು 65 ಜನ ರಕ್ತದಾನ ಮಾಡಿದರು ಎಂದು ಪ್ರಾಚಾರ್ಯ ಡಾ.ಬಿ.ಜಿ.ಧನಂಜಯ ತಿಳಿಸಿದರು.
ಡಾ.ದಿನಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ತರಗನಹಳ್ಳಿ, ಪ್ರಾಧ್ಯಾಪಕ ಹರಾಳು ಮಹಾಬಲೇಶ್ವರ್, ರಾಘವೇಂದ್ರ, ಟಿ.ಎ.ಶ್ರೀನಿವಾಸ್, ಕೆ.ಎಂ.ಪ್ರಸನ್ನ, ಸುರೇಖಾ ಬಿಜಾಪುರ, ಪ್ರಶಾಂತಕುಮಾರ್ ಶರ್ಮಾ ಇತರರಿದ್ದರು.