ದಾವಣಗೆರೆ: ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಸ್ವಚ್ಛತಾ ಕಾರ್ಮಿಕರ ಜೀವಕ್ಕೆ ರಕ್ಷಣೆ ಮತ್ತು ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ತಿಳಿಸಿದರು.
ಯಾಂತ್ರೀಕೃತ ನೈರ್ಮಲ್ಯ, ಪರಿಸರ ವ್ಯವಸ್ಥೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ (ನಮಸ್ತೆ) ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ನೈರ್ಮಲ್ಯ ಕಾರ್ಮಿಕರಿಗೆ ವೈಯಕ್ತಿಕ ಸುರಕ್ಷತಾ ಉಪಕರಣಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹತ್ವಾಕಾಂಕ್ಷಿ ನಮಸ್ತೆ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮಾನವ ಚಾಲಿತ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಒಳಚರಂಡಿ ಸ್ವಚ್ಛತೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಯಾಂತ್ರೀಕೃತ ವ್ಯವಸ್ಥೆಯನ್ನು ಉತ್ತೇಜಿಸುವುದು ನಮಸ್ತೆ ಯೋಜನೆಯ ಆಶಯವಾಗಿದೆ.
ಅಪಾಯಕಾರಿ ಸಂದರ್ಭಗಳಲ್ಲಿ ಕಾರ್ಮಿಕರು ಯಾವುದೇ ಕಾರಣಕ್ಕೂ ಸುರಕ್ಷತಾ ಕವಚಗಳಿಲ್ಲದೆ ಕೆಲಸ ಮಾಡಬಾರದು. ವೈಯಕ್ತಿಕ ಸುರಕ್ಷತಾ ಉಪಕರಣಗಳ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ನೈರ್ಮಲ್ಯ ಕಾರ್ಮಿಕರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ದಾವಣಗೆರೆ ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿ 32ನೇ ಸ್ಥಾನ ಪಡೆದಿದೆ. ಇದಕ್ಕೆ ಸ್ವ್ವಚ್ಛತಾ ಕಾರ್ಮಿಕರ ನಿರಂತರ ಶ್ರಮವೇ ಕಾರಣ. ಮುಂದಿನ ವರ್ಷ ನಿಮ್ಮ ಸಹಕಾರದಿಂದ ಈ ಶ್ರೇಯಾಂಕವನ್ನು ಮತ್ತಷ್ಟು ಉತ್ತಮಪಡಿಸುವ ಗುರಿ ಹೊಂದಲಾಗಿದೆ ಎಂದರು.
ಸಮಾಜದ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ಸ್ವಚ್ಛತಾ ಯೋಧರ ಸೇವೆ ಅಮೂಲ್ಯವಾಗಿದೆ. ಸ್ವಚ್ಛತಾ ಸಿಬ್ಬಂದಿಯ ಸುರಕ್ಷತೆಗಾಗಿ ನೀಡುವ ಸಾಮಗ್ರಿಗಳನ್ನು ಕರ್ತವ್ಯದ ವೇಳೆ ಕಡ್ಡಾಯವಾಗಿ ಬಳಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರು, ಹೊರಗುತ್ತಿಗೆ ಚಾಲಕರು, ಯುಜಿಡಿ ಸಹಾಯಕರು, ಲೋಡರ್‌ಗಳು, ಗಾರ್ಡನರ್ ಹಾಗೂ ವಿವಿಧ ವಿಭಾಗದ ಸಿಬ್ಬಂದಿಗೆ ಒಟ್ಟು 1000 ಪ್ರೆಶರ್ ಕುಕ್ಕರ್ ಹಾಗೂ 287 ಪಿಪಿಇ ಕಿಟ್‌ಗಳನ್ನುವಿತರಿಸಲಾಯಿತು.
ಪಾಲಿಕೆ ಆಯುಕ್ತ ಡಾ.ಎನ್. ಮಹಾಂತೇಶ್, ಪರಿಸರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಭಿಷೇಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್ ಇತರರಿದ್ದರು.