ಶಸ್ತ್ರ ಚಿಕಿತ್ಸೆಗೆ ಗ್ರಾಮೀಣ ಮಹಿಳೆಯರ ಪರದಾಟ

ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ. Surgery
ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ. Surgery
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಸ್ಪತ್ರೆಗೇ ಅಲೆಯುವ ಅನಿವಾರ್ಯತೆ
  • ಸ್ಥಗಿತಗೊಂಡ ಸೌಲಭ್ಯ
  • ಮೂಲಸೌಕರ್ಯದ ಕೊರತೆ ನೆಪ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಹೆರಿಗೆಯ ನಂತರದ ಗರ್ಭನಿರೋಧಕ (ಟ್ಯೂಬೆಕ್ಟಮಿ) ಶಸ್ತ್ರಚಿಕಿತ್ಸೆಗಾಗಿ ಗ್ರಾಮೀಣ ಭಾಗದ ಮಹಿಳೆಯರು ಪರದಾಡುವಂತಾಗಿದ್ದು, ಸಣ್ಣಪುಟ್ಟ ಚಿಕಿತ್ಸೆಗಳಿಗೂ ನಗರದ ಜಿಲ್ಲಾಸ್ಪತ್ರೆಗಳಿಗೆ ಅಲೆಯುವುದು ಅನಿವಾರ್ಯವಾಗಿದೆ. ಆರೋಗ್ಯ ಇಲಾಖೆಯು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು, ಅಣಜಿ, ಹೆಬ್ಬಾಳು, ಲೋಕಿಕೆರೆ, ರಾಮಗೊಂಡನಹಳ್ಳಿ ಸೇರಿ ಪ್ರಮುಖ ಗ್ರಾಮಗಳ 24ಗಿ7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದೆ ಶಸ್ತ್ರಚಿಕಿತ್ಸಾ ಸೌಲಭ್ಯವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದಾಗಿ 25 ರಿಂದ 35 ಕಿಮೀ ದೂರವಿರುವ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬಡ ಮಹಿಳೆಯರು ಅಲೆಯುತ್ತಿದ್ದಾರೆ.
ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸುಸಜ್ಜಿತ ಮಿನಿ ಆಪರೇಷನ್ ಥಿಯೇಟರ್, ಸ್ತ್ರೀರೋಗ ತಜ್ಞರು ಹಾಗೂ ಆಧುನಿಕ ಉಪಕರಣಗಳ ಕೊರತೆ ಹಳ್ಳಿಗಳ ಆಸ್ಪತ್ರೆಗಳನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಆನಗೋಡು ಹೋಬಳಿಯ ಐಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲ ಗೊಂಡಿದ್ದು, ಮಳೆಗಾಲದಲ್ಲಿ ನೀರು ಸೋರುವಿಕೆ ಹಾಗೂ ಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ಒಂದೂವರೆ
ವರ್ಷದಿಂದ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಾಯಕೊಂಡ ವ್ಯಾಪ್ತಿಯ 24ಗಿ7 ಆಸ್ಪತ್ರೆಗಳಲ್ಲಿ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.

— ಕೆ.ಎಸ್. ಬಸವಂತಪ್ಪ, ಶಾಸಕ, ಮಾಯಕೊಂಡ.

ಮಕ್ಕಳನ್ನು ಮನೆಯಲ್ಲಿ ಬಿಟ್ಟು ದೂರದ ನಗರಕ್ಕೆ ಮೂರ್ನಾಲ್ಕು ಬಾರಿ ಅಲೆದರೂ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ದಿನಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಆರೋಗ್ಯ ಇಲಾಖೆ ಹಳ್ಳಿ ಆಸ್ಪತ್ರೆಗಳಲ್ಲೆ ಆಪರೇಷನ್‌ಗೆ ವ್ಯವಸ್ಥೆ ಕಲ್ಪಿಸಬೇಕು.

— ಆರ್. ರಂಜಿತಾ ನಾಗರಾ ಹುಚ್ಚವ್ವನಹಳ್ಳಿ.

"

ಹಲವು ಆಸ್ಪತ್ರೆಗಳಲ್ಲಿ ಪೂರಕ ಸೌಲಭ್ಯಗಳ ಕೊರತೆ ಇರುವುದರಿಂದ ತಾತ್ಕಾಲಿಕವಾಗಿ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಸರಿಪಡಿಸಿ ಗ್ರಾಮೀಣ ಭಾಗದಲ್ಲಿ ಸೌಲಭ್ಯ ಒದಗಿಸಲು ಕ್ರಮ ವಹಿಸುತ್ತೇವೆ.

— ಡಾ. ಷಣ್ಮುಖಪ್ಪ, ಜಿಲ್ಲಾ ಆರೋಗ್ಯಾಧಿಕಾರಿ, ದಾವಣಗೆರೆ.

ಹಿಂದೆ ಲೋಕಿಕೆರೆ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಗಳಾಗುತ್ತಿದ್ದವು. ಈಗ ವ್ಯವಸ್ಥೆ ಇಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ. ಇಲಾಖೆ ತಕ್ಷಣ ಮೂಲಸೌಕರ್ಯ ಒದಗಿಸಬೇಕು.

— ಬಿ.ಎಚ್. ಓಬಳೇಶ್, ಗ್ರಾಪಂ ಮಾಜಿ ಅಧ್ಯಕ್ಷ, ಲೋಕಿಕೆರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net