ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ವಿಬಿ ಜಿ ರಾಮ್-ಜಿ ಯೋಜನೆಯ ಅನುಷ್ಠಾನದ ಪೂರ್ವಸಿದ್ಧತೆಗಳ ಪರಿಶೀಲನಾ ಸಭೆಯಲ್ಲಿ ಅಲ್ತಾಫ್ ಹುಸೇನ್ ಹಾಜಿ, ಅನಿಲ್ ಕುಮಾರ್ ಕೆ.ಸಿ., ಬಲದೇವ್ ಕುಮಾರ್ ವರ್ಮಾ, ಗಿತ್ತೆ ಮಾಧವ ವಿಠ್ಠಲರಾವ್, ಮಮತಾ ಹೊಸಗೌಡರ್, ರೇಷ್ಮಾ ಕೌಸರ್, ಮಲ್ಲಾ ನಾಯಕ್ ಇದ್ದರು.
ದಾವಣಗೆರೆ :ವಿಬಿ ಜಿ ರಾಮ್-ಜಿ ಯೋಜನೆಯ ಅನುಷ್ಠಾನದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ತಾಂತ್ರಿಕ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿತ್ತು.
ಹೊನ್ನಾಳಿ ತಾಲೂಕು ಬೇಲಿಮಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಮಿಕರ ಜತೆಗೆ ವಿಬಿ ಜಿ ರಾಮ್-ಜಿ ಯೋಜನೆಯ ಕುರಿತು ಸಂವಾದ ನಡೆಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ ಮತ್ತು ಎನ್‌ಆರ್‌ಎಲ್‌ಎಂ ಫಲಾನುಭವಿಗಳೊಂದಿಗೂ ಚರ್ಚಿಸಿದರು.
ನಂತರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಮಾಹಿತಿ ಪಡೆದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಇದುವರೆಗೆ ಜಿಲ್ಲೆಯಲ್ಲಿ ಆಗಿರುವ ಸಾಧನೆಯ ಬಗ್ಗೆ ಹಾಗೂ ವಿಬಿ ಜಿ ರಾಮ್-ಜಿ ಯೋಜನೆಯ ಸಿದ್ಧತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ತಂಡದ ಹಿರಿಯ ಅಧಿಕಾರಿ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಾಂಖ್ಯಿಕ ಉಪ ಮಹಾನಿರ್ದೇಶಕ ಅಲ್ತಾಫ್ ಹುಸೇನ್ ಹಾಜಿ ಮಾತನಾಡಿ, ರಾಜ್ಯ ಸರ್ಕಾರವು ಈಗಾಗಲೇ ವಿಬಿ ಜಿ ರಾಮ್-ಜಿ ಯೋಜನೆಯ ಅನುಷ್ಠಾನಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಯೋಜನೆಯು ನಮ್ಮ ಗ್ರಾಮೀಣ ಭಾಗದ ವಿಕಾಸದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಉತ್ತಮ ಕೆಲಸಗಳಾಗುತ್ತಿವೆ. ಜನಸಾಮಾನ್ಯರು ಇದರಿಂದ ಹರ್ಷಗೊಂಡಿದ್ದಾರೆ. ತಮ್ಮ ಗ್ರಾಮಗಳ ಪ್ರಗತಿಯನ್ನು ಕಂಡು ಹೆಮ್ಮೆಪಡುತ್ತಿದ್ದಾರೆ. ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳ ಈ ಸಮರ್ಪಣಾ ಮನೋಭಾವ ಶ್ಲಾಘನೀಯ. ಈ ನಿರಂತರ ಪ್ರಗತಿಯು ಮುಂದುವರಿಯಲಿ ಎಂದು ಆಶಿಸಿದರು.
ಎಲ್ಲ ಸಕ್ರಿಯ ಕಾರ್ಮಿಕರ ಮತ್ತು ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಯಾವುದೇ ಒಂದು ಪಂಚಾಯಿತಿಯಲ್ಲಿ ಶೇ. 50ರಷ್ಟು ಪ್ರಗತಿಯಾಗಿದ್ದರೆ, ಅದನ್ನು ಮುಂದಿನ ಹಂತದಲ್ಲಿ ಶೇ. 60ಕ್ಕೆ, ಕ್ರಮೇಣ ಶೇ. 70ಕ್ಕೆ ಏರಿಸುವ ಗುರಿ ಹೊಂದಬೇಕು ಎಂದರು.
ಯಾವುದೇ ಸಾಧನೆ ಒಬ್ಬರಿಂದ ಸಾಧ್ಯವಿಲ್ಲ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಇಂತಹ ಸಕಾರಾತ್ಮಕ ಬದಲಾವಣೆ ಮತ್ತು ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತದೆ. ವಿಬಿಜಿ ರಾಮ್ ಜಿ ಅಡಿ ಯಾವುದಾದರೂ ಯೋಜನೆಗಳ ಬಗ್ಗೆ ತಿದ್ದುಪಡಿಗಳಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.
ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಮನರೇಗಾದಲ್ಲಿ ಸಾಧಿಸಿರುವ ಪ್ರಗತಿ ಮತ್ತು ವಿಬಿಜಿರಾಮ್-ಜಿ ಅಡಿ ರೂಪಿಸಿರುವ ಹೊಸ ಯೋಜನೆಗಳ ಬಗ್ಗೆ ವಿವರಿಸಿದರು. ಇದೇ ವೇಳೆ ಯೋಜನೆಯಡಿ ಕಾಮಗಾರಿ ಕಾರ್ಯಾದೇಶ ನೀಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಅನಿಲ್ ಕುಮಾರ್ ಕೆ.ಸಿ., ಸಹಾಯಕ ನಿರ್ದೇಶಕ ಬಲದೇವ್ ಕುಮಾರ್ ವರ್ಮಾ, ಜಿ.ಪಂ. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಸಿಪಿಒ ಮಲ್ಲಾ ನಾಯಕ್ ಇದ್ದರು.
ಅನುಪಾತದಲ್ಲಿ ಬದಲಾವಣೆಯಾಗಲಿ
ವಿಬಿ ಜಿ ರಾಮ್-ಜಿ ಯೋಜನೆಯ ಅನುಷ್ಠಾನದಲ್ಲಿ 60-40 ಅನುಪಾತ ಪಾಲನೆ ಮಾಡುವುದು ಕಷ್ಟವಾಗಬಹುದು ಎಂಬ ಇಂಗಿತವನ್ನು ಕೆಲವು ಅಧಿಕಾರಿಗಳು ವ್ಯಕ್ತಪಡಿಸಿದರು.
ಸಾಮಗ್ರಿ ಆಧಾರಿತ ಕಾಮಗಾರಿಗಳೇ ಹೆಚ್ಚಾಗಿರುವುದರಿಂದ ಕೂಲಿ ಮತ್ತು ಸಾಮಗ್ರಿ ಅನುಪಾತದಲ್ಲಿ ಬದಲಾವಣೆ ಮಾಡುವ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ನವೀನ್ ಮಾತನಾಡಿ, ಗಿಡಗಳನ್ನು ನೆಡುವುದು, ಅವುಗಳ ನಿರ್ವಹಣೆಯ ವೇಳೆ ದಿನಕ್ಕೆ 2 ಬಾರಿ ಕಾರ್ಮಿಕರ ಹಾಜರಾತಿ ಪಡೆಯುವುದು ಕಷ್ಟವಾಗುತ್ತದೆ ಎಂಬುದನ್ನು ಸಭೆಯ ಗಮನ ತಂದರು.
ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಈ ಮೊದಲು ಉದ್ಯೋಗ ಖಾತ್ರಿ ಯೋಜನೆಯಡಿ ನರ್ಸರಿ ಬೆಳೆಸಲು ಅವಕಾಶವಿತ್ತು. ಹೊಸ ಯೋಜನೆಯಲ್ಲೂ ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.