ಯುವಜನತೆಗೆ ಗಾಂಧೀಜಿ ಅವರ ವಿಚಾರ ಪ್ರಸ್ತುತತೆ ಕುರಿತು ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಪ್ರೊ. ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಉದ್ಘಾಟಿಸಿದರು. ಪ್ರೊ. ವೆಂಕಟರಾವ್ ಎಂ. ಪಲಾಟೆ, ಡಾ. ನಾಗರಾಜ ತಳವಾರ್, ಡಾ.ಅಶೋಕ್‌ಕುಮಾರ್ ವಿ. ಪಾಳೇದ, ಡಾ.ಎ.ಬಿ. ರಾಮಚಂದ್ರಪ್ಪ, ಶಿವನಕೆರೆ ಬಸವಲಿಂಗಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬದುಕನ್ನು ಹಸನುಗೊಳಿಸಲಿದೆ ಈ ಪುಸ್ತಕ
ಮಹಾತ್ಮನ ಕುರಿತ ಉತ್ತಮ ದೃಷ್ಟಿಕೋನಕ್ಕೆ ಸಹಕಾರಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ
ದಾವಣಗೆರೆ:ಮಹಾತ್ಮ ಗಾಂಧೀಜಿ ಅವರ ಆತ್ಮಕಥೆಯನ್ನು ಯುವಜನರು ಓದುವುದು ಅನಿವಾರ್ಯ. ಇಲ್ಲವಾದಲ್ಲಿ ಅವರ ಬದುಕು ಅರ್ಥಹೀನ ಎಂದು ಪ್ರೊ. ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಹೇಳಿದರು.
ಯುವಜನತೆಗೆ ಗಾಂಧೀಜಿ ಅವರ ವಿಚಾರ ಪ್ರಸ್ತುತತೆ ಕುರಿತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರನ್ನು ಇಂದಿನ ಯುವಜನರು ಅರ್ಥ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ಅನ್ಯ ವಿಚಾರಗಳತ್ತ ಗಮನ ಹರಿಸುತ್ತಿದ್ದಾರೆ. ಅವರಲ್ಲಿನ ತಪ್ಪು ಗ್ರಹಿಕೆ ಹೋಗಲು ಗಾಂಧೀಜಿ ಬಗ್ಗೆ ತಿಳಿಯಬೇಕು ಎಂದರು.
ಲಕ್ಷಾಂತರ ಪುಸ್ತಕಗಳು ಇರುವಾಗ ನಾವೇಕೆ ಗಾಂಧಿ ಅವರ ಆತ್ಮಕಥೆ ಪುಸ್ತಕವನ್ನೇ ಏಕೆ ಓದಬೇಕು ಎಂಬುದನ್ನು ಅವಲೋಕಿಸಿದಾಗ ಈ ಕೃತಿಯು ಬದುಕು ಹಸನುಗೊಳಿಸಲು ದಿಕ್ಸೂಜಿಯಾಗಿದೆ. ಒಮ್ಮೆ ಓದಿ ಮುಗಿಸಿದೆ ಅನ್ನುವ ಪುಸ್ತಕ ಇದಲ್ಲ. ಪ್ರತಿನಿತ್ಯ ಓದುತ್ತಾ ಜೀರ್ಣಿಸಿಕೊಂಡಂತೆ ಬದುಕುವ ದಿಕ್ಕನ್ನು ಬದಲಾಯಿಸಿಕೊಳ್ಳಬಹುದು ಎಂದು ಹೇಳಿದರು.
ಗಾಂಧೀಜಿ ಅವರು ಆತ್ಮಕಥೆ ಬರೆದು ನೂರು ವರ್ಷಗಳು ಸಂದಿವೆ. ಇದರಲ್ಲಿ ಗಾಂಧಿ ಅವರ ಸಿದ್ಧಾಂತ, ದೇಶಪ್ರೇಮ, ಹೋರಾಟಗಾರರನ್ನು ಕಾಣಬಹುದು. ನಮ್ಮ ಬದುಕನ್ನು ಬದಲಿಸಲು ಗಾಂಧೀಜಿ ಅವರ ಆತ್ಮಕಥೆ ಒಂದು ಅತ್ಯುತ್ತಮ ಪುಸ್ತಕ. ಇದರಿಂದ ನಮ್ಮ ಚಿಂತನೆ ಬದಲಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದರು.
ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಪ್ರತೀಕ. ಸಾಮಾನ್ಯರಾಗಿದ್ದುಕೊಂಡೇ ಅವರು ಅಸಾಮಾನ್ಯರಾದರು. ಅವರು ಓದಿದ ಪುಸ್ತಕಗಳು ಜೀವನದ ಹಾದಿಯನ್ನು ಬದಲಾವಣೆ ಮಾಡಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟರಾವ್ ಎಂ. ಪಲಾಟೆ ಮಾತನಾಡಿ, ವಿಶ್ವದ ಅನೇಕ ದೇಶಗಳು ಗಾಂಧಿ ಸಿದ್ಧಾಂತವನ್ನು ಬಳಸಿಕೊಂಡು ಸ್ವತಂತ್ರವಾಗಿವೆ. ಗಾಂಧೀಜಿ ಅವರು ದಾರ್ಶನಿಕರ ಪ್ರತಿರೂಪವಾಗಿದ್ದರು. ಭಾರತವನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ಪ್ರತಿಪಾದಕರಾಗಿದ್ದರು ಎಂದು ಹೊಗಳಿದರು.
ಇಂದಿನ ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಯಾರದೋ ಅಭಿಪ್ರಾಯವನ್ನು ತಮ್ಮದೆಂಬಂತೆ ಬಿಂಬಿಸಿಕೊಂಡು ಗಾಂಧಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಗಾಂಧೀಜಿ ಬಂದ ನಂತರ ಇಲ್ಲಿನ ಪ್ರಭುತ್ವವನ್ನೆಲ್ಲ ಒಂದಾಗಿಸಿ ನಾವು ಭಾರತೀಯರು ಎಂದು ತೋರಿಸಿಕೊಟ್ಟರು. ವಿಶ್ವದಲ್ಲಿ ಮನ್ನಣೆ ದೊರಕುವಂತೆ ಮಾಡಿದರು ಎಂದು ಹೇಳಿದರು.
ಪ್ರೊ. ಸಿ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ದಾವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಅಶೋಕ್‌ಕುಮಾರ್ ವಿ. ಪಾಳೇದ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಇತರರಿದ್ದರು.
ಹನುಮಂತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕೆ. ಲೋಕೇಶ್ ನಾಯ್ಕ ಸ್ವಾಗತಿಸಿದರು. ಪ್ರೊ.ಎಂ. ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.