ಜಗಳೂರು:ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ರೂ. ವ್ಯಯಿಸುತ್ತಿರುವ ಕಾರಣ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಯಲ್ಲಿ ಸತ್ಯಾಂಶವಿಲ್ಲ. ತೊರೆ ಸಾಲು ಭಾಗವೊಂದಕ್ಕೇ 16.30 ಕೋಟಿ ರೂ. ಅನುದಾನ ನೀಡಿರುವುದು ಸರ್ಕಾರದ ಬದ್ಧತೆಗೆ ಸಾಕ್ಷಿ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ತಾಲೂಕಿನ ಚಿಕ್ಕಮಲ್ಲನ ಹೊಳೆ ಗ್ರಾಮದಲ್ಲಿ ಗುರುವಾರ 16.30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಮಹಿಳಾ ಸ್ವಾವಲಂಬನೆ ಹಾಗೂ ಬಡವರ ಹಸಿವು ನೀಗಿಸುತ್ತಿವೆ. ಇವುಗಳನ್ನು ಟೀಕಿಸುವವರು ಸಹ ಈ ಯೋಜನೆಗಳ ಪ್ರಯೋಜನದಿಂದ ದೂರ ಉಳಿದಿಲ್ಲ. ಟೀಕೆಗಳು ಆರೋಗ್ಯಕರವಾಗಿರಲಿ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು. ನಾವು ಯಾವುದೇ ಪಕ್ಷಕ್ಕೆ ಸೇರಿರಲಿ, ರಾಷ್ಟ್ರಪ್ರೇಮ, ಸಂವಿಧಾನದ ಸಂಕೇತಗಳಾದ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ದೇವರಿಗಿಂತ ಹೆಚ್ಚಾಗಿ ಗೌರವಿಸಬೇಕು. ಇತ್ತೀಚೆಗೆ ಅಧಿವೇಶನದಲ್ಲಿ ರಾಜ್ಯಪಾಲರ ಎದುರು ರಾಷ್ಟ್ರಗೀತೆ ವಿಚಾರವಾಗಿ ನಡೆದ ಘಟನೆ ಇಡೀ ರಾಜ್ಯ ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿದ್ದ ನರೇಗಾ ಯೋಜನೆಗೆ ಬೇರೊಂದು ಹೆಸರು ಇಟ್ಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಅಫ್ರಿನ್ ಬಾನು ಮಾತನಾಡಿ, ಹಿರೇ ಮಲ್ಲನಹೊಳೆಯಿಂದ ಜಿನಿಗಿಹಳ್ಳದವರೆಗೆ 50 ಮೀ ಉದ್ದದ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ ನೀರಾವರಿ ಪ್ರದೇಶ ಹೆಚ್ಚಾಗಲಿದೆ. ಜಗಳೂರು ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಶೇ.33ರಷ್ಟು ಪೂರ್ಣಗೊಂಡಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಮಾತನಾಡಿ, ಜೆಜೆಎಂ ಕಾಮಗಾರಿಯಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೇ ಅಗ್ರಸ್ಥಾನದಲ್ಲಿದೆ. ಜಗಳೂರು ತಾಲೂಕಿನ 10 ಗ್ರಾಮಗಳಲ್ಲಿ ನಿರಂತರ ನೀರು ಸರಬರಾಜು ಆಗುತ್ತಿದ್ದು, ಸಾರ್ವಜನಿಕರು ತೆರಿಗೆ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸೋಮ್ಲನಾಯ್ಕ, ಎಇಇ ಸಾದಿಕ್‌ಉಲ್ಲಾ, ಜಿಪಂ ಎಇಇ ಶಿವಮೂರ್ತಿ, ಎಇ ವಿಜಯ್‌ಕುಮಾರ್, ತಾಪಂ ಇಒ ಕೆಂಚಪ್ಪ, ಎಇಇ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಪಿಡಿಒ ಅರವಿಂದ್, ಪಲ್ಲಾಗಟ್ಟೆ ಶೇಖರಪ್ಪ, ಬಿ. ಮಹೇಶ್ವರಪ್ಪ ಮತ್ತಿತರರಿದ್ದರು.
ಕೇಂದ್ರದಿಂದ ಬಿಡಿಗಾಸೂ ಬಂದಿಲ್ಲ
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಈವರೆಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಹಿಂದೆ ತಮ್ಮದೇ ಸರ್ಕಾರವಿದ್ದಾಗ ಸಿಹಿ ಹಂಚಿ ಸಂಭ್ರಮಿಸಿದ್ದ ಬಿಜೆಪಿ ನಾಯಕರು ಈಗ ಹಣಕ್ಕಾಗಿ ಕೇಂದ್ರವನ್ನು ಏಕೆ ಪ್ರಶ್ನಿಸುತ್ತಿಲ್ಲ? ಕೇಂದ್ರ ಸರ್ಕಾರ ಕೈಜೋಡಿಸಿದರೆ ಮಾತ್ರ ಈ ಯೋಜನೆ ಪೂರ್ಣಗೊಳ್ಳಲು ಸಾಧ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.