ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ರೂ.

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಿವೃತ್ತ ಶಿಕ್ಷಕಿ ಕರಿಬಸಮ್ಮ, ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಡಾ.ಎ.ಎಚ್. ಶಿವಯೋಗಿಸ್ವಾಮಿ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಿವೃತ್ತ ಶಿಕ್ಷಕಿ ಕರಿಬಸಮ್ಮ, ಯೋಧರ ಕಲ್ಯಾಣ ನಿಧಿಗೆ 10 ಲಕ್ಷ ರೂ.ಗಳ ಚೆಕ್‌ನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಡಾ.ಎ.ಎಚ್. ಶಿವಯೋಗಿಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕಿ ಕರಿಬಸಮ್ಮ ಮಾದರಿ ಕಾರ್ಯ
  • ದಯಾಮರಣ ಹೋರಾಟಗಾರ್ತಿ
ದಾವಣಗೆರೆ : ದೇಶ ಕಾಯುವ ವೀರ ಯೋಧರ ಕಲ್ಯಾಣಕ್ಕಾಗಿ ತಮ್ಮ ಜೀವಿತಾವಧಿಯ ಸಂಪಾದನೆಯಲ್ಲಿ 10 ಲಕ್ಷ ರೂ.ಗಳನ್ನು ಧಾರೆ ಎರೆಯುವ ಮೂಲಕ ನಿವೃತ್ತ ಶಿಕ್ಷಕಿ, ದಯಾಮರಣ ಹೋರಾಟಗಾರ್ತಿ ಕರಿಬಸಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕರಿಬಸಮ್ಮ, ತಮ್ಮ ನಿವೃತ್ತಿ ವೇತನ ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಒಟ್ಟು 10 ಲಕ್ಷ ರೂ.ಗಳನ್ನು ಈ ಉದ್ದೇಶಕ್ಕೆ ಮೀಸಲಿಟ್ಟು ಸೋಮವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ‘ಭಾರತ್ ಕೆ ವೀರ್ ಕಾರ್ಪಸ್ ನಿಧಿ’ಗೆ ಈ ಮೊತ್ತವನ್ನು ಅರ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಕರಿಬಸಮ್ಮ ಸುದ್ದಿಗಾರರೊಂದಿಗೆ ಮಾತನಾಡಿ, 50 ವರ್ಷಗಳ ಹಿಂದೆ ಕೇವಲ ರೇಡಿಯೋಗಳಷ್ಟೇ ಇದ್ದ ಕಾಲದಲ್ಲಿ, ಗಡಿಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ದೇಶ ಕಾಯುವ ಸೈನಿಕರ ಕಷ್ಟಗಳ ಬಗ್ಗೆ ಕೇಳಿದ್ದೆ. ಅವರ ಪರಿಸ್ಥಿತಿ ನನ್ನ ಮನಸ್ಸನ್ನು ಕಲಕಿತ್ತು. ಅಂದಿನಿಂದಲೇ ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕು ಎಂಬ ಭಾವನೆ ಮೂಡಿತು ಎಂದು ತಿಳಿಸಿದರು.
ನಂತರದ ದಿನಗಳಲ್ಲಿ ದಯಾಮರಣದ ಹೋರಾಟಕ್ಕೆ ಧುಮುಕಿದಾಗ ಹಣದ ಅವಶ್ಯಕತೆ ಎದುರಾಯಿತು. ದಾವಣಗೆರೆಯ ಅನೇಕ ಗಣ್ಯರು ಹಣದ ಸಹಾಯ ಮಾಡಲು ಮುಂದೆ ಬಂದರೂ, ಯಾರಿಂದಲೂ ನಯಾಪೈಸೆ ಸ್ವೀಕರಿಸಲಿಲ್ಲ. ನನ್ನ ಸ್ವಂತ ಮನೆಯನ್ನೇ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ 6 ಲಕ್ಷ ರೂ.ಗಳನ್ನು ಬಿ.ಎಸ್.ಎಫ್ ನಿಧಿಗಾಗಿ ಮೀಸಲಿಟ್ಟಿದ್ದೆ. ಪಿಂಚಣಿ ಹಣದಲ್ಲಿ ಉಳಿತಾಯ ಮಾಡಿದ್ದ 4 ಲಕ್ಷ ರೂ.ಗಳನ್ನು ಸೇರಿಸಿ, ಒಟ್ಟು 10 ಲಕ್ಷ ರೂ.ಗಳನ್ನು ಸಂಪೂರ್ಣವಾಗಿ ದೇಶದ ಸೈನಿಕರ ನಿಧಿಗೆ ನೀಡಲು ನಿರ್ಧರಿಸಿದ್ದೆ ಎಂದರು.
ನಿರಂತರ ಹೋರಾಟಗಳ ಪರಿಣಾಮವಾಗಿ ನಾನು ಬಿಪಿ, ಶುಗರ್, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗಿದ್ದೆ. ಆರೋಗ್ಯದ ಏರುಪೇರಿನ ನಡುವೆಯೂ ಸೈನಿಕರಿಗೆ ಸಹಾಯ ಮಾಡಬೇಕೆಂಬ ನನ್ನ ಸಂಕಲ್ಪ ಮಾತ್ರ ಕುಗ್ಗಿಲ್ಲ. ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಿದ್ದೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ವಿಪಕ್ಷ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಕರಿಬಸಮ್ಮ ಅವರು ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಮಧ್ಯೆಯೂ, ದೇಶದ ಗಡಿ ಕಾಯುವ ವೀರ ಯೋಧರು ಹಾಗೂ ನಿವೃತ್ತ ಯೋಧರ ಯೋಗಕ್ಷೇಮಕ್ಕೆ ಸ್ಪಂದಿಸಬೇಕು ಎಂಬ ಉದಾತ್ತ ಉದ್ದೇಶದಿಂದ ಈ ಧನಸಹಾಯ ಮಾಡಿದ್ದಾರೆ. ಅವರ ಈ ಕಾರ್ಯವು ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೂ ಗಡಿ ಕಾಯಲು ಅಥವಾ ಈ ರೀತಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ನೀಡಲು ಸಾಧ್ಯವಾಗದೇ ಇರಬಹುದು. ಆದರೆ, ಪ್ರತಿಯೊಬ್ಬ ಭಾರತೀಯರೂ ಪ್ರತಿದಿನ ಮನೆಯಲ್ಲಿ ಪೂಜೆ ಮಾಡುವಾಗ, ನಮ್ಮ ದೇಶ ಕಾಯುವ ವೀರ ಯೋಧರ ರಕ್ಷಣೆ ಮತ್ತು ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಒಂದು ಹೂವನ್ನು ಸಮರ್ಪಿಸಿದರೆ, ಅದು ಕೂಡ ಯೋಧರಿಗೆ ಸಲ್ಲಿಸುವ ದೊಡ್ಡ ಗೌರವವಾಗುತ್ತದೆ ಎಂದರು. ಕರಿಬಸಮ್ಮ ಅವರ ಶಿಷ್ಯಂದಿರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net